ʼಮಣ್ಣು ನಂಬಿದರೆ ಹೊನ್ನುʼ ಎಂಬಂತೆ ಜಮೀನಿನಲ್ಲಿ ಬೆವರು ಸುರಿಸಿ ದುಡಿದರೆ ಕಷ್ಟ ಹತ್ತಿರ ಸುಳಿಯುವುದಿಲ್ಲ, ಕಲ್ಲಂಗಡಿ ಕೃಷಿಯಲ್ಲಿ ಸಿರಿ ಕಾಣಬಹುದು ಎಂಬುವುದಕ್ಕೆ ಯುವ ರೈತ ಬಕ್ಕಾರೆಡ್ಡಿ ನಾಗನಕೇರಾ ಸಾಕ್ಷಿಯಾಗಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ನಾಗನಕೇರಾ ಗ್ರಾಮದ ಯುವ ರೈತ ಬಕ್ಕಾರೆಡ್ಡಿ ಪದವಿ ಪೂರ್ವ ಶಿಕ್ಷಣ ಪೂರೈಸಿದ್ದಾರೆ. ಕೆಲಸ ಹುಡುಕಿಕೊಂಡು ಬೇರೆ ನಗರಗಳಿಗೆ ವಲಸೆ ಹೋಗದೆ ತಮ್ಮದೆ 10 ಎಕರೆ ಕೃಷಿ ಭೂಮಿಯಲ್ಲಿ ಕಲ್ಲಂಗಡಿ ಜೊತೆಗೆ ಕಬ್ಬು, ಶುಂಠಿ, ಪಪ್ಪಾಯಿ ಹೀಗೆ ಸಮಗ್ರ ಕೃಷಿ ಅಳವಡಿಸಿಕೊಂಡು ಲಕ್ಷ ಲಕ್ಷ ಆದಾಯ ಪಡೆಯುತ್ತಿದ್ದಾರೆ.
ನಾಗನಕೇರಾ ಗ್ರಾಮದ ಬಕ್ಕಾರೆಡ್ಡಿ ಅವರ ತೋಟದಲ್ಲಿ ಕಾಲಿಡುತ್ತಿದ್ದಂತೆ ದಪ್ಪನೆಯ ಕಲ್ಲಂಗಡಿ ಕಾಯಿಗಳ ಹಾಸು ಕಣ್ಣಿಗೆ ರಾಚುತ್ತವೆ. ಒಂದೊಂದು ಬಳ್ಳಿಗೆ 2 ರಿಂದ 3 ಕಲ್ಲಂಗಡಿಯ ಕಾಯಿಗಳಿದ್ದು, ಅಂದಾಜು 5 ಕೆಜಿಯಿಂದ 6 ಕೆಜೆಯವರೆಗೆ ತೂಗುತ್ತವೆ. ಹುಲುಸಾಗಿ ಬೆಳೆದ ಕಲ್ಲಂಗಡಿ 60 ದಿನಗಳಲ್ಲಿ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ಸದ್ಯ ₹7 ರಿಂದ 8 ರಂತೆ ಮಾರಾಟವಾಗುತ್ತಿದೆ.
ರೈತ ಬಕ್ಕಾರೆಡ್ಡಿ ಅವರು ಈ ಹಿಂದೆ ಬೆಂಗಳೂರು ಸೇರಿದಂತೆ ಇತರೆ ನಗರಗಳಿಗೆ ಕೆಲಸಕ್ಕಾಗಿ ತೆರಳಿದ್ದರು. ನಗರ ಜೀವನಕ್ಕೆ ಹೊಂದಿಕೊಳ್ಳಲು ಸಾಧ್ಯವಾಗದಕ್ಕೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಮರಳಿ ಮನೆಗೆ ಬಂದು 4 ವರ್ಷದಿಂದ ಕೃಷಿಯಲ್ಲಿ ಸಕ್ರಿಯರಾಗಿದ್ದಾರೆ. ಜಮೀನಿನಲ್ಲಿ ಎರಡು ಕೊಳವೆ ಬಾವಿಗಳಿದ್ದು, ಹಿರಿಯ ರೈತರ, ತೋಟಗಾರಿಕೆ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ವೈಜ್ಞಾನಿಕ ಬೇಸಾಯ ಮಾಡುತ್ತಾ ಮಾದರಿ ರೈತರಾಗಿ ಹೊರಹೊಮ್ಮಿದ್ದಾರೆ.

ಸಿದ್ಧತೆ ಮತ್ತು ಮಾರುಕಟ್ಟೆ :
ಭೂಮಿಯನ್ನು ಉಳುಮೆ ಮಾಡಿ ತಿಪ್ಪೆ ಗೊಬ್ಬರ ಸೇರಿದಂತೆ ಇತರೆ ಗೊಬ್ಬರ ಹಾಕುತ್ತಾರೆ. ಪ್ಲಾಸ್ಟಿಕ್ ಹೊದಿಕೆ (ಮಲ್ಚಿಂಗ್) ನಾಟಿ ಪದ್ಧತಿಯಲ್ಲಿ ಒಂದು ಅಡಿ ಅಂತರದಲ್ಲಿ ನರ್ಸರಿಯಿಂದ ತಂದಿರುವ ಸಸಿಗಳನ್ನು ನೆಟ್ಟಿದ್ದಾರೆ. ಹನಿ ನೀರಾವರಿಯ ಮೂಲಕ ಸಸಿಗಳಿಗೆ ನೀರೂಣಿಸಿದ್ದಾರೆ. ಕೇವಲ 30 ರಿಂದ 35 ದಿನಗಳಲ್ಲಿ ಹೂ ಮತ್ತು ಮಿಡಿ ಬಿಡುತ್ತವೆ. ಪ್ಲಾಸ್ಟಿಕ್ ಮಲ್ಚಿಂಗ್ ಪ್ರಯೋಗದಿಂದ ಕೀಟ ಬಾಧೆ ಮತ್ತು ಕಳೆ ಸಮಸ್ಯೆ ಕಡಿಮೆಯಾಗಿ ಅಧಿಕ ಇಳುವರಿ ದೊರೆಯತ್ತದೆ.
ಕಲ್ಲಂಗಡಿ ಬೆಳೆಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಇರುವುದರಿಂದ ರೈತರಿಗೆ ಅನುಕೂಲವಿದೆ. ಇನ್ನು ಹೈದರಾಬಾದ್ ಸೇರಿದಂತೆ ಇತರೆ ಕಡೆಯ ವ್ಯಾಪಾರಿಗಳು ನೇರವಾಗಿ ರೈತರ ಜಮೀನಿಗೆ ಬಂದು ಖರೀದಿಸುವ ಕಾರಣ ಮಾರಾಟದ ಬಗ್ಗೆ ಹೆಚ್ಚಿನ ಚಿಂತೆಯಿಲ್ಲ.
ʼಉಳುಮೆ, ಗೊಬ್ಬರ, ಪೋಷಕಾಂಶಗಳು, ಮಲ್ಚಿಂಗ್ ಪದ್ಧತಿ ಮತ್ತು ಕೀಟನಾಶಕ ದ್ರಾವಣ, ಕೂಲಿ ಆಳು ಖರ್ಚು ಹೀಗೆ ಒಂದೂವರೆ ಎಕರೆ ಸೇರಿ ಅಂದಾಜು ₹1 ಲಕ್ಷ ಖರ್ಚು ಬಂದಿದೆ. ಸದ್ಯ ಎಕರೆಗೆ 30 ಟನ್ ಮೇಲ್ಪಟ್ಟು ಕಲ್ಲಂಗಡಿ ಇಳುವರಿ ಬರುವ ನಿರೀಕ್ಷೆಯಿದೆ, ಎರಡು ತಿಂಗಳಲ್ಲಿ ಪ್ರತಿ ಎಕರೆಗೆ ಖರ್ಚು ತೆಗೆದು ₹2 ಲಕ್ಷ ಆದಾಯಕ್ಕೆ ಕೊರತೆ ಇಲ್ಲʼ ಎಂದು ರೈತ ಬಕ್ಕಾರೆಡ್ಡಿ ವಿವರಿಸಿದರು.
ವರ್ಷಪೂರ್ತಿ ಕಲ್ಲಂಗಡಿ ಬೆಳೆ :
ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆಯನ್ನು ರೈತರು ಹೆಚ್ಚಾಗಿ ಬೇಸಿಗೆ ಕಾಲದಲ್ಲಿ ಬೆಳೆಯುತ್ತಿದ್ದಾರೆ. ಜಿಲ್ಲೆಯ ಹವಾಗುಣ ಕಲ್ಲಂಗಡಿ ಬೆಳೆಗೆ ಅತಿ ಸೂಕ್ತವಾಗಿದೆ. ಆದರೆ ಬಕ್ಕಾರೆಡ್ಡಿ ಅವರು ವರ್ಷಪೂರ್ತಿ ಕಲ್ಲಂಗಡಿ ಬೆಳೆಯುವುದು ವಿಶೇಷವಾಗಿದೆ.
ʼಬೇಸಿಗೆ ಕಾಲದಲ್ಲಿ ಅಷ್ಟೇ ಅಲ್ಲದೆ ಮಳೆಗಾಲ, ಚಳಿಗಾಲದಲ್ಲಿ ಸಹ ಕಲ್ಲಂಗಡಿ ಬೆಳೆಯುವ ಬಕ್ಕಾರೆಡ್ಡಿ ವರ್ಷಕ್ಕೆ ನಾಲ್ಕು ಸಲ ತಮ್ಮ ಒಂದು, ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಇಳುವರಿ ತೆಗೆಯುತ್ತಾರೆ. ಆವಾಗ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಕಲ್ಲಂಗಡಿ ₹20 ರಿಂದ 25 ರಂತೆ ಮಾರಾಟವಾಗುತ್ತದೆ. ಹೀಗಾಗಿ ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ಆದಾಯ ಗಳಿಕೆಯಾಗುತ್ತದೆʼ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ :
ʼಯುವ ರೈತ ಬಕ್ಕಾರೆಡ್ಡಿ ಅವರು ಕೃಷಿಯಲ್ಲಿ ಯಶಸ್ಸು ಕಾಣುವಲ್ಲಿ ತಂದೆ ನರಸಾರೆಡ್ಡಿ ಅವರ ಪ್ರೇರಣೆ ಇದೆ. ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ನರಸಾರೆಡ್ಡಿ ಅವರು ಕೆಲ ತಿಂಗಳ ಹಿಂದೆ ಅಕಾಲಿಕ ನಿಧನರಾದರು. ಹೀಗಾಗಿ ತೆರವಾದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಗ್ರಾಮಸ್ಥರು 28 ವರ್ಷದ ಯುವಕ ಬಕ್ಕಾರೆಡ್ಡಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕೃಷಿಯಲ್ಲಿ ಉತ್ತಮ ಗಳಿಕೆ ಮೂಲಕ ಸೈ ಎನಿಸಿಕೊಂಡ ಬಕ್ಕಾರೆಡ್ಡಿ ಅವರಿಗೆ ಈಗ ಗ್ರಾಮ ಸದಸ್ಯ ಸ್ಥಾನದ ನೊಗ ಹೆಗಲೇರಿದೆ.

ಮನೆ ಹೆಸರು ʼಕೃಷಿಯಲ್ಲಿ ಕಂಡ ಸಿರಿʼ :
ರೈತ ಬಕ್ಕಾರೆಡ್ಡಿ ರೆಡ್ಡಿಗಾರು ಅವರು ಕಳೆದ ವರ್ಷ ಗ್ರಾಮದಲ್ಲಿ ಸುಂದರ ಮನೆಯೊಂದು ಕಟ್ಟಿಸಿದ್ದಾರೆ. ಮನೆಗೆ ʼಕೃಷಿಯಲ್ಲಿ ಕಂಡ ಸಿರಿʼ ಎಂದು ಹೆಸರಿಟ್ಟಿದ್ದಾರೆ.
ಈ ಅಪರೂಪ ಹೆಸರಿನ ವಿಶೇಷತೆ ಕುರಿತು ಕೇಳಿದರೆ, ʼಕೃಷಿಯಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡ ನನಗೆ ಭೂಮಿ ಕೈ ಹಿಡಿದಿದೆ. ಬಹುಬೆಳೆ ಪದ್ಧತಿ, ಅಗತ್ಯಕ್ಕೆ ತಕ್ಕಷ್ಟು ಕೀಟನಾಶಕ ಹಾಗೂ ರಸಗೊಬ್ಬರ ಬಳಕೆ, ಕಾಲಕಾಲಕ್ಕೆ ಬೆಳೆಯ ಆರೈಕೆ ಮಾಡಿದ ಫಲವಾಗಿ ಕೃಷಿಯಲ್ಲಿ ನಿರೀಕ್ಷಿತ ಲಾಭ ಗಳಿಕೆಯಾಗಿದೆ. ಕೃಷಿ ಆದಾಯ ಹಣದಿಂದಲೇ ನೂತನ ಮನೆ ಕಟ್ಟಲು ಸಾಧ್ಯವಾಗಿದೆʼ ಎಂದು ಸಂತಸ ಹಂಚಿಕೊಳ್ಳುತ್ತಾರೆ.
ಹೆಚ್ಚಳವಾದ ಕಲ್ಲಂಗಡಿ ಬೆಳೆಯುವ ಪ್ರದೇಶ :
ಬೀದರ್ ಜಿಲ್ಲೆಯಲ್ಲಿ ಕಳೆದ ವರ್ಷ ಒಟ್ಟು 820 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ತಳಿಯ ಕಲ್ಲಂಗಡಿ ಬೆಳೆಯುತ್ತಿದ್ದರು. ಪ್ರಸಕ್ತ ವರ್ಷ 1,200 ಹೆಕ್ಟೇರ್‌ಗೆ ಕಲ್ಲಂಗಡಿ ಬೆಳೆಯುವ ಪ್ರದೇಶ ಏರಿಕೆಯಾಗಿದೆ.
ಜಿಲ್ಲೆಯ ಭಾಲ್ಕಿ, ಹುಮನಾಬಾದ್, ಬೀದರ್ ಹಾಗೂ ಬಸವಕಲ್ಯಾಣ ತಾಲ್ಲೂಕಿನಲ್ಲಿ ಹೆಚ್ಚಾಗಿ ಕಲ್ಲಂಗಡಿ ಬೆಳೆಯುತ್ತಾರೆ. ಇದರಿಂದ ಅನ್ನದಾತರು ಅತ್ಯುತ್ತಮ ಇಳುವರಿ ಪಡೆಯುವ ಮೂಲಕ ಅಧಿಕ ಲಾಭ ಗಳಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ʼಕೆಲ ವರ್ಷಗಳಿಂದ ಯುವ ಕೃಷಿಕರೂ ಕಲ್ಲಂಗಡಿ ಬೆಳೆಯಲ್ಲಿ ತೊಡಗಿಸಿಕೊಂಡು ಇತರೆ ಬೆಳೆಗಾರರಿಗೆ ಮಾದರಿಯಾಗಿದ್ದಾರೆ. ಕಲ್ಲಂಗಡಿ ಬೆಳೆಯುವ ರೈತರಿಗೆ ಇಲಾಖೆಯಿಂದ ಸಬ್ಸಿಡಿಯಲ್ಲಿ ವಿವಿಧ ಸೌಲಭ್ಯ ಒದಗಿಸಿ ಪ್ರೋತ್ಸಾಹಿಸಲಾಗುತ್ತಿದೆʼ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ ಜಿಳ್ಳೆ ಹೇಳುತ್ತಾರೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.