ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2010ರಲ್ಲಿದ್ದ ಬಿಜೆಪಿ ಸರ್ಕಾರ ಮತ್ತು ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರೀ ಅವ್ಯವಹಾರ, ಭ್ರಷ್ಟಾಚಾರ ನಡೆದಿದೆ. ಭ್ರಷ್ಟಾಚಾರದ ಕುರಿತು ಸಿಒಡಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಒತ್ತಾಯಿಸಿದೆ.
ಈ ಕುರಿತು ಬೀದರ್‌ನಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಸಂಘಟನೆಯ ಕಾರ್ಯಕರ್ತರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಕಟ್ಟಡ ಮತ್ತು ಇತರೆ ನಿರ್ಮಾಣಗಳಲ್ಲಿ ಕಟ್ಟಡ ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಹೋರಾಟದ ಫಲವಾಗಿ 2007ರಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಆದರೆ, ಮಂಡಳಿಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ” ಎಂದು ಸಂಘಟನೆಯ ಕಾರ್ಯಕರ್ತರು ಆರೋಪಿಸಿದ್ದಾರೆ.
“ಮಂಡಳಿಗೆ ಕಾಮಗಾರಿ ಮುಗಿದ ನಂತರ ಸೆಸ್ಸ್ ಬರುತ್ತದೆ. ಇದಲ್ಲದೇ, ಮಂಡಳಿಯಲ್ಲಿ ಕಾರ್ಮಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಮತ್ತು ನವೀಕರಣಗೊಳಿಸಲು ವಂತಿಗೆ ತುಂಬುತ್ತಾರೆ. 2007ರಿಂದ ಇಲ್ಲಿಯವರೆಗೆ 13,000 ಕೋಟಿ ರೂ. ಹಣ ಮಂಡಳಿಗೆ ಸಂಗ್ರಹವಾಗಿದೆ. ಆದರೆ, 2010ರ ಅವಧಿಯಲ್ಲಿದ್ದ ಬಿಜೆಪಿ ಸರ್ಕಾರ ಮಂಡಳಿಯ ಹಣವನ್ನು ಲೂಟಿ ಮಾಡಿದೆ. ಅದೇ ರೀತಿ, ಈ ಹಿಂದೆ ಇದ್ದ ಬಿಜೆಪಿ ಸರ್ಕಾರವೂ ಕೂಡ ಲ್ಯಾಪ್‌ಟಾಪ್ ಖರೀದಿ ಮತ್ತು ಆರೋಗ್ಯ ತಪಾಸಣೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದೆ” ಎಂದು ದೂರಿದ್ದಾರೆ.
“ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಒಬ್ಬ ಕಾರ್ಮಿಕನಿಗೆ 2,850 ರೂ. ನಿಗದಿ ಮಾಡಿ ಹಣ ಲೂಟಿ ಮಾಡಲಾಗಿದೆ. ಪ್ರತಿ ಜಿಲ್ಲೆಗೆ 33,000 ಕಾರ್ಮಿಕರಿಗೆ ಆರೋಗ್ಯ ತಪಾಸಣೆ ನೆಪದಲ್ಲಿ ಪ್ರತಿ ಜಿಲ್ಲೆಯಲ್ಲಿ ರೂ. 9.45 ಕೋಟಿ 00 ಕೋಟಿ ಹಣ ದುಂದು ವೆಚ್ಚ ಮತ್ತು ಲೂಟಿಯಾಗಿದೆ. ಆದರೆ, ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ದೊರೆತಿಲ್ಲ” ಎಂದು ಕಿಡಿಕಾರಿದ್ದಾರೆ.
“ಪ್ರಸ್ತುತ ಸರ್ಕಾರದಲ್ಲಿ ಸಂತೋಷ ಲಾಡ್ ಅವರು ಕಾರ್ಮಿಕ ಮಂತ್ರಿಯಾಗಿದ್ದಾರೆ. ಅವರ ನೇತೃತ್ವದಲ್ಲಿ ಲ್ಯಾಪ್‌ಟಾಪ್ ಖರೀದಿ ಮತ್ತು ವೈದ್ಯಕೀಯ ತಪಾಸಣೆ ನಡೆಸಲು ಕಾರ್ಮಿಕ ಇಲಾಖೆ ಮುಂದಾಗಿದೆ. ಈಗಿನ ಸರ್ಕಾರ ಲ್ಯಾಪ್‌ಟಾಪ್ ಖರೀದಿ ಮಾಡಿರುವ ಪ್ರಕ್ರಿಯೆ ಕೂಡ ಸಿಒಡಿ ತನಿಖೆಗೆ ಒಳಪಡಿಸಬೇಕು. ಈಗಿನ ಸರ್ಕಾರ ಪುನಃ ವೈದ್ಯಕೀಯ ತಪಾಸಣೆ ಮಾಡುವುದನ್ನು ನಿಲ್ಲಿಸಬೇಕು. ವೈದ್ಯಕೀಯ ತಪಾಸಣೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಬೇಕು” ಎಂದು ಸಂಘಟನೆ ಒತ್ತಾಯಿಸಿದೆ.
ಈ ವೇಳೆ, ಸಂಘಟನೆಯ ಜಿಲ್ಲಾಧ್ಯಕ್ಷ ಎಂ.ಡಿ. ಶಫಾಯತ್‌ಅಲಿ, ಬಾಬುರಾವ ಹೊನ್ನಾ, ಅಲಿ ಅಹಮದಖಾನ್, ನಜೀರ ಅಹ್ಮದ್, ಸುನೀಲ ವರ್ಮಾ, ಪ್ರಭು ಹೊಚಕನಳ್ಳಿ, ಪ್ರಭು ತಗಣಿಕರ್, ನನ್ನೆಸಾಬ್, ಪಪ್ಪುರಾಜ ಮೇತ್ರೆ, ಇಮಾನವೇಲ್ ಗಾದಗಿ, ಚಾಂದೋಬಾ ಭೋಸ್ಲೆ, ಭೀಮಣ್ಣಾ ಭಂಡೆ, ಗೋವಿಂದ ಅರ್ಜುನ ಭೋಸ್ಲೆ, ಚಾಂದೂಬಾ ಭೋಸ್ಲೆ, ರಾಮಣ್ಣಾ ಅಲ್ಮಾಸಪೂರ, ಮೋಹಿದ್‌ಮಿಯ್ಯಾ, ತುಕಾರಾಮ ಉಪಾರ, ಶಿವರಾಜ ಕಮಠಾಣಾ, ಭದ್ರೇಶ ಉಪಾರ, ರಮೇಶ ಮನ್ನಾಏಖೇಳ್ಳಿ, ವಿಜಯಕುಮಾರ ಉಪಾರ ಸೇರಿದಂತೆ ಇತರರು ಇದ್ದರು.