ವಾಸ್ತವಿಕ ಬದುಕಿನ ಜೊತೆಗೆ ವಿಶ್ವಮಾನವ ಸಂದೇಶ ವಿಸ್ತಾರದ ಮೇಲೆ ಹೆಚ್ಚಿನ ಪ್ರೀತಿ ಹೊಂದಿರುವ ಕುವೆಂಪು ಅವರ ವೈಚಾರಿಕ ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳು ಹೆಚ್ಚೆಚ್ಚು ತಿಳಿದುಕೊಳ್ಳಬೇಕು ಎಂದು ಕವಿ, ಪತ್ರಕರ್ತ ಬಾಲಾಜಿ ಕುಂಬಾರ ಅಭಿಪ್ರಾಯಪಟ್ಟರು.
ಔರಾದ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ ವಿಶೇಷ ಉಪನ್ಯಾಸ ಸಮಾರಂಭದಲ್ಲಿ ಅವರು ಮಾತನಾಡಿದರು.
ʼಕುವೆಂಪು ಅವರು 1974ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಮಾಡಿರುವ ‘ವಿಚಾರ ಕ್ರಾಂತಿಗೆ ಆಹ್ವಾನ’ ಭಾಷಣ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಕಿಚ್ಚು ಹೊತ್ತಿಸುವಂತಿತ್ತು. ಐವತ್ತು ವರ್ಷಗಳ ಹಿಂದೆ ಮಾಡಿದ ಭಾಷಣ ಪ್ರಸ್ತುತ ಸಮಾಜದ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಂತಿದೆ. ಕುವೆಂಪು ಅವರ ವಿಶ್ವಮಾನವ ಸಂದೇಶ ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಂಡರೆ ವೈಚಾರಿಕ ಮನೋಭಾವ ಬೆಳೆಯಲು ಸಾಧ್ಯವಾಗುತ್ತದೆʼ ಎಂದರು.

ಔರಾದ್ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಓಂಪ್ರಕಾಶ ದಡ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼವಿದ್ಯಾರ್ಥಿಗಳು ಸಾಹಿತ್ಯದ ಕುರಿತು ಅಭಿರುಚಿ ಹೊಂದಬೇಕು. ಕಥೆ, ಕವನ, ನಾಟಕ, ಗೀತೆಗಳ ರಚನೆ ಕುರಿತು ತಿಳಿದುಕೊಂಡು ಸ್ವತಃ ಸಾಹಿತ್ಯ ರಚನೆಯತ್ತ ಮುನ್ನಡೆಯಬೇಕುʼ ಎಂದರು.
ಕಸಾಪ ಅಧ್ಯಕ್ಷ ಬಿ.ಎಂ ಅಮರವಾಡಿ ಮಾತನಾಡಿ, ʼಕುವೆಂಪು ಪ್ರತಿಪಾದಿಸಿದ ಪಂಚಮಂತ್ರಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯನ್ನು ಯುವ ಸಮೂಹ ಮೈಗೂಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಪ್ರೀತಿ ನೆಲೆಸಬೇಕಾದರೆ ಕುವೆಂಪು ಅವರ ಪಂಚಮಂತ್ರ ಅತಿ ಅವಶ್ಯಕವಾಗಿವೆʼ ಎಂದರು.
ಹಿರಿಯ ಸಾಹಿತಿ ಜಗನ್ನಾಥ ಮೂಲಗೆ, ಕಾಲೇಜು ಪ್ರಾಚಾರ್ಯೆ ಪ್ರೊ.ಅಂಬಿಕಾದೇವಿ ಕೋತಮಿರ್, ಚಕೋರ ಸಾಹಿತ್ಯ ವೇದಿಕೆ ಸಂಚಾಲಕಿ ಡಾ. ಮಕ್ತುಂಬಿ ಎಂ. ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ʼಸಂವಿಧಾನ ಯುವಯಾನʼ ಬೈಕ್ ಜಾಥಾಕ್ಕೆ ಸ್ವಾಗತ
ಚಕೋರ ವೇದಿಕೆ ಸಂಚಾಲಕ ಅಜಿತ್ ನೇಳಗಿ, ಕಾಲೇಜಿನ ಉಪನ್ಯಾಸಕರಾದ ವಿನಾಯಕ ಕೋತಮಿರ್, ಸಂಜುಕುಮಾರ್ ತಾಂದಳೆ, ದಯಾನಂದ ಬಾವಗೆ, ಸುನೀಲ ಮಾಳಗೆ, ಸುಬ್ಬಣ್ಣ ಮೂಲಗೆ, ನರಸಪ್ಪ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.