ಬೀದರ್‌ನಲ್ಲಿ ಹೊಸ ಮಾದರಿ ಮಾರುಕಟ್ಟೆ ನಿರ್ಮಿಸಬೇಕು ಎಂದು ಗಾಂಧಿ ಗಂಜ್‍ನ ದಿ ಗ್ರೇನ್ ಆ್ಯಂಡ್ ಸೀಡ್ಸ್ ಮರ್ಚಂಟ್ಸ್ ಅಸೋಸಿಯೇಷನ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಅಸೋಸಿಯೇಷನ್ ಪದಾಧಿಕಾರಿಗಳು ಬುಧವಾರ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಈ ಕುರಿತು ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ʼಸದ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾರುಕಟ್ಟೆ ಪ್ರಾಂಗಣ ಕಿರಿದಾಗಿದೆ. ಸುಗ್ಗಿ ಕಾಲದಲ್ಲಿ ಕೆಲವೊಮ್ಮೆ ನಡೆಯಲು ಸಹ ಜಾಗ ಇಲ್ಲದಂಥ ಪರಿಸ್ಥಿತಿ ಎದುರಾಗುತ್ತಿದೆ. 30 ಎಕರೆಯಲ್ಲಿ ಇರುವ ಮಾರುಕಟ್ಟೆ ಬೀದರ್‍ನ ವಾಣಿಜ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿದೆ. ಅಂದು ಕೃಷಿ ಉತ್ಪನ್ನಗಳ ಆವಕ ಹಾಗೂ ವ್ಯಾಪಾರಿಗಳ ಸಂಖ್ಯೆಗೆ ಅನುಗುಣವಾಗಿ ಮಾರುಕಟ್ಟೆ ಸ್ಥಾಪಿಸಲಾಗಿದೆ. ಈಗ ವ್ಯಾಪಾರ ಚಟುವಟಿಕೆ ಹೆಚ್ಚಾಗಿದ್ದು, ಮಾರುಕಟ್ಟೆ ಸಾಕಾಗುತ್ತಿಲ್ಲʼ ಎಂದು ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಧನ್ನೂರ ಗಮನ ಹೇಳಿದರು.
ಕನಿಷ್ಠ 100 ಎಕರೆಯ ಹೊಸ ಮಾರುಕಟ್ಟೆ ಸ್ಥಾಪನೆ ತೀರಾ ಅವಶ್ಯಕವಾಗಿದೆ. ಒಂದು ದಶಕದಿಂದ ಇದಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತ ಬರಲಾಗುತ್ತಿದೆ. ಸರ್ಕಾರಕ್ಕೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಲಾಗಿದೆ.ಈಗಲಾದರೂ ನೂತನ ಹಾಗೂ ಸುಸಜ್ಜಿತ ಮಾರುಕಟ್ಟೆಯ ಬಹು ದಿನಗಳ ಕನಸು ನನಸಾಗಿಸಬೇಕು. ಜಿಲ್ಲೆಯ ರೈತರ ಹಾಗೂ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಬಿಜೆಪಿ ಪಕ್ಷದಿಂದ ಮಾತ್ರ ದಲಿತರ ಉದ್ದಾರ ಸಾಧ್ಯ : ಛಲವಾದಿ ನಾರಾಯಣಸ್ವಾಮಿ
ನಿಯೋಗದಲ್ಲಿ ಅಸೋಸಿಯೇಷನ್ ಉಪಾಧ್ಯಕ್ಷ ನಾಗಶೆಟ್ಟೆಪ್ಪ ದಾಡಗಿ, ಕಾರ್ಯದರ್ಶಿ ಭಗವಂತ ಔದತ್ತಪುರ, ಸಹ ಕಾರ್ಯದರ್ಶಿ ನಾಗಶೆಟ್ಟಿ ಕಾರಾಮುಂಗಿ, ಖಜಾಂಚಿ ಬಂಡೆಪ್ಪ ಗಡ್ಡೆ, ಹಿರಿಯ ವ್ಯಾಪಾರಿಗಳಾದ ಅಣ್ಣಾರಾವ್ ಮೊಗಶೆಟ್ಟಿ, ಮಲ್ಲಿಕಾರ್ಜುನ ಹತ್ತಿ, ಚಂದ್ರಪ್ಪ ಹಳ್ಳಿ, ವೀರಭದ್ರಪ್ಪ ಪಾಟೀಲ ಕನ್ನಳ್ಳಿ, ಗೋವಿಂದರಾವ್ ನೀಲಮನಳ್ಳಿ, ವಿವೇಕಾನಂದ ಧನ್ನೂರ, ಗುಂಡಪ್ಪ ಎಮ್ಮೆ, ನಾಗರಾಜ ನಂದಗಾಂವ್, ಪ್ರಶಾಂತ ಉದಗಿರೆ, ಗಿರೀಶ್ ಪಾಟೀಲ, ರಾಜಕುಮಾರ ಹಜ್ಜರಗಿ, ಪ್ರಕಾಶ ಗೌಡಪ್ಪನೋರ್ ಇದ್ದರು.