ಬೀದರ ತಾಲ್ಲೂಕಿನ ಅಲಿಯಾಬಾದ್ ಗ್ರಾಮ ಪಂಚಾಯತ್‌ನಲ್ಲಿ ನಿರ್ಮಿಸಿದ ಅರಿವು ಕೇಂದ್ರ ಬೇಸಿಗೆಯಲ್ಲಿ ಮಕ್ಕಳಿಗೆ ಆಟ, ಓದು ಹಾಗೂ ಕೌಶಲ್ಯ ತರಬೇತಿ ತಾಣವಾಗಿ ಮಾರ್ಪಟ್ಟಿದೆ.
ಅರಿವು ಕೇಂದ್ರದಲ್ಲಿ ದಿನಪತ್ರಿಕೆಗಳು ಸೇರಿದಂತೆ ಕಥೆ ಕಾದಂಬರಿ, ಕಲೆ, ಸಾಹಿತ್ಯ, ನಾಟಕ, ಇತಿಹಾಸ, ಆರೋಗ್ಯ, ಕೃಷಿ, ಶಿಕ್ಷಣ, ಪಠ್ಯ ಪುಸ್ತಕ, ವಿಜ್ಞಾನ, ಚರಿತ್ರೆ, ಕಾನೂನು, ಪಂಚಾಯತ್ ರಾಜ್, ಸ್ಪರ್ಧಾತ್ಮಕ ಪುಸ್ತಕಗಳು ಸೇರಿದಂತೆ ಒಟ್ಟಾರೆ 4 ಸಾವಿರ ಪುಸ್ತಕಗಳಿವೆ.
ಮಕ್ಕಳು ದಿನಪತ್ರಿಕೆ, ಪುಸ್ತಕ ಓದುವ ಹವ್ಯಾಸ ಬೆಳೆಸುವ ಜೊತೆಗೆ ಕಂಪ್ಯೂಟರ್, ಪೇಂಟಿಂಗ್ ತರಬೇತಿ ಸಹ ನೀಡಲಾಗುತ್ತದೆ. ದೇಸಿ ಕ್ರೀಡೆಗಳ ಝಲಕ್ ಸಹ ಇಲ್ಲಿ ನೋಡಲು ಸಿಗುತ್ತದೆ. ರೈತರ, ಕೂಲಿ ಕಾರ್ಮಿಕರ, ನರೇಗಾ ಕಾರ್ಮಿಕರ ಮಕ್ಕಳಿಗಾಗಿ ಈ ಬೇಸಿಗೆ ಶಿಬಿರ ಆಯೋಜಿಸಲಾಗಿದ್ದು, ಮಕ್ಕಳಿಗೆ ಆಟ, ಪಾಠದ ಜೊತೆಗೆ ತಂತ್ರಜ್ಞಾನ ತರಬೇತಿ, ಐತಿಹಾಸಿಕ ಪರಂಪರೆ ಕಲಿಸುವ ಪ್ರಯತ್ನ ಮುಂದುವರೆದಿದೆ.

ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಬೀದರ ಕೋಟೆ, ಕರೇಜ್, ಪಾಪನಾಶ ಕೆರೆ ಸೇರಿದಂತೆ ವಿವಿಧ ಐತಿಹಾಸಿಕ ಸ್ಥಳಗಳಿಗೆ ಭೇಟಿ ಮಾಹಿತಿ ನೀಡಲಾಗಿದೆ. ಮಕ್ಕಳೆಲ್ಲರೂ ಅಲ್ಲೇ ವನಭೋಜನ ಸವಿದದ್ದು ವಿಶೇಷವಾಗಿತ್ತು.
’15ನೇ ಹಣಕಾಸು ಯೋಜನೆಯ ಆರ್‌ಡಿಪಿಆರ್‌ನ ಓದು ಬೆಳಕು ಯೋಜನೆಯಡಿ ಈ ಅರಿವು ಕೇಂದ್ರ ಸ್ಥಾಪಿಸಲಾಗಿದ್ದು. ಗ್ರಾಮೀಣ ಭಾಗದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಧ್ಯೇಯದೊಂದಿಗೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ್ ಬದೋಲೆ ಹೇಳಿದರು.
ಇದನ್ನೂ ಓದಿ : ಗುಲಬರ್ಗಾ ವಿವಿ ಕರ್ಮಕಾಂಡ-3: ಮೂರು ವರ್ಷಗಳಿಂದ 9,024 ಫಲಿತಾಂಶ ಪೆಂಡಿಂಗ್!

ಅಲಿಯಾಬಾದ್ ಗ್ರಾಮ ಪಂಚಾಯಿತಿ ಪಿಡಿಒ ಶರತ್‌ಕುಮಾರ್ ಮಾತನಾಡಿ, ‘ಅರಿವು ಕೇಂದ್ರದಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ದಿನನಿತ್ಯ ಸಾಕಷ್ಟು ಮಕ್ಕಳು ಇಲ್ಲಿಗೆ ಓದಲು ಬರುತ್ತಿರುವುದು ಕಂಡು ಖುಷಿ ತರಿಸಿದೆ’ ಎಂದು ಹೇಳಿದರು.