ಕನ್ನಡ ರಕ್ಷಣೆಗೆ ಹೋರಾಡುವ ಹೋರಾಟಗಾರರ ಬಂಧನವನ್ನು ಖಂಡಿಸಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯಿಂದ ಬೀದರ್ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
“ಕರ್ನಾಟಕದಲ್ಲಿ ಕನ್ನಡವೇ ತಾಯಿ. ಆದರೆ, ಸರ್ಕಾರದ ಕಾರ್ಯ ವೈಖರಿಯಿಂದ ಧೋರಣೆ ಉಂಟಾಗಿರುವುದು ದುರ್ದೈವದ ಸಂಗತಿ. ಬೆಂಗಳೂರಿನಲ್ಲಿ ಐಟಿಬಿಟಿ ಕಂಪನಿಗಳು, ಹೊರನಾಡಿನಿಂದ ಬಂದ ವ್ಯಾಪರಿಗಳ ಅಂಗಡಿಗಳ ಮೇಲೆ ಕನ್ನಡ ಹೊರತು ಪಡಿಸಿ ಬೇರೆ ಭಾಷೆಯ ನಾಮಫಲಕಗಳು ರಾರಾಜಿಸುತ್ತಿರುವಾಗ ಕರ್ನಾಟಕ ಸರ್ಕಾರ, ಕನ್ನಡ ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರಿಗಳು ಕುಂಭಕರಣನಂತೆ ನಿದ್ರೆಗೆ ಜಾರಿವೆ. ಆದ್ದರಿಂದ ಕನ್ನಡಪರ ಸಂಘಟನೆಗಳು ಜಾಗೃತರಾಗಿ ಅನ್ಯಭಾಷೀಯ ನಾಮಫಲಕಗಳನ್ನು ಕಿತ್ತು ಹಾಕಿರುವುದು ಹೆಮ್ಮೆಯ ಸಂಗತಿ. ಆದರೆ ಕರ್ನಾಟಕ ಸರ್ಕಾರ ಅವರನ್ನು ಬಂಧಿಸಿ, ಜೈಲಿಗೆ ಹಾಕಿರುವುದು ಬ್ರಿಟೀಷರು ಸ್ವಾತಂತ್ರ್ಯ ಸೈನಾನಿಗಳ ಮೇಲೆ ದಬ್ಬಾಳಿಕೆ ಮಾಡಿದಂತಾಗಿದೆ. ಇದು ಕರ್ನಾಟಕ ಸರ್ಕಾರವೇ, ಕನ್ನಡ ವಿರೋಧಿ ಸರ್ಕಾರವೇ ತಿಳಿಯದಾಗಿದೆ” ಎಂದು ಸಂಘಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
“ಬೆಂಗಳೂರಿನಲ್ಲಷ್ಟೇ ಅನ್ಯ ಭಾಷೆಯ ನಾಮಫಲಕಗಳಿಲ್ಲ. ನಮ್ಮ ಬೀದರ್ ಜಿಲ್ಲೆಯಲ್ಲಿಯೂ ಕನ್ನಡವನ್ನು ನಿರ್ಲಕ್ಷಿಸಲಾಗಿದೆ. ಎರಡು ತಿಂಗಳೊಳಗೆ ಈ ಎಲ್ಲ ನಾಮಫಲಕಗಳ ಮೇಲೆ ಕನ್ನಡ ರಾರಾಜಿಸಬೇಕು. ಇಲ್ಲವಾದಲ್ಲಿ ಬೀದರ್ ಜಿಲ್ಲೆಯಲ್ಲಿ ಬೀದಿ ಹೋರಾಟಕ್ಕೆ ಇಳಿಯಲು ಸರ್ಕಾರ ಮತ್ತು ಜಿಲ್ಲಾಡಳಿತವೇ ಅವಕಾಶ ಕಲ್ಪಿಸಿದಂತಾಗುತ್ತದೆ. ಬೆಂಗಳೂರಿನಲ್ಲಿ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಶೀಘ್ರ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಕ್ರಮ ಖಂಡಿಸಿ ಹೋರಾಟ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮದ್ಯದಗಂಡಿ ತೆರವಿಗೆ ರೈತ ಸಂಘ ಆಗ್ರಹ
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಅನಂತರೆಡ್ಡಿ ಟಿ ಮಿರ್ಜಾಪೂರ, ಪ್ರಧಾನ ಕಾರ್ಯದರ್ಶಿ ಬಕ್ಕಪ್ಪಾ ನಾಗೂರಾ, ಕಾರ್ಯದರ್ಶಿ ವಿದ್ಯಾಸಾಗರ, ವಿಶ್ವನಾಥ ಉಪ್ಪೆ, ರಮೇಶ ಬಿರಾದಾರ, ಅನಿಲ್ ಕುಮಾರ್, ಅಟಂಗೆ ಶಿವಾಜಿ ದದ್ದಾಪುರ್, ಶಂಕರ್ ರಾವ್ ಸಜ್ಜನ್, ನಾಗೇಶ್ ಕುಮಾರ್ ಇದ್ದರು.