ಬೆಳಗಾವಿ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸಿರುವ ಎಲ್ಲ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ನಮ್ಮ ಕರ್ನಾಟಕ ಸೇನೆ ಆಗ್ರಹಿಸಿದೆ.
ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಪಾಟೀಲ ಜ್ಯಾಂತಿ ನೇತೃತ್ವದಲ್ಲಿ ಪದಾಧಿಕಾರಿಗಳು ನಗರದಲ್ಲಿ ಸೋಮವಾರ ಮುಖ್ಯಮಂತ್ರಿಗಳ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
‘ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವುದು ತೀವ್ರ ಖಂಡನೀಯ. ಹಲ್ಲೆ ಪ್ರಕರಣದ 20 ಆರೋಪಿಗಳ ಪೈಕಿ ಐವರನ್ನು ಮಾತ್ರ ಬಂಧಿಸಿದ್ದು, ಇನ್ನೂ 15 ಜನ ರಾಜಾರೋಷವಾಗಿ ತಿರುಗುತ್ತಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವ ಬದಲು ಬಸ್ ನಿರ್ವಾಹಕನ ವಿರುದ್ಧವೇ ಪೋಸ್ಕೊ ಅಡಿಯಲ್ಲಿ ಪ್ರಕರಣ ದಾಖಲಿಸಿರುವುದು ಅನ್ಯಾಯವಾಗಿದೆ’ ಎಂದರು.
‘ಎಂಎಎಸ್ ಕಾರ್ಯಕರ್ತರು ಮಹಾರಾಷ್ಟ್ರದಲ್ಲಿ ರಾಜ್ಯದ ಬಸ್‍ಗಳಿಗೆ ಕಪ್ಪು ಮಸಿ ಬಳಿದು, ನಾಲಿಗೆ ಹರಿಯಬಿಟ್ಟಿದ್ದು, ದಿನೇ ದಿನೇ ಇವರ ದಬ್ಬಾಳಿಕೆ ಹೆಚ್ಚುತ್ತಿದೆ’ ಎಂದು ಆರೋಪಿಸಿದರು.
‘ರಾಜ್ಯದ ಗಡಿಯಲ್ಲಿ ಅಶಾಂತಿ ಉಂಟು ಮಾಡುತ್ತಿರುವ ಎಂಇಎಸ್ ಅನ್ನು ರದ್ದುಪಡಿಸಬೇಕು. ಬಸ್ ನಿರ್ವಾಹಕನ ವಿರುದ್ಧ ಪೋಸ್ಕೊ ಅಡಿ ದಾಖಲಿಸಿರುವ ಪ್ರಕರಣ ವಾಪಸ್ ಪಡೆಯಬೇಕು. ಕರ್ನಾಟಕ ವಿರೋಧಿ ಕೃತ್ಯಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಜು ಯಾದವ್, ಕಾರ್ಯಜರ್ಶಿ ಜಿತೇಂದ್ರ ರಾಠೋಡ್, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಅನಿಲ್ ರಾಜಗೀರಾ, ಸಾಯಿನಾಥ ಕಾಳೇಕರ್, ಕೃಷ್ಣಾ ತೆಲಂಗ್ ಮತ್ತಿತರರು ಇದ್ದರು.