ಬೀದರ್‌ನಲ್ಲಿ ಗುರುವಾರ ಬೆಳಗ್ಗೆ ಎಸ್‌ಬಿಐ ಎಟಿಎಂಗೆ ಹಣ ತುಂಬಿಸುವ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ ಹಣದೊಂದಿಗೆ ಪರಾರಿಯಾಗಿದ್ದ ಆರೋಪಿಗಳು ಹೈದರಾಬಾದ್‌ನಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಹಿಡಿಯುವ ವೇಳೆ ಮತ್ತೆ ಗುಂಡು ಹಾರಿಸಿ ಮತ್ತೆ ತಪ್ಪಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಬೀದರ್‌ನಲ್ಲಿ ಬೆಳಗ್ಗೆ 10:55 ಗಂಟೆ ಸುಮಾರಿಗೆ ನಗರದ ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಎಟಿಎಂಗೆ ಹಣ ತುಂಬಿಸಲು ಬ್ಯಾಂಕ್ ಸಿಬ್ಬಂದಿ ತೆರಳಿದ್ದಾಗ, ದರೋಡೆಕೋರರು ಗುಂಡು ಹಾರಿಸಿ ಹಣದ ಸಮೇತ ಬೈಕ್ ಮೇಲೆ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳ ಬೆನ್ನುಬಿದ್ದಿದ್ದ ಪೊಲೀಸರು, ಸುಳಿವು ಆಧರಿಸಿ ಹೈದರಾಬಾದ್‌ನಲ್ಲಿ ಶೋಧ ನಡೆಸುತ್ತಿರುವ ವೇಳೆ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಅಲ್ಲಿಯೂ ಆರೋಪಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಬಸ್ ಟ್ರಾವೆಲ್ ಮ್ಯಾನೇಜರ್ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಬೀದರ್‌ನಲ್ಲಿ ಹಣ ದೋಚಿಕೊಂಡು ಬಂದಿದ್ದ ಆರೋಪಿಗಳು ಹೈದರಾಬಾದ್ ಮೂಲಕ ಛತ್ತೀಸ್ಗಢದ ರಾಯಪುರಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಅದಕ್ಕಾಗಿ ಮೂವರು ದುಷ್ಕರ್ಮಿಗಳು ಅಪಫಜಲ್ ಗಂಜ್ ಸಮೀಪದ ಖಾಸಗಿ ಬಸ್ ಟ್ರಾವೆಲ್ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಸಂಜೆ 7.15ಕ್ಕೆ ಬಸ್ ಹೊರಡಬೇಕಿತ್ತು. ಅದಕ್ಕೂ ಮೊದಲು ಆರೋಪಿಗಳನ್ನು ಬಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
#WATCH | Hyderabad, Telangana: East Zone DCP B Bala Swamy says, " Today around 7:15 a firing incident happened in the area under Afzalgung PS. Some unknown person came to the travels and booked the tickets but while boarding the bus, the ticket manager spoke to them as he felt… pic.twitter.com/Ii09toSQsd
— ANI (@ANI) January 16, 2025
ಬ್ಯಾಗ್ಗಳಲ್ಲಿ ಭಾರೀ ಪ್ರಮಾಣದಲ್ಲಿ ಹಣ ಕಂಡು ಬಂದಿದೆ. ಇದನ್ನು ಸಿಬ್ಬಂದಿ ಪ್ರಶ್ನಿಸಿದಾಗ ಅವರಿಗೇ ಸ್ವಲ್ಪ ಹಣ ನೀಡಲು ಮುಂದಾಗಿದ್ದಾರೆ. ಈ ವೇಳೆ, ಅದೇ ಪಿಕಪ್ ವ್ಯಾನ್ನಲ್ಲಿ ಇದ್ದ ಕರ್ನಾಟಕ ಪೊಲೀಸರು ಇದನ್ನ ಗಮನಿಸಿದ್ದಾರೆ.
ಪೊಲೀಸರು ಎಂದು ತಿಳಿದ ತಕ್ಷಣವೇ ಆರೋಪಿಗಳು ತಮ್ಮ ಬ್ಯಾಗ್ನಲ್ಲಿದ್ದ ಬಂದೂಕುಗಳಿಂದ ಗುಂಡು ಹಾರಿಸಿದ್ದಾರೆ. ಇದರಿಂದ ಟ್ರಾವೆಲ್ ಏಜೆನ್ಸಿ ಮ್ಯಾನೇಜರ್ ಹೊಟ್ಟೆಗೆ ಬುಲೆಟ್ ಹೊಕ್ಕಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೈದ್ರಾಬಾದ್ ಆಸ್ಪತ್ರೆಗೆ ಸಚಿವ ಈಶ್ವರ ಖಂಡ್ರೆ ಭೇಟಿ :
ಬೀದರ್‌ನಲ್ಲಿ ಗುರುವಾರ ನಡೆದ ಎಸ್‌ಬಿಐ ಬ್ಯಾಂಕ್ ದರೋಡೆ ದಾಳಿಯಲ್ಲಿ ಗಿರಿ ವೆಂಕಟೇಶ್ ಎಂಬ ಭದ್ರತಾ ಸಿಬ್ಬಂದಿ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದು, ಲಾಡಗೇರಿಯ ಶಿವಕುಮಾರ್ ಎಂಬ ಮತ್ತೊಬ್ಬ ಭದ್ರತಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡು ಹೈದ್ರಾಬಾದ್‌ನ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಗುರುವಾರ ರಾತ್ರಿ ಸುಮಾರು 9 ಗಂಟೆಗೆ ಬೆಂಗಳೂರಿನಿಂದ ಹೈದ್ರಾಬಾದ್‌ಗೆ ಆಗಮಿಸಿ, ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಶಿವಕುಮಾರ್ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು. ನಂತರ, ಚಿಕಿತ್ಸೆಯ ಕುರಿತು ವೈದ್ಯರೊಂದಿಗೆ ಸುದೀರ್ಘ ಮಾತುಕತೆ ನಡೆಸಿ, ಚಿಕಿತ್ಸೆ ವೆಚ್ಚದ ಬಗ್ಗೆ ಯಾವುದೇ ಚಿಂತೆ ಮಾಡಬೇಡಿ ಎಂದು ಆಶ್ವಾಸನೆ ನೀಡಿದರು.

ಶಿವಕುಮಾರ್ ಅವರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದರು. ಅವರ ಆರೋಗ್ಯದ ಸ್ಥಿತಿಗತಿಯನ್ನು ವಿವರವಾಗಿ ವಿಚಾರಿಸಿದರು. ವೈದ್ಯರು ಶಿವಕುಮಾರ್ ಶೀಘ್ರ ಗುಣಮುಖರಾಗುವ ಬಗ್ಗೆ ಭರವಸೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಎಟಿಎಂ ದರೋಡೆ ಪ್ರಕರಣ : ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆ ಸತ್ತಿದೆ ಎಂದ ಭಗವಂತ ಖೂಬಾ
ದುರಂತಕ್ಕೆ ಕಾರಣವಾದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಗಾಯಾಳು ಮತ್ತು ಮೃತರ ಕುಟುಂಬಗಳಿಗೆ ಅಗತ್ಯ ಸಕಾಲಿಕ ನೆರವು ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.