ಬಸವಕಲ್ಯಾಣ ನಗರದ ತಾಲ್ಲೂಕು ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯ ಡಾ.ಮಹಾದೇವಪ್ಪ ಅವರ ಮೇಲೆ ರೋಗಿಯೊಂದಿಗೆ ಬಂದಿದ್ದ ಕೆಲವರು ಹಲ್ಲೆ ನಡೆಸಿರುವುದನ್ನು ಖಂಡಿಸಿದ ವೈದ್ಯರು, ಸಿಬ್ಬಂದಿ ಶನಿವಾರ ಕೆಲಕಾಲ ಆಸ್ಪತ್ರೆ ಬಂದ್ ಮಾಡಿ ಪ್ರತಿಭಟಿಸಿದರು.
ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಅಪರ್ಣಾ ಮಹಾನಂದ ಮಾತನಾಡಿ, ʼಆಸ್ಪತ್ರೆಯ ಗೇಟ್ ವಿಷಯ ತೆಗೆದು ರಾತ್ರಿ 12.45ಕ್ಕೆ ರೋಗಿಯೊಂದಿಗೆ ಬಂದಿದ್ದ ನಾಲ್ವರು ರೋಗಿಯ ತಪಾಸಣೆ ನಡೆಸುತ್ತಿದ್ದರೂ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಆಸ್ಪತ್ರೆಗೆ ರಕ್ಷಣಾ ಸಿಬ್ಬಂದಿ, ಕಾವಲುಗಾರರನ್ನು ನೇಮಿಸಬೇಕುʼ ಎಂದು ಆಗ್ರಹಿಸಿದರು.
ʼಅನೇಕ ವರ್ಷಗಳಿಂದ ಇಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಇಂಥ ಘಟನೆ ಇದೇ ಮೊದಲ ಸಲ ಕಂಡಿದೆ. ಇಂಥದರಿಂದ ವೈದ್ಯರು ಮತ್ತು ಸಿಬ್ಬಂದಿಯವರ ಮನಸ್ಸಿಗೆ ನೋವಾಗುತ್ತದೆ. ಯಾವುದೇ ತಪ್ಪಿಲ್ಲದಿದ್ದರೂ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರಿ, ಡಾ.ಯುವರಾಜ ಬಿರಾದಾರ, ಡಾ.ಜ್ಯೋತಿ ಖಂಡ್ರೆ, ಡಾ.ದೀಪಕ ಜಾಧವ, ಡಾ.ಜಕಿಯೊದ್ದೀನ್, ಡಾ.ಸಂದೀಪ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಅಲ್ಪಸಂಖ್ಯಾತರ ಶಾಲಾ-ಕಾಲೇಜು ʼಅತಿಥಿʼ ಆಯ್ಕೆಗೆ ಪ್ರವೇಶ ಪರೀಕ್ಷೆ: ಉಪವಾಸ ಧರಣಿ ಎಚ್ಚರಿಕೆ!