ಶಾಲೆಗೆ ಮಕ್ಕಳು ಗೈರಾಗಿದ್ದರೂ ಹಾಜರಾತಿ ಎಂದು ನಮೂದಿಸಿ ಸರ್ಕಾರದ ಖಜಾನೆಗೆ ವಂಚಿಸುವ ಶಾಲಾ ಶಿಕ್ಷಕರ ವಿರುದ್ಧ ಕ್ರಮ ಜರುಗಿಸುವಂತೆ ಪ್ರಜಾ ಪ್ರಭುತ್ವ ಸಮಿತಿ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
“ಭಾಲ್ಕಿ ತಾಲೂಕಿನ ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಶೇ.50ರಷ್ಟು ಮಕ್ಕಳು ಗೈರಾಗಿರುವುದು ಗಮನಕ್ಕೆ ಬಂದಿದೆ. ಆದರೆ ಶಾಲೆಗೆ ಬರದಿದ್ದರೂ ಮಕ್ಕಳ ಹಾಜರಾತಿ ನಮೂದಿಸುವ ಶಿಕ್ಷಕರು ಶಿಕ್ಷಣ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಶಾಲೆಗೆ ಗೈರಾದ ಮಕ್ಕಳ ಹಾಜರಾತಿ ನಮೂದಿಸಿ ಆ ಮಕ್ಕಳ ಬಿಸಿಯೂಟ ಪಡೆಯುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ರೇಷನ್ ಪಡೆಯುವುದು ಕಾನೂನು ಬಾಹಿರವಾಗಿ ಎಗ್ಗಿಲ್ಲದೇ ನಡೆಯುತ್ತಿದೆ. ಆದರೆ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದರೆ ಲಿಖಿತ ದೂರು ಸಲ್ಲಿಸಲು ತಿಳಿಸಿದರು. ಮಕ್ಕಳ ಹೆಸರಿನಲ್ಲಿ ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸುವ ಶಿಕ್ಷಕರನ್ನು ಕೂಡಲೇ ಅಮಾನತುಗೊಳಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಬುರ್ಖಾ ಧರಿಸಿಲ್ಲವೆಂದ ವಿದ್ಯಾರ್ಥಿನಿಗೆ ಗದರಿದ್ದ ಚಾಲಕ ಅಮಾನತು
“ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೌಖಿಕ ಮಾಹಿತಿ ನೀಡಿದರೆ ಲಿಖಿತ ದೂರು ನೀಡಲು ಹೇಳಿದರು. ಪ್ರಜಾ ಪ್ರಭುತ್ವ ಸಮಿತಿಯಿಂದ ಲಿಖಿತ ಮನವಿ ನೀಡಲಾಗಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಗಗನ್ ಫುಲೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸಿಂಧೆ, ಉಪಾಧ್ಯಕ್ಷ ಶಿವಕುಮಾರ್ ಜಾಧವ್, ಅಮರ ಬೆಲ್ದಾರ್ ಇದ್ದರು.