ಬೀದರ್‌ | ಚೆಂಡು ಹೂವು ಕೃಷಿಯಲ್ಲಿ ಖುಷಿ ಕಂಡ ಬಿಎಸ್ಸಿ ಪದವೀಧರ

Date:

Advertisements

ರೈತರು ಕೇವಲ ಸಾಂಪ್ರದಾಯಿಕ ಬೆಳೆಗಳ ಮೇಲೆ ಅವಲಂಬಿತರಾದರೆ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನ ಬಳಸಿಕೊಂಡು ಚೆಂಡು ಹೂವು ಬೆಳೆದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದಕ್ಕೆ ಪದವೀಧರ ಯುವ ರೈತರೊಬ್ಬರು ಸಾಕ್ಷಿಯಾಗಿದ್ದಾರೆ.

ʼಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇʼ ಎಂಬ ನಾಣ್ಣುಡಿಯಂತೆ ಬೀದರ್‌ ಜಿಲ್ಲೆಯ ಔರಾದ್ ತಾಲ್ಲೂಕಿನ ನಾಗೂರ(ಬಿ) ಗ್ರಾಮದ ಪವನ ಮಸ್ಕಲೆ ಅವರು ಬಿ.ಎಸ್ಸಿ ಪದವಿ ಓದಿದ್ದರೂ ಒಕ್ಕಲುತನ ಮೇಲೆ ಬಹಳ ಪ್ರೀತಿ. ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಸಾಂಪ್ರಾದಾಯಿಕ ಬೆಳೆ ನೆಚ್ಚಿಕೊಂಡು ಕೃಷಿ ಮಾಡಿದರೆ ಕೆಲವೊಮ್ಮೆ ಕೈ ಸುಟ್ಟುಕೊಳ್ಳಬಹುದು. ಆದರೆ, ಮಿಶ್ರ ಬೇಸಾಯ ಕೈಗೊಂಡರೆ ಉತ್ತಮ ಆದಾಯವಂತೂ ಪಕ್ಕಾ. ಒಂದು ಬೆಳೆಯ ಬೆಲೆ ಕುಸಿದರೂ ಮತ್ತೊಂದು ಕೈಹಿಡಿಯುವುದರಿಂದ ನಷ್ಟದ ಸುಳಿಯಿಂದ ಪಾರಾಗಬಹುದು ಎಂದರಿತು ಚೆಂಡು ಹೂವು ಯೊಂದಿಗೆ ಇತರೆ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದಾರೆ.

ʼನಮಗೆ 12 ಎಕರೆ ಜಮೀನಿದೆ. ಕೋವಿಡ್ ಲಾಕ್‌ಡೌನ್ ವೇಳೆ ನನ್ನ ಬಿಎಸ್ಸಿ ಪದವಿ ಪೂರ್ಣಗೊಂಡಿದೆ. ಹೆಚ್ಚಿನ ಓದು, ಉದ್ಯೋಗಕ್ಕಾಗಿ ಬೇರೆಡೆ ಹೋಗುವ ಬದಲು ಸ್ವಂತ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ಬದುಕು ಕಟ್ಟಿಕೊಳ್ಳಬೇಕೆಂದು ಕೃಷಿಯತ್ತ ಮುಖ ಮಾಡಿದೆ. ಮೊದಲಿಗೆ ಚೆಂಡು ಹೂವು ಬೆಳೆದೆ, ಅದರಿಂದ ಉತ್ತಮ ಆದಾಯ ಬಂದಿತು. ನಂತರ ಬೇರೆಯವರ 5 ಎಕರೆ ಜಮೀನು ಲಾವಣಿ ಮೇಲೆ ಪಡೆದು ಅದರಲ್ಲಿ‌ ಪ್ರತಿ ವರ್ಷ ಚೆಂಡು ಹೂವು, ಕಲ್ಲಂಗಡಿ, ಕರ್ಬೂಜ್ ಬೆಳೆಯುತ್ತಿದ್ದೇನೆ ಎನ್ನುತ್ತಾರೆ ಪವನ ಮಸ್ಕಲೆ.

WhatsApp Image 2025 09 21 at 7.28.13 PM 1

ಹನಿ ನೀರಾವರಿ ಪದ್ಧತಿ ಅಳವಡಿಸಿ, ಕೊಳವೆ ಬಾವಿಯಿಂದ ನೀರುಣಿಸಿ ವರ್ಷದಿಂದ ವರ್ಷಕ್ಕೆ ಉತ್ತಮ ಫಸಲು ತೆಗೆಯುತ್ತಿದ್ದಾರೆ. ಆದಾಯ ನಿರಂತರವಾಗಿರಲೆಂದು ಗಣೇಶ ಚತುರ್ಥಿ, ದಸರಾ , ದೀಪಾವಳಿ ಸಂದರ್ಭದಲ್ಲಿ ಚೆಂಡು ಬೆಳೆಯುತ್ತಾರೆ. ಬೇಸಿಗೆಯಲ್ಲಿ ಕಲ್ಲಂಗಡಿ, ಕರ್ಬೂಜ್‌ ಬೆಳೆದು ಬಂಪರ್‌ ಇಳುವರಿ ತೆಗೆಯುತ್ತಿದ್ದಾರೆ. ಬಹು ಬೆಳೆಯಿಂದ ಅಧಿಕ ಲಾಭದೊಂದಿಗೆ ಯಶಸ್ಸು ಕಂಡಿದ್ದಾರೆ.

‌ಐದು ವರ್ಷದಿಂದ ಪುಷ್ಪ ಕೃಷಿ:

ʼಕಳೆದ ಐದು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮಲ್ಲಿ ಬೆಳೆಯಲಾಗುವ ಹಳದಿ, ಕೇಸರಿ ಚೆಂಡು ಹೂವಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಸುತ್ತಮುತ್ತಲಿನ ಗ್ರಾಮಗಳ ಹೂ ವ್ಯಾಪಾರಿಗಳು ಮತ್ತು ಗ್ರಾಹಕರು ಖರೀದಿಸುತ್ತಾರೆ. ಕೆಲವೊಮ್ಮೆ ತೆಲಂಗಾಣದ ಹೈದರಾಬಾದ್‌ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತೇವೆʼ ಎಂದು ವಿವರಿಸಿದರು.

ʼಭೂಮಿ ಹದ, ಕೀಟನಾಶಕ, ಆಳುಗಳ ಕೂಲಿ ಸೇರಿದಂತೆ ಇನ್ನಿತರ ಸೇರಿ ಒಟ್ಟು ₹40 ಸಾವಿರ ಖರ್ಚಾಗಿದೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬಕ್ಕೆ ಸಿಗುವಂತೆ ಬೆಳೆ ಚೆಂಡು ಹೂವು ಬೆಳೆಯಲಾಗುತ್ತದೆ. ಕಳೆದ ಜೂ.1ರಂದು ಒಂದು ಎಕರೆಯಲ್ಲಿ 7 ಸಾವಿರ ಅಗಿ ನಾಟಿ ಮಾಡಲಾಗಿತ್ತು. ಗಣೇಶ ಚತುರ್ಥಿ ಹಬ್ಬದ ವೇಳೆ ₹80 ಸಾವಿರ ಚೆಂಡು ಹೂವು ಮಾರಾಟವಾಗಿದೆ. ಈಗ ದಸರಾ ಹಬ್ಬಕ್ಕೆ ₹50 ಸಾವಿರಕ್ಕೂ ಅಧಿಕ ಹೂವು ಮಾರಾಟ ಆಗುತ್ತದೆ. ಎಲ್ಲಾ ಖರ್ಚು ಹೊರತುಪಡಿಸಿ ₹1.20 ಲಕ್ಷಕ್ಕೂ ಹೆಚ್ಚಿನ ಆದಾಯ ಖಾತ್ರಿಯಾಗಿದೆ ಎಂದು ಪವನ ʼಈದಿನʼಕ್ಕೆ ತಿಳಿಸಿದ್ದಾರೆ.

WhatsApp Image 2025 09 21 at 7.28.15 PM

ʼಮುಂಬರುವ ದೀಪಾವಳಿ ಹಬ್ಬದ ವೇಳೆ ಸಿಗುವಂತೆ ಇನ್ನೂ ಎರಡೂವರೆ ಎಕರೆಯಲ್ಲಿ ಚೆಂಡು ಹೂವು ನಾಟಿ ಮಾಡಲಾಗಿದೆ. ಕಳೆದ ಗಣೇಶ ಚತುರ್ಥಿ ಹಬ್ಬದ ವೇಳೆ ಕೆಜಿಗೆ ₹150 ತನಕ ದರ ಇತ್ತು. ಆದರೆ, ಈಗ ಮಾರುಕಟ್ಟೆಯಲ್ಲಿ ಕೆ.ಜಿ. ಚೆಂಡು ಹೂವಿಗೆ ₹60 ರಿಂದ ₹70 ಕೆ.ಜಿ. ಬೆಲೆ ಸಿಗುತ್ತಿದೆ. ಹೂವು ಮಾರಾಟಕ್ಕೆ ಯಾವುದೇ ತೊಂದರೆಯಿಲ್ಲ. ಮುಖ್ಯರಸ್ತೆಗೆ ಹೂದೋಟ ಇರುವುದರಿಂದ ಜನರು ಜಮೀನಿಗೆ ಬಂದು ಖರೀದಿಸುತ್ತಾರೆʼ ಎಂದು ಹೇಳಿದರು.

ಕಂಪನಿ ಕೆಲಸಕ್ಕೆ ಬೈ ಬೈ :

ʼನನ್ನ ಬಿಎಸ್ಸಿ ಪದವಿ ಮುಗಿದ ನಂತರ ಕೆಲ ತಿಂಗಳು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಮಾಸಿಕ ಬರುವ ಸಂಬಳ ನನ್ನ ಊಟ, ವಸತಿ, ಖರ್ಚಿಗೆ ಸಾಲುತ್ತಿರಲಿಲ್ಲ. ಈ ಕೆಲಸದಿಂದ ಜೀವನ ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಯೋಚಿಸಿ ಊರಿಗೆ ಬಂದು ಅಪ್ಪನೊಂದಿಗೆ ಕೃಷಿಯಲ್ಲಿ ತೊಡಗಿಸಿಕೊಂಡೆ. ವಿವಿಧ ವಾಣಿಜ್ಯ ಬೆಳೆದು ಹೆಚ್ಚಿನ ಆದಾಯ ಕಂಡುಕೊಳ್ಳಲು ಸಾಧ್ಯವಾಗಿದೆʼ ಎಂದು ಪವನ ಹೇಳಿದರು.

ಸದ್ಯ ತೋಟದಲ್ಲಿ ಸಮೃದ್ಧವಾಗಿ ಬೆಳೆದ ಅಷ್ಟಗಂಧ ತಳಿಯ ಕೇಸರಿ ಹಾಗೂ ಹಳದಿ ಬಣ್ಣದ ಚೆಂಡು ಹೂಗಳಿಂದ ಕಂಗೊಳಿಸುತ್ತಿದೆ. ರಸ್ತೆಯಲ್ಲಿ ತೆರಳುವ ಪಾದಚಾರಿ, ವಾಹನ ಸವಾರರಿಗೆ ತನ್ನತ್ತ ಸೆಳೆಯುತ್ತಿದೆ. ಕೆಲವರಂತೂ ಹೂದೋಟಕ್ಕೆ ಭೇಟಿ ನೀಡಿ ಮನದಣಿಸಿಕೊಳ್ಳುತ್ತಿದ್ದಾರೆ.

ʼಕಳೆದ 5 ವರ್ಷಗಳಿಂದ ಕೃಷಿ ಮಾಡುತ್ತಿದ್ದೇವೆ. ಇದರಿಂದ ವರ್ಷಕ್ಕೆ ಎಲ್ಲಾ ಖರ್ಚು ಕಳೆದರೂ ₹8-10 ಲಕ್ಷ ಆದಾಯ ಬರುತ್ತಿದೆ. ಮಿಶ್ರ ಬೆಳೆಗಳಿಂದ ಕಡಿಮೆ ಅವಧಿಯಲ್ಲಿ ಅಧಿಕ ಆದಾಯ ಗಳಿಸಬಹುದು. ಉದ್ಯೋಗಕ್ಕಾಗಿ ಅಲೆದಾಟ ನಡೆಸುವ ಬದಲು ಕೃಷಿಯಲ್ಲಿ ಹೊಸ ಬಗೆಯ ಪದ್ಧತಿಗಳನ್ನು ಅಳವಡಿಸಿಕೊಂಡರೆ ಆರ್ಥಿಕ ಸದೃಢ ಜೊತೆಗೆ ನೆಮ್ಮದಿ ಜೀವನ ನಡೆಸಬಹುದುʼ ಎಂದು ಅಭಿಪ್ರಾಯಪಟ್ಟರು.

WhatsApp Image 2025 09 21 at 7.28.14 PM
ಹುಲುಸಾಗಿ ಬೆಳೆದಿರುವ ಚೆಂಡು ಹೂವು….

ʼತೋಟಗಾರಿಕೆ ಇಲಾಖೆ ಅಧಿಕಾರಿಗಳು ನಮ್ಮ ತೋಟಕ್ಕೆ ಒಮ್ಮೆಯೂ ಭೇಟಿ ಕೊಟ್ಟಿಲ್ಲ. ಹಲವು ಬಾರಿ ತೋಟಗಾರಿಕೆ ಇಲಾಖೆಗೆ ತೆರಳಿ ಕೃಷಿ ಸಂಬಂಧ ತಿಳಿಸಿದರೂ ಸಹಾಯಧನ ಒದಗಿಸಿಲ್ಲ. ತೋಟಗಾರಿಕೆ ಇಲಾಖೆಯ ಸಹಾಯಧನ ದೊರೆತರೆ ಆರ್ಥಿಕ ಅನುಕೂಲವಾಗುತ್ತದೆʼ ಎಂದು ಹೇಳಿದರು.

ಇದನ್ನೂ ಓದಿ : ಬಂಡವಾಳವಾದ, ಬಹುಸಂಖ್ಯಾತವಾದ, ಕೋಮುವಾದ ಜನಪರ ಪತ್ರಿಕೋದ್ಯಮವನ್ನು ಮುಳುಗಿಸಿವೆ- ಡಿ ಉಮಾಪತಿ

ಕೃಷಿ ಸಂಬಂಧ ಸರ್ಕಾರದ ಹಲವಾರು ಯೋಜನೆಗಳಿದ್ದರೂ ರೈತರಿಗೆ ದಕ್ಕದೇ ಇರುವುದು ವಿಪರ್ಯಾಸವೇ ಸರಿ. ಕೃಷಿಯತ್ತ ಆಸಕ್ತಿ ಹೊಂದಿರುವ ಯುವ ರೈತರಿಗೆ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ಜೊತೆಗೆ ಯೋಜನೆಗಳ ಲಾಭ ತಲುಪಿಸಿದರೆ ಬೇಸಾಯದಲ್ಲಿ ತೊಡಗಿದವರು ಸಮೃದ್ಧ ಬದುಕು ಕಟ್ಟಿಕೊಳ್ಳಲು ಸಾಧ್ಯ ಎನ್ನುವುದು ರೈತರ ಅಭಿಪ್ರಾಯ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

ಕೆಸಿ ವ್ಯಾಲಿ ಅಧಿಕಾರಿಗಳ ನಿರ್ಲಕ್ಷ್ಯ ರೈತರ ತೋಟಗಳಿಗೆ ನುಗ್ಗಿದ ನೀರು, ಲಕ್ಷಾಂತರ ರೂ ಬೆಳೆ ನಷ್ಟ

ಕೋಲಾರ: ಕೆ.ಸಿ ವ್ಯಾಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ರೈತರು ಬೀದಿಗೆ...

Download Eedina App Android / iOS

X