ರಾಜ್ಯಾದ್ಯಂತ ಸೆ.1ರಿಂದ ಅ.1ರವರೆಗೆ ಬಸವ ಸಂಸ್ಕೃತಿ ಅಭಿಯಾನ ನಡೆಯಲಿದ್ದು, ಬೀದರ್‌ನಲ್ಲಿ ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಗುವುದು ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರೂ ಆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ಬೀದರ್ ನಗರದ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಪೂರ್ವಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿ, ʼ ಬೀದರ್‌ನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನವು ಅರ್ಥಪೂರ್ಣ ರೀತಿಯಲ್ಲಿ ನಡೆಯುವಲ್ಲಿ ಎಲ್ಲಾ ಮಠಾಧೀಶರು ಮತ್ತು ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರ ಜೊತೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈಗಾಗಲೇ ಅನೇಕರು ಸಹಕಾರ ನೀಡಿದ್ದಾರೆʼ ಎಂದರು.
ʼ12ನೇ ಶತಮಾನದ ಬಸವಾದಿ ತತ್ವದ ಸಂದೇಶವು ಜಗತ್ತಿಗೆ ತಲುಪಬೇಕಾಗಿದೆ. ಹಿಂದೆಂದೂ ಆಗದೇ ಇರುವಂತಹ ಅತ್ಯಂತ ವಿಶೇಷ ಅಭಿಯಾನ ಇದಾಗಿದೆ. ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಯಶಸ್ವಿಯಾಗಿ ನಡೆದು ದಾಖಲೆ ನಿರ್ಮಿಸಬೇಕಿದೆʼ ಎಂದರು.
ಹುಲಸೂರು ಮಠದ ಶಿವಾನಂದ ಮಹಾಸ್ವಾಮಿ ಮಾತನಾಡಿ, ʼಬಸವ ಸಂಸ್ಕೃತಿ ಅಭಿಯಾನವು ಯಶಸ್ವಿಯಾಗಬೇಕಾದರೆ ಮಠಾಧೀಶರು ಸೇರಿದಂತೆ ಎಲ್ಲರೂ ಒಂದು ತಿಂಗಳ ಕಾಲ ಸಕ್ರಿಯವಾಗಿ ಅಭಿಯಾನದಲ್ಲಿ ಭಾಗವಹಿಸಿ ಬಸವ ತತ್ವವನ್ನು ಮನೆ-ಮನೆಗೆ ಮುಟ್ಟಿಸಬೇಕಾಗಿದೆʼ ಎಂದರು.
ನೇತ್ರತ್ವದ ವಹಿಸಿದ ಭಾಲ್ಕಿ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ʼಬಸವ ಸಂಸ್ಕೃತಿ ಅಭಿಯಾನವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಸುಮಾರು 300ಕ್ಕೂ ಅಧಿಕ ಬಸವ ತತ್ವದ ಮಠಾಧೀಶರು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದಲ್ಲಿ ಜಿಲ್ಲೆಯ ಎಲ್ಲಾ ಬಸವಪರ ಸಂಘಟನೆಯ ಮುಖ್ಯಸ್ಥರು, ಬಸವಾಭಿಮಾನಿಗಳು ಒಗ್ಗೂಡಿ ಭಾಗವಹಿಸಬೇಕುʼ ಎಂದು ಕೋರಿದರು.
ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಾದ ಏರ್ಪಡಿಸಲಾಗಿದೆ. ಬಿ.ವ್ಹಿ. ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಬಹಿರಂಗ ಸಭೆ ನಡೆಸಲಾಗುವುದು. ಬಸವೇಶ್ವರ ವೃತ್ತದಿಂದ ಜಾಥಾ ಪ್ರಾರಂಭವಾಗಿ ವಿವಿಧ ವೃತ್ತಗಳ ಮುಖಾಂತರ ಭೂಮರೆಡ್ಡಿ ಕಾಲೇಜಿನಲ್ಲಿ ಸಮಾವೇಶಗೊಳ್ಳುವುದು ಎಂದು ತಿಳಿಸಿದರು.
ಲಿಂಗಾಯತ ಮಹಾಮಠದ ಪ್ರಭುದೇವರು, ಬಸವಕಲ್ಯಾಣದ ಸಿದ್ದರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಅಕ್ಕ ಗಂಗಾಂಬಿಕಾ ಅವರು ಮಾತನಾಡಿದರು.
ಸೆಪ್ಟೆಂಬರ್ 3 ರಂದು ಬೀದರ್‌ನಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಇದನ್ನೂ ಓದಿ : ಬೀದರ್ | ನಿರ್ಮಾಣವಾಗದ ಸ್ವಂತ ಕಟ್ಟಡ : ಯರನಳ್ಳಿ ಗ್ರಾಮ ಪಂಚಾಯಿತಿಗೆ ಆರೋಗ್ಯ ಕೇಂದ್ರವೇ ಆಸರೆ!
ಪ್ರಮುಖರಾದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ರಾಜೇಂದ್ರಕುಮಾರ್ ಗಂದಗೆ, ಕುಶಾಲರಾವ್ ಪಾಟೀಲ, ಖಾಜಾಪುರ್, ಚಂದ್ರಕಾಂತ ಮಿರ್ಚೆ, ಸಂಗ್ರಾಮ ಎಗಳೆ, ಗುರುನಾಥ ಬಿರಾದರ, ಶ್ರೀಕಾಂತ್ ಬೋರಗಿ ಸ್ವಾಮಿ, ಶ್ಯಾಮರಾವ್ ಮ್ಯಾಕ್ರಿ, ಧೂಳಯ್ಯ ಸ್ವಾಮಿ, ಉಷಾ ಮಿರ್ಚೆ, ಜಯದೇವಿ ಯದಲಾಪುರೆ, ಸುವರ್ಣ ಧನ್ನೂ, ನಿರ್ಮಲ ಮಸೂದಿ ಮತ್ತಿತರರು ಉಪಸ್ಥಿತರಿದ್ದರು. ಉಮಕಾಂತ ಮೀಸೆ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು.