ಜಮೀನಿಗೆ ಹೋಗುವ ದಾರಿಯಲ್ಲಿ ಅಡೆತಡೆಯಾಗಿದ್ದು, ಈ ಬಗ್ಗೆ ಹಲವು ಬಾರಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ ಎಂದು ಬಸವಕಲ್ಯಾಣ ತಾಲ್ಲೂಕಿನ ಕೊಹಿನೂರ ಗ್ರಾಮದ ರೈತ ಪ್ರಶಾಂತ ಲಕಮಾಜಿ ಅವರು ಕೈಯಲ್ಲಿ ವಿಷದ ಬಾಟಲಿ, ಹಗ್ಗ ಹಿಡಿದು ಸೋಮವಾರ ತಹಶೀಲ್ದಾರ್ ಕಚೇರಿ ಎದುರುಗಡೆ ಧರಣಿ ಕುಳಿತಿದ್ದರು.
ರೈತ ಪ್ರಶಾಂತ ಲಕಮಾಜಿ ಹೊಲಕ್ಕೆ ಹೋಗುವ ದಾರಿಯಲ್ಲಿ ಕೆಲ ರೈತರು ಪೈಪ್‌ಲೈನ್ ಅಳವಡಿಸಿದ್ದು ಅದನ್ನು ತೆಗೆಯಲು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದ್ದರೂ ಯಾರೂ ಕ್ರಮ ತೆಗೆದುಕೊಂಡಿಲ್ಲ. ಒಂದು ವೇಳೆ ಶೀಘ್ರ ಕೆಲಸ ಆಗದಿದ್ದರೆ ಇಲ್ಲೇ ನೇಣು ಬಿಗಿದುಕೊಳ್ಳುತ್ತೇನೆ ಎಂದು ಬೆದರಿಕೆಯೊಡ್ಡಿದರು.
ಇದನ್ನು ಮನಗಂಡ ಬಸವಕಲ್ಯಾಣ ತಹಸೀಲ್ದಾರ್ ದತ್ತಾತ್ರೇಯ ಗಾದಾ ಅವರು ರೈತನ ಧರಣಿಗೆ ಮಣಿದು ಸರ್ಕಾರಿ ನಾಲಾದಲ್ಲಿ ಅಳವಡಿಸಲಾದ ಪೈಪ್‌ಲೈನ್ ತೆರವುಗೊಳಿಸಿ ರೈತರ ಹೊಲಕ್ಕೆ ಹೋಗಲು ದಾರಿ ಮಾಡಿಕೊಡಬೇಕೆಂದು ಆದೇಶ ಹೊರಡಿಸುವ ಮುಖಾಂತರ ಸಮಸ್ಯೆ ಇತ್ಯರ್ಥಗೊಳಿಸಿದ್ದಾರೆ.
ʼತಹಸೀಲ್ದಾರ್ ಅವರ ಆದೇಶ ಬೆನ್ನಲೇ ಕಂದಾಯ ಇಲಾಖೆ ಅಧಿಕಾರಿಗಳು ತಕ್ಷಣ ರೈತನ ಜಮೀನಿಗೆ ತೆರಳಿ ಬುಲ್ಡೋಜರ್ ದಿಂದ ಪೈಪ್‌ಲೈನ್ ತೆರವುಗೊಳಿಸಿ ದಾರಿ ಮಾಡಿಕೊಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದ ಇದ್ದ ಸಮಸ್ಯೆಗೆ ತಹಸೀಲ್ದಾರ್ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸಿದ ಬಳಿಕ ಧರಣಿ ಹಿಂಪಡೆಯಲಾಗಿದೆʼ ಎಂದು ಪ್ರಶಾಂತ ಲಕಮಾಜಿ ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ಬಗೆಹರಿಯದ ಜಮೀನು ದಾರಿ ಸಮಸ್ಯೆ: ವಿಷದ ಬಾಟಲಿ, ಹಗ್ಗ ಹಿಡಿದು ತಹಸೀಲ್ ಕಚೇರಿಗೆ ಬಂದ ರೈತ
ಧರಣಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆನಂದ ಪಾಟೀಲ, ಮುಖಂಡ ಶಿವಾ ಕಲ್ಲೋಜಿ ಮತ್ತಿತರರು ಪಾಲ್ಗೊಂಡಿದ್ದರು.