ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು ಆಗಿದೆ. ಅವರು ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ ಪ್ರಸಾರಕ್ಕೆ ಮುಡಿಪಾಗಿಟಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹೇಳಿದರು.
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಹಿರೇಮಠ ಸಂಸ್ಥಾನ ಪ್ರಾಚೀನ ಮಠವಾಗಿದ್ದು ತನ್ನದೇ ಆದ ಐತಿಹಾಸಿಕ ಪರಂಪರೆ ಹೊಂದಿದ್ದು, ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಂತಹ ಮಠದ ಬಸವಲಿಂಗ ಪಟ್ಟದ್ದೇವರು ವಿಶ್ವಗುರು ಬಸವಣ್ಣನವರು ಬೋಧಿಸಿದ ಕಾಯಕ-ದಾಸೋಹ ತತ್ವವನ್ನು ನಾಡಿನಾದ್ಯಂತ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ. ಬಡತನದ ಪರಿವಾರದಿಂದ ವಿದ್ಯಾಭ್ಯಾಸಕ್ಕಾಗಿ ಮಠ ಪ್ರವೇಶಿಸಿದ ಇವರು ಪೀಠಾಧಿಪತಿಯಾಗಿ ಹಿರೇಮಠ ಸಂಸ್ಥಾನವನ್ನು ರಾಜ್ಯದಲ್ಲಿಯೇ ಮಾದರಿ ಮಠವಾಗಿ ಬೆಳೆಸಿದ್ದು ಮಾದರಿ ಎನಸಿದೆ’ ಎಂದು ಅಭಿಪ್ರಾಯಪಟ್ಟರು.
ʼಬಡವರು, ನಿರಾಶ್ರಿತರು, ದುರ್ಬಲ ವರ್ಗದವರಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡಿದ್ದಾರೆ. ವಿದ್ಯಾ ದೇಗುಲ ತೆರೆದು ಸುಮಾರು 20 ಸಾವಿರ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ ಅವರ ಭವಿಷ್ಯವನ್ನು ಉಜ್ವಲ ಕೆಲಸ ಮಾಡುತ್ತಿದ್ದಾರೆ. ಅವರ ಉಸಿರು ಬಸವಮಯವಾಗಿದೆ. ನಾಡಿನಾದ್ಯಂತ ಬಸವ ಪ್ರಜ್ಞೆ ಮೂಡಿಸುತ್ತಿದ್ದಾರೆ. ಅವರ ಮಾರ್ಗದರ್ಶನ ಸದೃಡ ಸಮಾಜಕ್ಕೆ ಅಗತ್ಯವಾಗಿದೆ. ಅಂತಹ ಪೂಜ್ಯರು ಮುಂದಿನ ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿʼ ಎಂದು ಹಾರೈಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಸುತ್ತೂರು ಜಗದ್ಗುರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ʼಮೈಸೂರು ಭಾಗದಲ್ಲಿ ಕನ್ನಡದ ವಿಷಯ ಬಂದಾಗಲೆಲ್ಲ ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ಅವರನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ನಿಜಾಂನ ಆಳ್ವಿಕೆಯಲ್ಲಿ ಕನ್ನಡ ಕಲಿಸಿ ಕನ್ನಡಾಭಿಮಾನ ಮೆರೆದಿದ್ದಾರೆʼ ಎಂದರು.

20ನೇ ಶತಮಾನದಲ್ಲಿ ಅನುಭವ ಮಂಟಪ ಪುರ್ನಸ್ಥಾಪಿಸಿ ಬಸವಣ್ಣನವರ ವಿಚಾರಧಾರೆ ಜಗದಗಲ ತಲುಪಿಸುವ ಕಾರ್ಯ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಬಸವಲಿಂಗ ಪಟ್ಟದ್ದೇವರು ಕೂಡ ಸಂಕಷ್ಟದ ಸಮಯದಲ್ಲಿ ಮಠವನ್ನು ಮುನ್ನಡಿಸಿ ಹಿರೇಮಠ ಸಂಸ್ಥಾನವನ್ನು ಮತ್ತಷ್ಟು ಸಮೃದ್ಧ ವಿಸ್ತಾರಗೊಳಿಸಿದ್ದಾರೆ. ಬಸವಣ್ಣನವರ ವಿಚಾರಧಾರೆಗಳನ್ನು ಜಗದಲ ಮುಟ್ಟಿಸಿ ಭಕ್ತರಲ್ಲಿನ ಮೂಢನಂಬಿಕೆ, ಅಜ್ಞಾನವನ್ನು ಹೊಗಲಾಡಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಅಲ್ಲದೇ ನೆರೆಯ ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಶ್ವಗುರು ಬಸವಣ್ಣನವರ ಸಂದೇಶ ತಲುಪಿಸಿ ಆ ಭಾಗದ ಭಕ್ತರನ್ನು ಉದ್ಧರಿಸುತ್ತಿದ್ದಾರೆʼ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ʼಒಂದು ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸದಾಕಾಲ ಕೊನೆಯ ಸ್ಥಾನದಲ್ಲಿರುತ್ತಿದ್ದ ಗಡಿ ಜಿಲ್ಲೆ ಬೀದರ್ ಇದೀಗ ಸುಧಾರಣೆ
ಕಾಣುತ್ತಿರುವುದರ ಹಿಂದೆ ಪಟ್ಟದ್ದೇವರ ಕೊಡುಗೆ ದೊಡ್ಡದಿದೆ. ಅವರು ಸ್ಥಾಪಿಸಿದ ವಿದ್ಯಾ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಸಂಸ್ಕಾರ ಒತ್ತು ನೀಡುತ್ತಿರುವುದರಿಂದ ನೀಟ್, ಐಐಟಿ ಸೇರಿದಂತೆ ವಿವಿಧ ಕೋರ್ಸ್ಗಳಲ್ಲಿ ರಾಜ್ಯ ರಾಷ್ಟ್ರಕ್ಕೆ ಉತ್ತಮ ರ‍್ಯಾಂಕ್ ಪಡೆದು ನಾಡಿಗೆ ಕೀರ್ತಿ ತಂದು ಕೊಡುತ್ತಿದ್ದಾರೆ. ಸುದೈವಿ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ನಾಡಿನ ಅಮೂಲ್ಯ ಆಸ್ತಿಯನ್ನಾಗಿ ಮಾಡುತ್ತಿರುವುದು ಮಾದರಿ ತರಿಸಿದೆʼ ಎಂದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ʼಸ್ವಾಮೀಜಿಯಿಂದ ಮಠವಿಲ್ಲ, ಮಠದಿಂದ ಸ್ವಾಮೀಜಿಯನ್ನು ಎನ್ನುವುದನ್ನು ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ವಿಧಾಯಕ ಕಾರ್ಯದ ಮೂಲಕ ತೋರಿಸಿ ಕೊಟ್ಟಿದ್ದರು. ಅಂತಹ ಪೂಜ್ಯರ ಮಾರ್ಗದಲ್ಲಿ ಹೆಜ್ಜೆಯಿಟ್ಟಿರುವ ಡಾ.ಬಸವಲಿಂಗ ಪಟ್ಟದ್ದೇವರು, ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಜಗದಗಲ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಬಸವತತ್ವ ಪ್ರಚಾರದ ಮೂಲಕ ಸಮೃದ್ಧ ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದಾರೆʼ ಎಂದು ತಿಳಿಸಿದರು.
ʼಒಂದು ಕಾಲದಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಸೌಲಭ್ಯ ಅರಿಸಿ ನಗರ ಮತ್ತು ಮಹಾನಗರಳಿಗೆ ಒಲಸೆ ಹೋಗುತ್ತಿದ್ದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಇಂದು ಪೂಜ್ಯರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಜತೆಗೆ ಆಧುನಿಕ ಸೌಲಭ್ಯ ಕಲ್ಪಿಸುತ್ತಿರುವ ಹಿನ್ನೆಲೆ ರಾಜ್ಯ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇಲ್ಲಿಗೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ. ಅಂತಹ ಪೂಜ್ಯರು ಅಮೃತ ಮಹೋತ್ಸವದ ಸಂಭ್ರಮದಲ್ಲಿರುವುದು ಹೆಮ್ಮೆ ತರಿಸಿದೆ. ವರ್ಷಪೂರ್ತಿ ಯೋಜನೆ ರೂಪಿಸಿ ಪೂಜ್ಯರ ಅಮೃತ ಮಹೋತ್ಸವ ಅರ್ಥಪೂರ್ಣವಾಗಿ ಆಚರಿಸಲಾಗುವುದುʼ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼವಿಶ್ವಗುರು ಬಸವಣ್ಣನವರ ಚಿಂತನೆಗಳು ವಿಶ್ವಕ್ಕೆ ತಲುಪಬೇಕಿದೆ ಈ ಹಿನ್ನೆಲೆಯಲ್ಲಿ ಬುದ್ಧ, ಮಹಾವೀರ, ಗುರುನಾನಕ ಜಯಂತಿಗಳಿಗೆ ರಜೆ ನೀಡುವಂತೆ ಬಸವಣ್ಣನವರ ಜಯಂತಿಗೂ ಕೇಂದ್ರ ಸರಕಾರ ರಜೆ ಘೋಷಣೆ ಮಾಡುವ ಕೆಲಸ ಮಾಡಿದ್ದರೇ ಬಸವಣ್ಣನವರ ವಿಚಾರಧಾರೆಗಳು ಮತ್ತಷ್ಟು ವೇಗವಾಗಿ ಜಾಗತಿಕ ಮಟ್ಟಕ್ಕೆ ತಲುಪಲಿವೆʼ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು.
ಸಮಾರಂಭದಲ್ಲಿ ಸಿದ್ದಯ್ಯ ಸ್ವಾಮೀಜಿ, ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್, ಯುವ ಮುಖಂಡ ಚನ್ನಬಸವಣ್ಣ ಬಳತೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಲಬುರಗಿಯ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ, ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ಬೆಲ್ದಾಳೆ, ರಾಜಶೇಖರ ಅಷ್ಟೂರೆ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ : ಕಲ್ಯಾಣ ಕರ್ನಾಟಕದಲ್ಲಿ 36 ಪಿಯು ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ!
ಶಿವಲಿಂಗ ಯರಗಲ್, ಲೋಕನಾಥ ಚಾಂಗ್ಲೇರಾ ವಚನ ಸಂಗೀತ ನಡೆಸಿಕೊಟ್ಟರು. ಬೀದರ್ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ವಿದ್ಯಾರ್ಥಿಗಳು ವಚನ ನೃತ್ಯ ನಡೆಸಿಕೊಟ್ಟರು. ಆಕಾಶವಾಣಿ ಕಲಾವಿದ ನವಲಿಂಗ ಪಾಟೀಲ್ ನಿರೂಪಿಸಿದರು. ಶಾರದಾ ಬಾಬುರಾವ ಹುಣಜೆ ಪ್ರಸಾದ ದಾಸೋಹ ಕೈಗೊಂಡಿದ್ದರು.