ದೇಶದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಂಘರ್ಷದಿಂದ ಎಲ್ಲೆಡೆ ಅಶಾಂತಿ, ಧರ್ಮಾಂಧತೆ ಹೆಚ್ಚುತ್ತಿದೆ. ಇದಕ್ಕೆಲ್ಲ ಬಸವಣ್ಣನವರ ಮೌಲ್ಯಯುತ ವಚನಗಳಿಂದ ಉತ್ತರ ಕಂಡುಕೊಳ್ಳಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.
ಬಸವಕಲ್ಯಾಣದ ನೂತನ ಅನುಭವ ಮಂಟಪ ಸಮೀಪದ ಬಸವ ಮಹಾಮನೆ ಪರಿಸರದಲ್ಲಿ ಭಾನುವಾರ ಜರುಗಿದ ಸಮಾನತಾ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ʼಬಸವಣ್ಣನವರು ಶ್ರಮ ಸಂಸ್ಕೃತಿಯ ಮೂಲಕ ಲೋಕದ ಚಲನೆಗೆ ಕಾರಣವಾದ ಕೆಳ ಸಮುದಾಯಗಳಿಗೆ ಘನತೆಯ ಸ್ಥಾನ ನೀಡಿ, ಎಲ್ಲರನ್ನೂ ಒಂದೇ ವೇದಿಕೆಯಡಿ ತರುವ ಮಹತ್ವದ ಕಾರ್ಯ ಮಾಡಿದ್ದಾರೆ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬುದು ಈ ನೆಲದ ಮೂಲ ಗುಣ. ಆ ಗುಣವನ್ನು ಗೌರವಿಸಿ ಅದನ್ನು ಕಾಪಾಡುವ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡಬೇಕು ಎಂಬ ಉದ್ದೇಶ ನಮ್ಮದಾದರೆ, ಈ ಸಮಾವೇಶಕ್ಕೆ ನಿಜವಾದ ಅರ್ಥ ಬರುತ್ತದೆʼ ಎಂದರು.

ʼಅತ್ಯಂತ ಕ್ರೂರ ಮತ್ತು ಅಮಾನವೀಯವಾದ ಸಾಮಾಜಿಕ ಇತಿಹಾಸವನ್ನು ಹೊಂದಿರುವ ನಮ್ಮ ದೇಶದಲ್ಲಿ ಜನರ ಘನತೆ ಮತ್ತು ಸಮಾನತೆಯನ್ನು ಕಾಪಾಡಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಲೇ ಇವೆ. ಬುದ್ಧನ ಕಾಲದಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಕಾಲದವರೆಗೂ ನಮ್ಮ ಹಿರಿಯರು ಈ ನೆಲದಲ್ಲಿ ಸಮಾನತೆಯನ್ನು ಮೂಡಿಸಲು ಸತತ ಪ್ರಯತ್ನಗಳನ್ನು ಮಾಡಿದ್ದಾರೆʼ ಎಂದರು.
ʼಕೆಳಜಾತಿಗಳು ಎನಿಸಿಕೊಂಡು ತಾವಿದ್ದ ನೆಲದಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡುತ್ತಿದ್ದ ಜನರಿಗೆ ಲಿಂಗಾಯತ ಧರ್ಮ ರೂಪಿಸಿಕೊಟ್ಟರು. ನನ್ನ ಪ್ರಕಾರ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವು ʼದಯೆಯ ಧರ್ಮವಾಗಿದೆʼ. ಎಲ್ಲರಿಗೂ ದಯೆ, ಪ್ರೀತಿ ತೋರುವ ಲಿಂಗಾಯತ ಧರ್ಮವು ಸಮಾನತೆಯಡೆಗೆ ಇಟ್ಟ ದೊಡ್ಡ ಹೆಜ್ಜೆಯಾಗಿದೆ. ಪ್ರಜಾಪ್ರಭುತ್ವದ ಮೂಲ ಲಕ್ಷಣಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವವನ್ನು ಅನುಭವ ಮಂಟಪದ ಮೂಲಕ ಜಾರಿಗೊಳಿಸಿದ ಬಸವಣ್ಣನವರ ನೆಲದಲ್ಲಿ ಈ ಸಮಾವೇಶ ನಡೆಯುತ್ತಿರುವುದು ಅತ್ಯಂತ ಮಹತ್ವದಾಗಿದೆʼ ಎಂದು ಹೇಳಿದರು.
ʼಬಸವೇಶ್ವರರು ಕಲ್ಯಾಣಕ್ಕೆ ಬಂದ ನಂತರ ಅವರು ಪ್ರಭುತ್ವ ಹೇಗಿರಬೇಕೆಂದು ಸಾಧಿಸಿ ತೋರಿಸಿದ್ದಾರೆ. 12ನೇ ಶತಮಾನದಲ್ಲೇ ಮಾನವ ಹಕ್ಕುಗಳ ಪ್ರತಿಪಾದಿಸಿ ಸರ್ವೋದಯ ಕಲ್ಪನೆಯನ್ನು ನೀಡಿದಂತಹ ವ್ಯಕ್ತಿ ಬಸವಣ್ಣ. ಆಡಳಿತದಲ್ಲಿ ಎಲ್ಲರೂ ಸಮಾನರು ಎಂದಿದ್ದ ಅವರು ಪ್ರಜಾರಾಜ್ಯಕ್ಕೆ ಮುನ್ನುಡಿ ಬರೆಯಲು ರಾಜ್ಯದ ಮೊದಲ ಸಾಮಾಜಿಕ ನ್ಯಾಯ ನಿಧಿಯನ್ನು ಸ್ಥಾಪಿಸಿದ್ದರುʼ ಎಂದು ಪ್ರತಿಪಾದಿಸಿದರು.

ʼಕರ್ಮ ಸಿದ್ಧಾಂತವು ಎಲ್ಲ ಅನಿಷ್ಟಗಳ ತಾಯಿ ಬೇರಾಗಿದ್ದು, ನಮ್ಮ ಬದುಕಿನ ಆಗು ಹೋಗುಗಳೆಲ್ಲವೂ ಹಿಂದಿನ ಜನ್ಮದ ಪಾಪದ ಫಲ ಎಂಬ ಭ್ರಮೆಯನ್ನು ಕಳಚಬೇಕು. ಜನ ಸಮುದಾಯಗಳನ್ನು ದುರ್ಬಲಗೊಳಿಸುವ ಪಂಚಾಂಗ, ಶನಿಕಾಟ ಮತ್ತು ಮೂಢನಂಬಿಕೆಯನ್ನು ತ್ಯಾಜಿಸಲು ಬಸವಣ್ಣನವರು ಕರೆ ನೀಡಿದರು. ಬಸವಣ್ಣನವರ ನಂತರ ಡಾ.ಅಂಬೇಡ್ಕರ್ ಅವರು ಸಮಾಜದಲ್ಲಿ ಸಮಾನತೆ ಇರಬೇಕೆಂಬ ಮಾತನ್ನು ಇನ್ನಷ್ಟು ಅಧಿಕೃತಗೊಳಿಸಿದರುʼ ಎಂದರು.
ʼತಮ್ಮ ಸಮುದಾಯಗಳ ಮೇಲಿನ ಅವಮಾನ ಮತ್ತು ಅಸಮಾನತೆಯ ಬದುಕನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಂಡ ಬಾಬಾ ಸಾಹೇಬರು ಸಂವಿಧಾನ ರಚಿಸುವ ಸಂದರ್ಭದಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಶೋಷಣೆಯ ವಿರುದ್ಧದ ಜನರು ತಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕುಗಳನ್ನು ನೀಡಿದರು. ಸಂವಿಧಾನದ ಪ್ರಸ್ತಾವನೆಯಲ್ಲೇ ʼಭಾರತೀಯ ಪ್ರಜೆಗಳಾದ ನಾವೆಲ್ಲರೂ ಒಂದೇʼ ಎಂಬ ಸಂದೇಶವನ್ನು ಎಲ್ಲೆಡೆ ತಲುಪಿಸುವ ಪ್ರಯತ್ನವನ್ನು ನಮ್ಮ ಸರ್ಕಾರ ಪ್ರಾಮಾಣಿಕವಾಗಿ ಮಾಡಿದೆʼ ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಶಾಹೀನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರಿಗೆ ಸೌಹಾರ್ದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸಿದ್ಧರಾಮ ಬೆಲ್ದಾಳ ಶರಣರು, ವಿಜಯಪುರದ ಮನಗೂಳಿ ವಿರಕ್ತ ಮಠದ ವೀರತೀಶಾನಂದ ಸ್ವಾಮೀಜಿ, ಜಗದೀಶ್ವರಿ ಮಾತಾ ಮಲಗಿ, ಭಂತೆ ಧಮ್ಮಾನಂದ, ಚನ್ನಬಸವಾನಂದ ಸ್ವಾಮೀಜಿ, ದರ್ಬಾರ್ ಸಿಂಗ್ ಸಾನಿಧ್ಯ ವಹಿಸಿದ್ದರು. ಪೌರಾಡಳಿತ ಸಚಿವ ರಹೀಂ ಖಾನ್, ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ತು ಸದಸ್ಯ ತಿಪ್ಪಣ್ಣ ಕುಮಕನೂರ್, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಎಂಎಲ್ಸಿ ವಿಜಯ್ ಸಿಂಗ್, ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಾಲಾ ಬಿ.ನಾರಾಯಣ, ಧನರಾಜ್ ತಾಳಂಪಳ್ಳಿ, ಗೀತಾ ಪಂಡಿತ ಚಿದ್ರಿ, ಮಲ್ಲಿಕಾರ್ಜುನ ಗುಂಗೆ, ಕರ್ನಾಟಕ ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಸ್ವಾಗತಿಸಿದರು. ಎಸ್.ಎಂ.ಭಕ್ತಕುಂಬಾರ್ ನಿರೂಪಿಸಿದರು. ಲಕ್ಷ್ಮಣ ದಸ್ತಿ ವಂದಿಸಿದರು.