ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಏ.30 ರಂದು ಜಿಲ್ಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏ.30 ರಂದು ನಡೆಯುವ ಬಸವ ಜಯಂತಿ ಆಚರಣೆ ಕುರಿತು ಮಂಗಳವಾರ ಕರೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಏಪ್ರಿಲ್ 30 ರಂದು ಬೆಳಿಗ್ಗೆ 8:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪೂಜೆ ಸಲ್ಲಿಸಲಾಗುವುದು. ನಂತರ ಮೆರವಣಿಗೆಗೆ ನಡೆಯಲಿದೆ ಮತ್ತು ಸಂಜೆ ವೇದಿಕೆ ಕಾರ್ಯಕ್ರಮ ನಡೆಯಲಿದೆ’ ಎಂದರು.
‘ಅಂದು ಎಲ್ಲ ಸರ್ಕಾರಿ, ಅರೆ ಸರ್ಕಾರಿ ಕಚೇರಿ, ಶಾಲಾ,ಕಾಲೇಜುಗಳಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಕಡ್ಡಾಯವಾಗಿ ಪೂಜೆ ಸಲ್ಲಿಸಬೇಕು. ಪೊಲೀಸ್ ಇಲಾಖೆ ವತಿಯಿಂದ ಬಂದೋಬಸ್ತ್ ನೀಡಲಾಗುವುದು. ಡಿಜೆ ಬಳಕೆಗೆ ಸಂಬಂಧಿಸಿದಂತೆ ಪೋಲಿಸ್ ಇಲಾಖೆಯಿಂದ ಅನುಮತಿ ಪಡೆಯಬೇಕು’ ಎಂದು ತಿಳಿಸಿದರು.
ಮೂರು ದಿನ ಬಸವ ಜಯಂತಿ ಆಚರಣೆ:
ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷ ಜೈರಾಜ್ ಖಂಡ್ರೆ ಅವರು ಮಾತನಾಡಿ, ‘ನಾವು ಬಸವ ಜಯಂತಿಯನ್ನು ಏಪ್ರಿಲ್ 28, 29 ಮತ್ತು 30ರವರೆಗೆ ಆಚರಿಸಲು ನಿರ್ಧರಿಸಲಾಗಿದೆ, ಏ.28 ರಂದು ಬೆಳಿಗ್ಗೆ ಗುಂಪಾದಿಂದ ಪಾಪನಾಶದವರೆಗೆ ಬೈಕ್ ರ‍್ಯಾಲಿ ನಡೆಯಲಿದೆ ಹಾಗೂ ಸಂಜೆ 6 ಗಂಟೆಗೆ ಬಸವ ಜಯಂತಿ ಉತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ.ಖಂಡ್ರೆ ಅವರು ಚಾಲನೆ ನೀಡಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಏ.29ಕ್ಕೆ ರಂಗಮಂದಿರದಲ್ಲಿ ವಚನ ಸಂಗೀತ ಕಾರ್ಯಕ್ರಮ, ಬಸವಾದಿ ಶರಣರ ವೇಷಭೂಷಣ ಮತ್ತು ನಾಟಕ ಕಾರ್ಯಕ್ರಮಗಳು ನಡೆಯಲಿವೆ ಮತ್ತು ಏ.30 ರಂದು ಸಂಜೆ 6 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಧಿಕಾರಿಗಳು ವಚನ ಬೋಧಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಬೇಕು’ ಎಂದು ತಿಳಿಸಿದರು.
ಏ.24ರಂದು ಅನುಭವ ಮಂಟಪ ರಥಯಾತ್ರೆ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮಾತನಾಡಿ, ‘ಬೀದರ ಜಿಲ್ಲೆಗೆ ಬಾಗಲಕೋಟೆ ಜಿಲ್ಲೆಯಿಂದ ಅನುಭವ ಮಂಟಪ ಬಸವಾದಿ ಶರಣರ ವೈಭವ ಕಾರ್ಯಕ್ರಮದ ರಥಯಾತ್ರೆ ಇದೇ ಏ.23ರಂದು ಜಿಲ್ಲೆಗೆ ಬರಲಿದ್ದು, ಏ.24ಕ್ಕೆ ಬೆಳಿಗ್ಗೆ 9:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರಥಯಾತ್ರೆಗೆ ಪೂಜೆ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಪಿಯುಸಿ ಪರೀಕ್ಷೆ ಫಲಿತಾಂಶ : ಜಿಲ್ಲೆಯ 13 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಮುಖಂಡರಾದ ಶಿವಶರಣಪ್ಪ ವಾಲಿ, ವೈಜಿನಾಥ ಕಮಠಾಣೆ, ಬಾಬು ವಾಲಿ, ಬಸವರಾಜ ಬುಳ್ಳಾ, ರಾಜೇಂದ್ರ ಗಂದಗೆ, ಸುರೇಶ್ ಸ್ವಾಮಿ, ಸಂಜುಕುಮಾರ್ ಪಾಟೀಲ್, ವಿಜಯಕುಮಾರ ಪಾಟೀಲ, ಸೋಮಶೇಖರ ಅಮಲಾಪೂರೆ, ಮಾರುತಿ ಬೌದ್ಧೆ, ವಿಜಯಕುಮಾರ ಸೋನಾರೆ ಸೇರಿದಂತೆ ಸಮಾಜದ ವಿವಿಧ ಮುಖಂಡರು ಉಪಸ್ಥಿತರಿದ್ದರು.