ಬೀದರ್ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಮಾಸಿಕ ₹50 ಸಾವಿರ ನ್ಯಾಯಯುತ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹಿಸಿ ತರಗತಿಗಳನ್ನು ಬಹಿಷ್ಕರಿಸಿ ಗುರುವಾರ ವಿಶ್ವವಿದ್ಯಾಲಯ ಎದುರು ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ʼವಿಶ್ವವಿದ್ಯಾಲಯದ ವಿವಿಧ ವಿಭಾಗದಲ್ಲಿ ಒಟ್ಟು 66 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವೆ. ಮಾಸಿಕ ವೇತನ ಹೆಚ್ಚಳಕ್ಕಾಗಿ ವಿವಿ ಆಡಳಿತ ಮಂಡಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅದಕ್ಕೆ ತರಗತಿಗಳಿಗೆ ಬಹಿಷ್ಕರಿಸಿ ಕೈಗೆ ಕಪ್ಪು ಬಟ್ಟಿ ಧರಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದೇವೆʼ ಎಂದು ಹೇಳಿದರು.
ಆಧುನಿಕ ದುಬಾರಿ ದಿನಗಳಲ್ಲಿ ಕಡಿಮೆ ಸಂಬಳದಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ. ವರ್ಷದಲ್ಲಿ ಕೇವಲ 8 ತಿಂಗಳ ಮಾತ್ರ ವೇತನ ದೊರೆಯುತ್ತಿದೆ. ಉಳಿದ ದಿನಗಳನ್ನು ಸಾಗಿಸುವುದು ತೊಂದರೆಯಾಗಿದೆ. ವಿಶ್ವವಿದ್ಯಾಲಯ ನಿಮಯದಂತೆ ಪ್ರತಿ ತಿಂಗಳು ₹50 ಸಾವಿರದಂತೆ ವರ್ಷದಲ್ಲಿ 11 ತಿಂಗಳಾದರೂ ವೇತನ ನೀಡಬೇಕು. ಈ ಮೂಲಕ ಆತಂಕದಲ್ಲಿರುವ ಅತಿಥಿ ಉಪನ್ಯಾಸಕರ ಜೀವನೋಪಾಯಕ್ಕೆ ಸೇವಾ ಭದ್ರತೆ ನೀಡಬೇಕುʼ ಎಂದು ಒತ್ತಾಯಿಸಿದರು.
ʼಮುಂದಿನ ಶೈಕ್ಷಣಿಕ ಅವಧಿಗೆ ಅತಿಥಿ ಉಪನ್ಯಾಸಕರ ನೇಮಕದ ಸಂದರ್ಭದಲ್ಲಿ ಸಂದರ್ಶನ ನಡೆಸದೆ ಸದ್ಯ ಇರುವ ಉಪನ್ಯಾಸಕರನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ : ಬೀದರ್ | ಒಪ್ಪೊದಿಲ್ಲ, ಒಪ್ಪೊದಿಲ್ಲ ನಾಗಮೋಹನದಾಸ್ ವರದಿ ಒಪ್ಪೊದಿಲ್ಲ : ಬೃಹತ್ ಪ್ರತಿಭಟನಾ ರ್‍ಯಾಲಿ
ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶಾಂತಕುಮಾರ ಎಸ್. ಚಿದ್ರಿ, ಪ್ರಮುಖರಾದ ಅಂಬರೀಶ, ರಾಮಚಂದ್ರ ಗಣಾಪುರ, ತುಕಾರಾಮ ಆರ್. ಮೇತ್ರೆ, ಅರುಣಕುಮಾರ ಕೆ. ಸೇರಿದಂತೆ ಅತಿಥಿ ಉಪನ್ಯಾಸಕರು ಭಾಗವಹಿಸಿದ್ದರು.