ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಹುಮನಾಬಾದ್ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 65ರ ಸಿಂಧನಕೇರಾ ಕ್ರಾಸ್ ಬಳಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ತಾಲ್ಲೂಕಿನ ಸಿಂಧನಕೇರಾ ಗ್ರಾಮದ ನಿವಾಸಿಗಳಾದ ಸಂಜೀವಕುಮಾರ ಕಲ್ಲಪ್ಪ ಮೇತ್ರೆ (30) ಹಾಗೂ ಸುಧಾಕರ ಹಣಮಂತ ಹಾದಿಮನಿ (32) ಮೃತರು ಎಂದು ತಿಳಿದು ಬಂದಿದೆ.
ಹುಮನಾಬಾದ್‌ನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ರಾತ್ರಿ ಊರಿಗೆ ತೆರಳುವಾಗ ಎದುರಿನಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ದುರ್ಘಟನೆಯಲ್ಲಿ ಸಂಜೀವಕುಮಾರ ಕಲ್ಲಪ್ಪ ಮೇತ್ರೆ ಎಂಬುವವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಹಿಂಬದಿ ಸವಾರ ಸುಧಾಕರ ಹಾದಿಮನಿ ಅವರನ್ನು ಕಲಬುರಗಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪಿಎಸ್ಐ ಬಸವಲಿಂಗಪ್ಪ ಗೋಡಿಹಾಳ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.