ಅಧಿಕಾರ ದಾಹಕ್ಕಾಗಿ ಏನು ಮಾಡಲು ಹಿಂಜರಿಯದವರು ಎಂದರೆ ಅದು ಬಿಜೆಪಿಯವರು. ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ, ಏನೂ ಹೇಸಲು ಹಿಂಜರಿಯುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸೋಮವಾರ ಬೀದರ್ನಲ್ಲಿ ಸುದ್ದಿಗಾರರೊಂದಿಗೆ ಕಾಂಗ್ರೆಸ್ ಶಾಸಕರಿಗೆ ಬಿಜೆಪಿ 100 ಕೋಟಿ ರೂ. ಆಮಿಷ ಒಡ್ಡುತ್ತಿರುವ ವಿಚಾರಕ್ಕೆ ಮಾತನಾಡಿದ ಅವರು, ʼಅಧಿಕಾರದ ದಾಹಕ್ಕಾಗಿ ಏನೂ ಮಾಡಲು ಹಿಂಜರಿಯದವರು ಬಿಜೆಪಿಯವರು. ಯಾವ ಮಟ್ಟಕ್ಕೂ ಇಳಿಯಲು ತಯಾರಾಗಿರುತ್ತಾರೆ. ಈ ಹಿಂದೆ 17 ಜನ ಶಾಸಕರನ್ನು ಖರೀದಿಸಿದ್ದು ಎಲ್ಲರಿಗೂ ಗೊತ್ತಿದೆ. ಇದಕ್ಕಿಂತ ದೊಡ್ಡ ಪುರಾವೆ ಬೇಕಾ ಎಂದು ಪ್ರಶ್ನಿಸಿದರು.
ʼಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಲು 2,500 ಕೋಟಿ ರೂ. ಕೊಡಬೇಕು. ಮಂತ್ರಿಯಾಗಲು 500 ಕೋಟಿ ರೂ. ಕೊಡಬೇಕು ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದರು. ಯತ್ನಾಳ್ ಬಿಜೆಪಿ ವಿರುದ್ಧ ಏನೇ ಹೇಳಿದ್ದರೂ ಅದು ನೂರಕ್ಕೆ ನೂರು ಸತ್ಯವಿದೆ. ಯತ್ನಾಳ್ಗೆ ಏನಾದರೂ ಇಲ್ಲಿಯವರೆಗೆ ನೋಟಿಸ್ ಬಂದಿದೆಯಾ ಎಂದರು.
ʼವಕ್ಫ್ ವಿವಾದ ಹುಟ್ಟು ಹಾಕಿದ್ದೇ ಬಿಜೆಪಿಯವರು, ಜನರಿಗೆ ಮೊದಲು ನೋಟಿಸ್ ನೀಡಿದ್ದು ಅವರೇ. ಈಗ ಅವರೇ ಆರೋಪ ಮಾಡುತ್ತಾರೆ. ಕಾಂಗ್ರೆಸ್ನವರು ನೋಟಿಸ್ ಕೊಟ್ಟಿದ್ದಾರೆ ಎಂದು ತೀರ್ಪು ನೀಡುವವರು ಬಿಜೆಪಿಯವರೇ. ಇದನ್ನೂ ಜನ ಅರ್ಥ ಮಾಡಿಕೊಳ್ಳುತ್ತಾರೆ. ಬಿಜೆಪಿ ಪಕ್ಷದ ಮನೆಗೆ ನೂರು ಬಾಗಿಲುಗಳು ಆಗಿವೆ. ಪಶ್ಚಾತ್ತಾಪಕ್ಕೆ ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರೆʼ ಎಂದು ಟೀಕಿಸಿದರು.
ಬಡತನ ರೇಖೆಗಿಂತ ಕೆಳಗಿದ್ದವರಿಗೆ ಬಿಪಿಎಲ್ ಕಾರ್ಡ್ ಕೊಡಬೇಕು ಎಂಬ ನಿಯಮವಿದೆ. ಒಂದೊಂದು ಜಿಲ್ಲೆಯಲ್ಲಿ ಶೇ.95 ರಷ್ಟು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ನೈಜವಾಗಿ ಯಾರು ಬಡತನದಲ್ಲಿ ಇದ್ದು, ಬಿಪಿಎಲ್ ಕಾರ್ಡ್ ಪಡೆದಿದ್ದರೆ ಅವರಿಗೆ ಯಾವುದೇ ವಂಚನೆಯಗುವುದಿಲ್ಲ ಎಂದು ಖಂಡ್ರೆ ಹೇಳಿದರು.
ಈ ಸುದ್ದಿ ಓದಿದ್ದೀರಾ? ಮಹಾರಾಷ್ಟ್ರ ಚುನಾವಣೆ | ಗೆಲ್ಲುತ್ತಿರುವ ಶ್ರೀಮಂತ ಜಿಲ್ಲೆಗಳು ಮತ್ತು ಸೊರಗುತ್ತಿರುವ ಬಡ ಪ್ರದೇಶಗಳು
ಸರ್ಕಾರಿ ನೌಕರರು, ಸಾಹುಕಾರರು, ತೆರಿಗೆ ಪಾವತಿಸುವವರೂ ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ಸಾಕಷ್ಟು ದೂರುಗಳಿವೆ. ಅಂಥವರ ಕಾರ್ಡ್ ರದ್ದಾಗಲಿವೆ. ಸರ್ಕಾರ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮಕೈಗೊಳ್ಳುತ್ತದೆ ಎಂದು ಹೇಳಿದರು.