ಬ್ಯಾಸಕಿ ಬಂತಂದ್ರೆ ನೀರಿಗೆ ಬರ ಬರೋದು ಗ್ಯಾರಂಟಿ, ಅದಕ್ಕೆ ತಾತ್ಕಾಲಿಕ ಪರಿಹಾರ ಹುಡುಕಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಫೈಲ್ ಹಿಡಿದು ಎಡತಾಕುವುದು ಸಾಮಾನ್ಯ. ಈ ಕೆಂಡ ಬಿಸಿಲಿನ ಬರೆಗೆ ಬರ ಅಂದ್ರೆ ಯಾರಿಗೆ ಕಷ್ಟ, ಯಾರಿಗೆ ಇಷ್ಟ? ಎಂಬುವುದು ತಿಳಿಯದೇ ಉಳಿದಿರುವ ಪ್ರಶ್ನೆ.
ಈವತ್ತು ಮನೆಯಿಂದ ಹೊರ ಹೋಗೋಕೆ ಯಾಕೋ ಮನಸ್ಸಾಗಲಿಲ್ಲ. ಮುಂಜಾನೆ ಒಂಬತ್ತು ಬಾರಿಸಿದರೆ ಸಾಕು, ಬೆಂಕಿಯಂಥಾ ಬಿಸಿಲು. ಎರಡು ಗಾಲಿಯ ಗಾಡಿ ಮೇಲೆ ಕುಳಿತುಕೊಂಡ ತಕ್ಷಣ ʼಈ ಬ್ಯಾಸಕಿ ಬಿಸ್ಲಾಗ್ ಗಾಡಿ ಮ್ಯಾಲ್ ಭಾಳ್ ತಿರ್ಗಬ್ಯಾಡ್ʼ ಅಂತ ಮನ್ಯಾಗ್ ದಿನಾಲೂ ಹೇಳೋದು ನೆನಪು ಬಂತು.
ಔರಾದ್ ತಾಲ್ಲೂಕಿನ್ಯಾಗ ಪ್ರತಿವರ್ಷ ಬ್ಯಾಸಕಿ ಕಾಲದಲ್ಲಿ ಒಂದು ಮಜಾ ಇದೆ. ಏನಪ್ಪಾ ಅಂದ್ರೆ ಯಾರಾದ್ರೂ ನೆಂಟುರ್ ಫೋನ್ ಮಾಡಿ ಆರಾಮ ಇದ್ದೀರಾ ಅಂತೆಲ್ಲಾ ಕೇಳೋದು ವಾಡಿಕೆ. ಆದ್ರೆ ನಮ್ಮಲ್ಲಿ ಥೋಡೆ ಅಲಗ್ ಅದಾ, ಏನಂದ್ರೆ ʼಆರಾಮ ಏನೋ ಇದ್ದೇವ್ ಖರೇ ಈ ಬ್ಯಾಸಕಿ ಬಂತಂದ್ರೆ ನಮಗ್ ನೀರಿಂದೇ ಭಾಳ್ ಕುದಿ ಆಯ್ತುದ್ ನೋಡ್ರೀ, ಬೇಗೂ ಹಗ್ಲೂ ನೀರಿನ ಸಲೇಕ್ ಬಡ್ಕೋಬೇಕ್, ನಮ್ಮೂರಾಗ ನೀರಿನ ತಕ್ಲಿಪ್ ಭಾಳ್ ಅದಾʼ ಅಂತ ಸರಳವಾಗಿ ಹೇಳೋದು ಇಲ್ಲಿ ಮಾಮೂಲಿ.
ಇತ್ತೀಚೆಗೆ ಐಎಎಸ್ ಅಧಿಕಾರಿಯೊಬ್ಬರು ನೀರಿನ ಸಮಸ್ಯೆ ಕುರಿತು ಪತ್ರಿಕಾಗೋಷ್ಠಿ ನಡೆಸಿದರು. ಜಿಲ್ಲೆಯಲ್ಲಿ ಈಗಾಗಲೇ 46 ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಅದನ್ನು ನಿವಾರಣೆಗಾಗಿ ನಮ್ಮ ಎಲ್ಲ ತಾಲ್ಲೂಕಾ ಮಟ್ಟದ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆʼ ಅಂತ ಹೇಳಿದ್ರು.
ಈ ನಡುವೆ ಅಲ್ಲಿದ್ದ ಪತ್ರಕರ್ತರೊಬ್ಬರು ʼಸಾರ್ ಪ್ರತಿವರ್ಷ ಈ ನೀರಿನ ಸಮಸ್ಯೆದ ಗೋಳು ಇದ್ದೇ ಇರುತ್ತೇ ಅಲ್ವಾ. ಇದಕ್ಕೆ ಶಾಶ್ವತ ಪರಿಹಾರ ಅಂಬೋದಾ ಏನಾದ್ರು ಇದೇನಾ? ಪ್ರತಿವರ್ಷ ನೀರಿನ ಸಮಸ್ಯೆ ನಿವಾರಣೆಗೆ ʼಬೋರವೆಲ್ ಹಾಕ್ಸೋದು, ಟ್ಯಾಂಕರ್ ಖಳಿಸೋದೇʼ ನೀರಿನ ಸಮಸ್ಯೆಗೆ ಪರಿಹಾರವೇ? ಜಿಲ್ಲೆಯ ಪ್ರತಿ ತಾಲೂಕಾ, ಊರು-ಊರಿಗೆ ಹಿಂದಿನ ಕಾಲದ ಕಾಲದ ಕೆರೆ, ಕಟ್ಟೆ, ಪುರಾತನ ಬಾವಿ ಇದ್ದಾವಲ್ಲಾ, ಅವೆಲ್ಲಾ ಏನಾದವು, ಅವುಗಳ ನೀರು ಬಳಕೆ ಮಾಡ್ಕೊಂಡ್ರೆ ಈ ನೀರಿನ ಸಮಸ್ಯೆ ಗೋಳು ತಪ್ಪಿಸಬಹುದು ಅಲ್ವಾʼ ಅಂತ ಸ್ವಲ್ಪ ಸಿಟ್ಟಿನಿಂದ ಆದ್ರೂ ಚನ್ನಾಗಿಯೇ ಕೇಳಿದ್ರು. ಪಾಪ ಅವ್ರು ʼಈ ಜೆಜೆಎಂ ಯೋಜನೆ ಕಾಮಗಾರಿ ಪೂರ್ಣಗೊಂಡ ಊರಿನಲ್ಲಿ ನೀರಿನ ಸಮಸ್ಯೆ ಇಲ್ಲʼ ಅಂತ ಉತ್ತರ ಕೊಟ್ಟು ಉಳಿದ ಪ್ರಶ್ನೆಗೆ ಉತ್ತರಿಸಿದೆ ಸುಮ್ಮನಾದ್ರು.
ಹೌದು, ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಅವರ ʼಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ʼ ಎಂಬ ಕೃತಿಯ ಕನ್ನಡ ಅನುವಾದಿತ ‘ಬರ ಅಂದರೆ ಎಲ್ಲರಿಗೂ ಇಷ್ಟ’ ಪುಸ್ತಕದ ಶೀರ್ಷಿಕೆಯಂತೆ ಔರಾದ್ ತಾಲ್ಲೂಕಿನ ಜನರು ಸಹ ʼಬ್ಯಾಸಕಿ ಅಂದ್ರೆ ಹ್ಯಾಂಗೂ ನೀರಿನ ಬರʼ ಬರುವುದು ಖಚಿತ ಎಂದು ಮೊದಲೇ ಗೊತ್ತಿರುತ್ತದೆ.
ʼಔರಾದ್ ಹಾಗೂ ಕಮಲನಗರ ಉಭಯ ತಾಲ್ಲೂಕಿನ 12 ಗ್ರಾಮ ಪಂಚಾಯಿತಿ ವ್ಯಾಪ್ತಿಯ 28 ಗ್ರಾಮ, ತಾಂಡಾಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ಮುಂದೆ ಎಪ್ರಿಲ್, ಮೇ ತಿಂಗಳಲ್ಲಿ ಈ ಸಂಖ್ಯೆ 40 ದಾಟಬಹುದು ಎಂದು ಪಟ್ಟಿ ಮಾಡಿಕೊಂಡಿದ್ದಾರೆ. ಇವುಗಳಲ್ಲಿ ಬಹುತೇಕ ಗ್ರಾಮಗಳಲ್ಲಿ ಖಾಸಗಿ ಬಾವಿ ಬಾಡಿಗೆ ಪಡೆದು ನೀರು ಸರಬರಾಜು ಮಾಡುತ್ತಿದ್ದರೆ, ಐದು ತಾಂಡಾಗಳಿಗೆ ದಿನಕ್ಕೆ ಒಂದು ಟ್ಯಾಂಕರ್ ನೀರು ಪೂರೈಸುವ ವ್ಯವಸ್ಥೆ ಮಾಡಲಾಗಿದೆʼ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನಾವು ಚಿಕ್ಕವರಿದ್ದಾಗ ಯಾರಾದ್ರು ಮನ್ಯಾಗ್ ಮದುವೆ, ಭಾಷುಣಕಿ, ಮುಂಜಿ, ಜವಾಳ ಕಾರ್ಯಕ್ರಮ ಇತ್ತಾಂದ್ರೆ ಎತ್ತಿನ ಬಂಡಿದಾಗ ಕೊಡ, ಡ್ರಮ್ ಇಟ್ಕೊಂಡಿ ಸೀಮೆ ದೂರದಿಂದ ಯಾರದೋ ಹೊಲದ ಬಾವಿಯ ನೀರು ತರತಿದ್ರು, ಕೆಲ ಊರಾಗ ಕತ್ತೆ ಮ್ಯಾಲ್ ಕೊಡ ಹಾಕೊಂಡು ನೀರು ತಕೊಂಡು ಬರೋ ಪರಿಸ್ಥಿತಿಯೂ ಇತ್ತು. ಇನ್ನು ರಟ್ಟಿ ಗಟ್ಟಿ ಇದ್ದೋರು ʼಬಾವಿ ನೀರು ಸೇದಿʼ ತಲೆ ಮ್ಯಾಲ್ ಕೊಡ ಇಟ್ಕೊಂಡು ಬರೋದು ಇತ್ತು. ಈ ಡಿಜಿಟಲ್ ದುನಿಯಾ ಎಷ್ಟೇ ಮುಂದುವರೆದ್ರೂ ಇನ್ನೂ ಕೆಲ ಹಳ್ಳಿ, ತಾಂಡಾ ಮಂದಿ ಕೈಯಲ್ಲಿ ಖಾಲಿ ಕೊಡ ತಕೊಂಡು ನೀರಿಗಾಗಿ ಬಾವಿ, ಕೆರೆ ಹುಡುಕುವ ದುಸ್ಥಿತಿ ಇನ್ನೂ ತಪ್ಪಿಲ್ಲ.
ಈಗ ಇನ್ನೊಂದು ವಿಷಯ ಹೇಳಲೇಬೇಕು. ಕಳೆದ ವರ್ಷ ಇದೇ ಬ್ಯಾಸಕಿ ಟೈಮಿಗಿ ಆ ಬಾರ್ಡರ್ ತಾಂಡಾದಾಗ ನೀರಿನ ಸಮಸ್ಯೆ ಭಾಳ್ ಇದೆ ಅಂತ ಪರಿಚಯಸ್ಥರೊಬ್ಬರು ಹೇಳಿದ್ರು. ಒಮ್ಮೆ ಹೋಗಿ ಬರೋಣ ಅಂತ ಹೋದ್ರೆ ʼಒಂದು ಕೊಳವೆಬಾಯಿ ಸುತ್ತಲೂ ನೂರಾರು ಖಾಲಿ ಕೊಡ, ʼನೀರು ಯಾವಾಗ ಬರ್ತಾವಪ್ಪಾʼ ಅಂತ ಕಾದು ಕುಳಿತ ಮಹಿಳೆಯರು, ಮಕ್ಕಳು. ಅಲ್ಲಿನ ಜನರ ಮನೆ ಮುಂದೆ ಇಣುಕಿ ನೋಡಿದ್ರೆ ʼಮನೆ-ಮನೆಗೆ ಗಂಗೆʼ ಎಂಬ ಜಲೋತ್ಸವ ಬೋರ್ಡ್ ಕಾಣುತ್ತಿತ್ತು. ಕೇಳಿದ್ರೆ ʼಊರೆಲ್ಲಾ ಛಂದ್ ಇದ್ದಿಂದ್ ರೋಡ್ ಕೆದರಿ ಪೈಪ್ ಹಾಕಿದ್ದಾರೆ, ಅದು ಸರಿಯಾಗಿ ಮುಚ್ಚಿಲ್ಲ. ನಳ ಕೂಡ್ಸಿ ಮೂರು ತಿಂಗಳಾದ್ರು ಹನಿ ನೀರು ಬಂದಿಲ್ಲʼ ಅಂತ ಗೋಳು ಹೇಳ್ತಾ ಇದ್ರು.
ನಿಮ್ಮ ತಾಂಡಾ ಜನ್ರು ನೀರು ಎಲ್ಲಿಂದ ತರ್ತೀರಾ ಅಂತ ಕೇಳಿದ್ರೆ ʼಇಲ್ಲೇ, ಎರಡ್ಮೂರು ಕಿ.ಮೀ. ದೂರದಲ್ಲಿ ತೆಲಂಗಾಣದ ಊರಿದೆ. ಅಲ್ಲಿಂದ ದ್ವಿಚಕ್ರ ಮ್ಯಾಲ್ ತರ್ತೇವೆ. ತಾಂಡಾದಲ್ಲಿ ಒಂದೇ ಬೋರ್‌ವೆಲ್ ಇದೆ. ಅಲ್ಲಿ ಹಗಲೂ ರಾತ್ರಿ ʼನನ್ ಕೊಡಾ ಪೈಲೇ, ನಿನ್ ಕೊಡಾ ಪೈಲೇʼ ಅಂತ ಜಗಳ ಆಡ್ತಾರೆ. ಹಿಂಗಾಗಿ ಬೈಕ್ ಮೇಲೆ ನಾಲ್ಕು, ಆರು ಕೊಡ ಹಾಕೊಂಡು ನೀರು ತರ್ತಾರೆʼ ಅಂತ ಅಳಲು ತೋಡಿಕೊಂಡ ಆ ತಾತನ ಮುಖದಲ್ಲಿ ಆಡಳಿತ ವ್ಯವಸ್ಥೆ ವಿರುದ್ಧ ಆಕ್ರೋಶ, ಸಂಕಟ ಜೊತೆಗೆ ಮುಗ್ಧತೆ ಭಾವ ಎದ್ದು ಕಾಣುತ್ತಿತ್ತು.
ಬೇಸಿಗೆ ಕಾಲದಲ್ಲಿ ಜನರಿಗೆ ʼಕುಡಿಯೋ ನೀರು ಎಲ್ಲಿಂದ ತರೋದುʼ ಎಂಬ ಚಿಂತಿ ಕಾಡಿದರೆ ತಾಲ್ಲೂಕಿನ 39 ಗ್ರಾಮ ಪಂಚಾಯಿತಿಗಳ ಪಿಡಿಒ ಹಿಡಿದು ವಾಟರ್ ಮ್ಯಾನ್ ತನಕ ಎಲ್ಲರಿಗೂ ʼನೀರಿನ ಟೆನ್ಸನ್ ಡ್ಯೂಟಿʼ ಮಾಡುವುದರಲ್ಲಿ ಬೆವರುತ್ತಾರೆ. ಬ್ಯಾಸಕಿ ಮುಗಿಯುವ ತನಕ ಅಧಿಕಾರಿಗಳಿಗೆ ʼಸಾರ್ ನೀರಿನ ಸಮಸ್ಯೆ ಭಾಳ್ ಆಗ್ಯಾದ್, ಏನಾದ್ರು ವ್ಯವಸ್ಥೆ ಮಾಡ್ರೀʼ ಎಂಬ ಮಾತು ಕೇಳುವುದು, ಅದನ್ನು ಬಗೆಹರಿಸಲು ಹರಸಾಹಸ ಪಡುವುದು ನಿತ್ಯವೂ ಇದ್ದೇ ಇದೆ.
ʼಸಾರ್ ನಮ್ಮೂರಿನ ವಾಟರ್ ಮ್ಯಾನ್ ಟೈಮಿಗಿ ನೀರ್ ಬಿಡ್ತಾ ಇಲ್ಲ. ದಿನಾಲೂ ನೀರಿನ ಸಲೇಕ್ ಭಾಳ್ ತಕ್ಲಿಪ್ ಆಗ್ತಿದೆ, ಹೊಸ ಬೋರವೆಲ್ ಹೊಡೀರಿʼ ಎಂದು ಕೆಲ ಊರಿನ ಜನ ಪಿಡಿಒಗೆ ಫೋನ್ ಮಾಡಿದ್ರೆ, ʼಆ ಊರಿನಲ್ಲಿ ನೀರಿನ ಸಮಸ್ಯೆ ಬೇಗ ಬಗೆಹರಿಸಿʼ ಅಂತ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಗರಂ ಆಗುವುದು. ಅವರು ಕೆಳ ಹಂತದ ಅಧಿಕಾರಿಗಳಿಗೆ ಕರೆ ಮಾಡಿ ʼಆ ಊರಲ್ಲಿ ಯಾವುದಾದರೂ ಖಾಸಗಿ ಬೋರವೆಲ್ ಇದ್ರೇ ಬಾಡಿಗೆ ತಕೊಂಡು ನೀರು ಕೊಡ್ರೀʼ ಅನ್ನೋದು. ʼಆ ತಾಂಡಾದಲ್ಲಿ ಬಾವಿ, ಬೋರವೆಲ್ ಎಲ್ಲಾ ಒಣಗಿ ಹೋಗ್ಯಾವ್ ಸಾರ್, ಸದ್ಯಕ್ಕೆ ʼನೀರಿನ ಟ್ಯಾಂಕರ್ ಹಚ್ಚೋಣʼ ಅಂತ ಪಂಚಾಯಿತಿ ಅಧಿಕಾರಿಗಳು ಸಮಜಾಯಿಸಿ ಹೇಳೋದು ಇಲ್ಲಿ ವಾಸ್ತವ.
ʼಮಹಿಳೆಯರು ನೀರಿಗಾಗಿ ಅಲೆದಾಡಿ ಜೀವ ತಾಳಲಾರದೇ ಕುಡಿಯುವ ನೀರಿಗಾಗಿ ಖಾಲಿ ಕೊಡ ಹಿಡಿದು ಪಂಚಾಯಿತಿ ಮುಂದೆ ಪ್ರತಿಭಟಿಸಿ ʼನಿಮ್ಗ್ ರೊಕ್ಕಾ ರೂಪಾಯಿ ಕೇಳಾತಿಲ್ಲ ಸಾಬ್ರೇ, ಕುಡಿಯೋಕೆ ನೀರು ಕುಡ್ರೀ ಸಾಕ್ʼ ಅಂತ ಗೋಗರೆಯುವ ಗತಿ ಅತ್ಯಂತ ಹಿಂದುಳಿದ ತಾಲ್ಲೂಕಿನ ಜನರ ಒಡಲ ನೋವಿನ ಸಂಕಟ.
ʼಮನೆ-ಮನೆಗೆ ಗಂಗೆʼ ಕನಸು ಈಡೇರಿಲ್ಲ :
ಔರಾದ್-ಕಮಲನಗರ ತಾಲ್ಲೂಕಿನಲ್ಲಿ ಒಟ್ಟು ₹250 ಕೋಟಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ಕೈಗೊಂಡರೂ ಜಿಲ್ಲೆಯಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ ಇರುವುದು ಇದೇ ತಾಲ್ಲೂಕಿನಲ್ಲಿ ಎಂಬುದು ಗಮನಾರ್ಹ ಅಂಶ. ಕೆಲ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಅರೆಬರೆ ಆದರೆ, ಕೆಲ ಗ್ರಾಮಗಳಲ್ಲಿ ಕೆಲಸ ಅರ್ಧಕ್ಕೆ ನಿಂತೋಗಿದೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದ ಬಹುತೇಕ ಗ್ರಾಮಗಳ ಜನರಿಗೆ ಮನೆ-ಮನೆಗೆ ʼಜಲೋತ್ಸವʼ ಎಂಬುದು ಕನಸಾಗಿಯೇ ಉಳಿದಿದೆ. ಜನರಿಗೆ ಶುದ್ಧ ನೀರು ಒದಗಿಸುವ ಉದ್ದೇಶದಿಂದ ಎರಡು ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಸ್ಥಾಪಿಸಲಾದ 110 ಶುದ್ಧ ನೀರಿನ ಘಟಕಗಳ ಅರ್ಧದಷ್ಟು ಬಾಗಿಲು ಮುಚ್ಚಿವೆ.
ನೀರಿನ ಸಮಸ್ಯಾತ್ಮಕ ಗ್ರಾಮಗಳು :
ಔರಾದ್ ತಾಲ್ಲೂಕಿನ 20 ಗ್ರಾಮ ಪಂಚಾಯಿತಿಗಳನ್ನು ಹೊಂದಿದೆ. ಇವುಗಳಲ್ಲಿ ಬಾದಲಗಾಂವ, ಖೇರ್ಡಾ(ಬಿ), ಸಾವರಗಾಂವ, ಚಿಂತಾಕಿ, ಬರದಾಪುರ, ನಾಗೂರ(ಎಂ), ನಾಗೂರ(ಎನ್), ಬೋರ್ಗಿ(ಜೆ), ಕೌಠಾ(ಬಿ), ಕೌಡಗಾಂವ, ಕಪ್ಪೆಕೇರಿ, ಶೆಂಬೆಳ್ಳಿ, ಚಟ್ನಾಳ, ರಮಣಾ ತಾಂಡಾ, ಖೇಮಾ ತಾಂಡಾ, ಮಹಾದೇವ ಪಾಟಿ ತಾಂಡಾ, ಟಾವರ್ ತಾಂಡಾ, ಎಕಲಾರ ತಾಂಡಾ, ಪೋಮಾ ದೇವಲಾ ತಾಂಡಾ, ಬಾರ್ಡರ್ ತಾಂಡಾ ಹಾಗೂ ಕಮಲನಗರ ತಾಲ್ಲೂಕಿನ 6 ಗ್ರಾಮ 2 ತಾಂಡಾಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾಗಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರದ ಶಾಸಕರು ಏನಂತಾರೆ :
ಔರಾದ್ ಶಾಸಕ ಪ್ರಭು ಚವ್ಹಾಣ ಅವರು ಕ್ಷೇತ್ರದಲ್ಲಿ ತಲೆತೋರಿದ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಔರಾದ ತಾಲ್ಲೂಕು ಪಂಚಾಯತ್ ಕಛೇರಿ ಸಭಾಂಗಣದಲ್ಲಿ ಮಾ.25ರಂದು ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ʼಪ್ರತಿದಿನ ಒಂದಿಲ್ಲೊಂದು ಗ್ರಾಮದ ಜನರು ನೀರಿನ ಸಮಸ್ಯೆ ಹೇಳಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕರಿಂದ ನಿರಂತರ ದೂರುಗಳು ಬರುತ್ತಿವೆ. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಛೇರಿಯಲ್ಲಿ ಲಭ್ಯವಿದ್ದು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಖಾಸಗಿ ಬೋರ್‌ವೆಲ್ ಇಲ್ಲವೇ ಹೊಸ ಬೋರ್‌ವೆಲ್ ಕೊರೆಸಿ ನೀರು ಸರಬರಾಜು ಮಾಡಬೇಕು. ಸಾಧ್ಯವಾದಷ್ಟು ಸ್ಥಳೀಯವಾಗಿಯೇ ಪರಿಹಾರ ಕಲ್ಪಿಸಬೇಕು. ಸಮಸ್ಯೆಯ ತೀವ್ರತೆ ಹೆಚ್ಚಿರುವ ಗ್ರಾಮಗಳಲ್ಲಿ ಮಾತ್ರ ಟ್ಯಾಂಕರ್ ಮೂಲಕ ನೀರು ಪೂರೈಸಲು ಆದ್ಯತೆ ಕೊಡಬೇಕುʼ ಎಂದು ತಿಳಿಸಿದರು.
ʼಜೆಜೆಎಂ ಕಾಮಗಾರಿ ಸಮರ್ಪಕವಾಗಿ ನಡೆದರೆ ಇಷ್ಟೊಂದು ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕಾರಣದಿಂದಾಗಿ ಯೋಜನೆ ಸಂಪೂರ್ಣ ವಿಫಲವಾಗಿದೆ. ಈ ಯೋಜನೆಯಡಿ ಅವಕಾಶವಿರುವ ಕಡೆ ಹೊಸ ಬಾವಿ, ಕೊಳವೆಬಾವಿ ಕೊರೆಸಿಕೊಳ್ಳಬೇಕುʼ ಎಂದು ಹೇಳಿದ್ದಾರೆ.
ಪಾಳು ಬಿದ್ದ ಪುರಾತನ ನೀರಿನ ಮೂಲಗಳು :
ತಾಲ್ಲೂಕಿನ 35ಕ್ಕೂ ಹೆಚ್ಚು ಕೆರೆ ಹಾಗೂ ಪ್ರತಿ ಗ್ರಾಮಗಳಲ್ಲಿ ಒಂದೆರಡು ಪುರಾತನ ಬಾವಿಗಳು ಇದ್ದೇ ಇವೆ. ಆದರೆ ಅವೆಲ್ಲವೂ ಬಹುತೇಕ ಮುಚ್ಚುವ ಹಂತಕ್ಕೆ ತಲುಪಿದರೆ, ಉಳಿದ ಕೆಲ ಬಾವಿಗಳು ಒತ್ತುವರಿಯಿಂದ ಮಾಯವಾಗಿವೆ. ಬೋರ್‌ವೆಲ್ ಇರದೇ ಇರುವ ಕಾಲದಲ್ಲಿ ಜನರು ತಮ್ಮೂರಿನ ಬಾವಿಗಳ ಮೇಲೆ ಅವಲಂಬಿತರಾಗಿದ್ದರು. ಇದೀಗ ಹಳೆ ಬಾವಿ, ಕೆರೆ, ಕಟ್ಟೆಗಳ ಮೂಲಗಳ ಬಗ್ಗೆ ನಮಗ್ಯಾರಿಗೂ ಆಸಕ್ತಿ ಉಳಿದಿಲ್ಲ. ʼನಮ್ಗ್ ನೀರು ಕೊಡಿʼ ಅಂತ ಕೇಳುವ ಜನರು ʼನಮ್ಮೂರಿನ ಹಳೆ ಬಾವಿಯೋ, ಕೆರೆಯೋ ಅಭಿವೃದ್ಧಪಡಿಸಿʼ ಅಂತ ಕೇಳುವ ಇಚ್ಚಾಶಕ್ತಿಯೂ ಕಾಣುತ್ತಿಲ್ಲ. ಜನರೇ ನೆನಪಿಸದಿದ್ದರೆ ನಮ್ಮನ್ನಾಳುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ದೂರದ ಮಾತು.
ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿರುವ ಔರಾದ್ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಶ್ರಿತ ಕೃಷಿ, ಇಲ್ಲಿ ನೀರಾವರಿ ಪ್ರದೇಶ ಕಡಿಮೆಯಾಗಿದೆ. ಮಾಂಜ್ರಾ ನದಿ ದಡದಲ್ಲಿರುವ ಕೆಲ ಗ್ರಾಮಗಳ ರೈತರು ಮಾತ್ರ ಹೆಚ್ಚು ನೀರಾವರಿ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದ ಕಡೆ ಕೆರೆ, ಬಾವಿ, ಬೋರ್‌ವೆಲ್ ನೀರಿನಿಂದ ಒಂದಿಷ್ಟು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಆದರೆ ನದಿ ಪಕ್ಕದಲ್ಲೇ ಇರುವ ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿರುವುದು ವಿಪರ್ಯಾಸ ಎನ್ನಬಹುದು.
ಈ ಸುದ್ದಿ ಓದಿದ್ದೀರಾ? ಮರಗಳನ್ನು ಕಡಿಯುವುದು ನರಹತ್ಯೆಗಿಂತಲೂ ಭೀಕರ: ಸುಪ್ರೀಂ ಕೋರ್ಟ್
ಬ್ಯಾಸಕಿ ಬಂತಂದ್ರೆ ನೀರಿಗೆ ʼಬರʼ ಇರೋದು ಗ್ಯಾರಂಟಿ, ಅದಕ್ಕೆ ತಾತ್ಕಾಲಿಕ ಪರಿಹಾರ ಹುಡುಕಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ಫೈಲ್ ಹಿಡಿದು ಎಡತಾಕುವುದು ಸಾಮಾನ್ಯ. ಕುಡಿಯುವ ನೀರಿಗಾಗಿ ದುಡ್ಡಿನ ಕೊರತೆ ಇಲ್ಲ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಕರ್ತವ್ಯ ಎಂದು ಸರ್ಕಾರ ಕೋಟ್ಯಾಂತರ ಅನುದಾನ ಸುರಿದರೂ ಈ ಭಾಗದ ಜನರು ಗುಟುಕು ನೀರಿಗಾಗಿ ಪರದಾಟ ನಡೆಸುತ್ತಾ ʼಜಿಂದಗಿʼ ಮಾಡುವುದು ಇನ್ನೂ ಮುಂದುವರೆದಿದೆ. ಬ್ಯಾಸಕಿ ದಿವಸದ ಬಿಸಿಲಿನ ಬರೆಗೆ ಈ ಬರ ಅಂದ್ರೆ ಯಾರಿಗೆ ಕಷ್ಟ, ಯಾರಿಗೆ ಇಷ್ಟ? ಎಂಬುವುದು ತಿಳಿಯದೇ ಉಳಿದಿರುವ ಪ್ರಶ್ನೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.
ಪ್ರಸ್ತುತ ಸನ್ನಿವೇಶದ ಕುರಿತು ಮಾತನಾಡುವ ಬರಹ.
ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹು ಗ್ರಾಮಗಳ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ, ಮಂಜರಾ ನದಿಯಿಂದ ನೀರು ಸರಬರಾಜು ಮಾಡಬೇಕು. ಕೇವಲ ಇಷ್ಟು ಮಾಡಿದರೆ ಮಾತ್ರ ಸಾಲದು ಮಂಜಿರಾ ನದಿಗೆ ಅಲ್ಲಲ್ಲಿ ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರನ್ನು ಕಾಯ್ದಿರಿಸಬೇಕು.
ಈ ಕೆಲಸಕ್ಕಾಗಿ ಸರ್ಕಾರ ಬಹು ಕೋಟಿ ರೂಪಾಯಿ ಮೀಸಲಿಡಬೇಕು.
ಇದು ಕಷ್ಟದ ಕೆಲಸವೇನಲ್ಲ ಜನ ಪ್ರತಿನಿಧಿಗಳು ಧ್ವನಿ ಎತ್ತಬೇಕು ಸರ್ಕಾರ ಗಮನಹರಿಸಬೇಕು ಅಷ್ಟೇ.
ಕೇವಲ ಮನೆ ಮನೆಗೆ ಗಂಗೆ ಎಂದು ನಳ ನೀಡಿದರೆ ಅ ನಳಕ್ಕೆ ಗಂಗೆ (ನೀರು) ಎಲ್ಲಿಂದ ಬರಬೇಕು.
Really this news is not only a news. The reality of Aurad B talluka. The writer has also experienced the problem. No reporters dared to write like this before. May be there are some hidden things are there behind this drama of every year which sets it’s play in March and ends in July.