ಕಾರು-ಬೈಕ್ ಮಧ್ಯೆ ಸಿನಿಮೀಯ ರೀತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.
ಬೀದರ್ -ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನವಾಡ ಗ್ರಾಮದ ಸಮೀಪ ರವಿವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ದುರ್ಘಟನೆ ಜರುಗಿದೆ. ಜನವಾಡ ಗ್ರಾಮದ ಉಮೇಶ ಕಾಂಬಳೆ (40) ಸಾವನ್ನಪ್ಪಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ದಿಲೀಪ ಎಂಬಾತನನ್ನು ಬೀದರ್‌ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ಕಡೆಯಿಂದ ಔರಾದ್ ಕಡೆಗೆ ವೇಗವಾಗಿ ಹೋಗುತ್ತಿದ್ದ ತೆಲಂಗಾಣ ಮೂಲದ ಕಾರು ರಸ್ತೆ ಪಕ್ಕದಲ್ಲಿ ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಸಿನಿಮೀಯ ರೀತಿಯಲ್ಲಿ ಬೈಕ್ ಸವಾರರು ಐದಾರು ಅಡಿ ದೂರ ಹಾರಿ ಬಿದ್ದಿದ್ದಾರೆ. ಅಪಘಾತದ ಭೀಕರ ದೃಶ್ಯಗಳು ಅಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಾರಿನಲ್ಲಿದ್ದ ಚಾಲಕ ಹಾಗೂ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಘಟನೆ ಬಳಿಕ ಕಾರಿನಿಂದ ಇಳಿದು ಎಲ್ಲರೂ ಪರಾರಿಯಾಗಿದ್ದಾರೆ. ಜನವಾಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.