ಸ್ವಾಮಿ ವಿವೇಕಾನಂದರ ಜಯಂತಿಯನ್ನು ಯುವ ಸಪ್ತಾಹವನ್ನಾಗಿ ಆಚರಿಸುವ ಮಾದರಿಯಲ್ಲಿ ಬಸವ ಜಯಂತಿಯ ದಿನದಂದು ಪ್ರಸಕ್ತ ಸಾಲಿನಿಂದ ಸಮತಾ ಸಪ್ತಾಹ ಆಚರಿಸುವ ಮೂಲಕ ಸಾಂಸ್ಕೃತಿಕ ನಾಯಕನಿಗೆ ರಾಜ್ಯ ಸರಕಾರ ವಿಶೇಷ ಗೌರವ ಸಲ್ಲಿಸಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮನವಿ ಮಾಡಿದ್ದಾರೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ʼತಾವು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೇಲೆ ತಮ್ಮ ನೇತೃತ್ವದ ಸರಕಾರ ವಿಶ್ವಗುರು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಿರುವುದು ಅತ್ಯಂತ ಚಾರಿತ್ರಿಕ ಸಂಗತಿಯಾಗಿದೆ. ಬಸವಾದಿ ಶರಣರು ಸಮಾನತೆಯ ಕಲ್ಯಾಣ ರಾಜ್ಯ ಕಟ್ಟಿದ್ದರು. ಆ ಮೌಲ್ಯಗಳನ್ನು ಜನಮನದಲ್ಲಿ ಬಿತ್ತುವುದಕ್ಕಾಗಿ ಪ್ರಸಕ್ತ ಸಾಲಿನ ಬಸವ ಜಯಂತಿಯೆಂದು ಕೂಡಲಸಂಗಮದಲ್ಲಿ ತಮ್ಮ ಸರಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿರುವ ವಿಷಯ ತಿಳಿದು ನಮಗೆ ಅತ್ಯಂತ ಸಂತೋಷವಾಗಿದೆʼ ಎಂದರು.
ʼಬಸವಾದಿ ಶರಣರ ಚಿಂತನೆಗಳನ್ನು ಅಂತರ್‌ಬಾಹ್ಯವಾಗಿ ನಂಬಿಕೊಂಡಿರುವ ತಾವು ಬಸವತತ್ವದ ಕುರಿತು ವಿಶೇಷ ಅಭಿಮಾನ ಮತ್ತು ಅಭಿರುಚಿ ಹೊಂದಿದ್ದೀರಿ ಎಂಬುವುದಕ್ಕೆ ತಾವು ತೆಗೆದುಕೊಂಡ ಅನೇಕ ದೃಢ ನಿರ್ಧಾರಗಳೇ ಸಾಕ್ಷಿಯಾಗಿವೆ. ಬಸವತತ್ವದ ಅನುಷ್ಠಾನವೇ ತಮ್ಮ ಸರಕಾರದ ಉದ್ದೇಶವಾಗಿದೆ. ಬಸವಣ್ಣನವರು ನೀಡಿರುವ ಜಾಗತಿಕ ಮೌಲ್ಯಗಳಲ್ಲಿ ಸಮಾನತೆಯ ಮೌಲ್ಯ ಅತ್ಯಂತ ಮಹತ್ತರ ಹಾಗೂ ಇಂದಿಗೂ ಪ್ರಸ್ತುತವಾಗಿದೆʼ ಎಂದು ವಿಶ್ಲೇಷಿಸಿದರು.

ʼಬಸವಣ್ಣನವರ ಜಯಂತಿ ದಿನದಿಂದ ಮುಂದಿನ ಏಳು ದಿನಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳು, ಶಾಲಾ-ಕಾಲೇಜುಗಳು, ಸರಕಾರಿ ಕಾರ್ಯಾಲಯಗಳು, ವಿವಿಧ ಸಂಘ-ಸಂಸ್ಥೆಗಳಲ್ಲಿ ಸಮತಾ ಮಹೋತ್ಸವ, ಸಮತಾ ಸಮ್ಮೇಳನ, ಸಮತಾ ವಿಚಾರ ಸಂಕಿರಗಳು, ಚರ್ಚಾ ಗೋಷ್ಠಿಗಳು ಹಮ್ಮಿಕೊಳ್ಳುವ ಮೂಲಕ ಬಸವಾದಿ ಶರಣರ ಸಮತಾವಾದವನ್ನು ಪ್ರತಿಪಾದಿಸಿ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವನ್ನಾಗಿ ಮಾಡಬಹುದು. ವಿಶೇಷವಾಗಿ ಯುವಕರಲ್ಲಿ ಸಮಾನತೆಯ ಮೌಲ್ಯ ಬಿತ್ತುವ ಅಗತ್ಯತೆ ಹಿಂದಿನಕ್ಕಿಂತಲೂ ಇಂದು ಅವಶ್ಯಕವಾಗಿದೆʼ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಇಂದು ಪಿಯುಸಿ ಫಲಿತಾಂಶ: ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
ಆ ದಿಶೆಯಲ್ಲಿ ಬಸವಾದಿ ಶರಣರ ಸಮತಾ ಮೌಲ್ಯಾಧಾರಿತ ರಾಜ್ಯಮಟ್ಟದ ಭಾಷಣ ಸ್ಪರ್ಧೆ, ನಿಬಂಧ ಸ್ಪರ್ಧೆ, ವಚನ-ನಿರ್ವಚನ ಸ್ಪರ್ಧೆ, ವಚನ ಕಂಠಪಾಠ ಸ್ಪರ್ಧೆ, ವಚನ ಗಾಯನ ಸ್ಪರ್ಧೆ, ವಚನ ನೃತ್ಯ, ಶರಣರ ರೂಪಕ, ನಾಟಕ ಸ್ಪರ್ಧೆ, ಶರಣರ ಕುರಿತು ಕಿರು ಚಲನಚಿತ್ರ ಮಹೋತ್ಸವ ಮುಂತಾದ ರಚನಾತ್ಮಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲು ಅವಕಾಶ ದೊರೆಯುತ್ತದೆ. ಈ ದಿಶೆಯಲ್ಲಿ ತಾವು ಸಕಾರಾತ್ಮಕವಾಗಿ ಈ ವಿಷಯಕ್ಕೆ ಸ್ಪಂದಿಸುವ ಮೂಲಕ ಬಸವ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೀರಿ ಎಂದು ನಾವು ಬಲವಾಗಿ ನಂಬಿದ್ದೇವೆ ಎಂದು ಶ್ರೀಗಳು ಸಿಎಂಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.