ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ಬೀದರ ಹಾಗೂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಕೋರ ವಿಜ್ಞಾನ ಚಟುವಟಿಕೆ ಕೇಂದ್ರದ ವತಿಯಿಂದ 7 ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ 10 ದಿನಗಳ ಬೇಸಿಗೆ ಶಿಬಿರ ಕಾರ್ಯಕ್ರಮಕ್ಕೆ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕಾರ್ಯದರ್ಶಿ ಡಿ.ರಣದೀಪ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ʼಜಗತ್ತಿನಲ್ಲಿ ಶಿಕ್ಷಣಕ್ಕೆ ಅತ್ಯಂತ ಮಹತ್ವವಿದ್ದು, ಜ್ಞಾನ ಬದುಕಿನ ಅಂಧಕಾರ ಕಳೆದು ಬೆಳಕು ನೀಡುತ್ತದೆ. ಶಿಕ್ಷಣದಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯವಿದೆʼ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಮಾತನಾಡಿ, ʼಮಕ್ಕಳಿಗೆ ಪಠ್ಯ ವಿಷಯಗಳನ್ನು ಹೊರತುಪಡಿಸಿ ರಜಾ ಅವಧಿಯಲ್ಲಿ ಚಿತ್ರಕಲೆ, ಪೇಂಟಿಂಗ್ಸ್, ನೃತ್ಯ ಕಲೆ, ರಾಕೆಟ್ ಆವಿಷ್ಕಾರ, ಹಿಂದುಸ್ತಾನಿ ಸಂಗೀತ, ಕೊಳಲು ವಾದ್ಯ ಇತರ ಚಟುವಟಿಕೆಗಳು ನಡೆಸಬೇಕು, ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕುʼ ಎಂದು ತಿಳಿಸಿದರು.
ಶಿಬಿರದಲ್ಲಿ ಹತ್ತಿರದ 7ರಿಂದ 10ನೇ ತರಗತಿಯ ನಾಲ್ಕೈದು ಶಾಲೆಗಳ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಲೀಂ ಪಾಷಾ, ಅಗಸ್ತ್ಯ ಫೌಂಡೇಷನ್ ಸಿಬ್ಬಂದಿ ಹಾಗೂ ಶಿಕ್ಷಣ ಇಲಾಖೆಯ ಸಂಗ್ರಾಮಪ್ಪ ಖಂಡಾಳೆ, ಗೋಪಾಲರಾವ ಪಡವಳಕರ, ಸೈಯದ್ ಫುರ್ಖಾನ್, ಬಿಆರ್‌ಸಿ ಧನರಾಜ ಗುಡಮೆ, ಹುಡಗೆ ಗುಂಡಪ್ಪ ಸೇರಿದಂತೆ ಸಿಬ್ಬಂದಿ, ಅಧಿಕಾರಿಗಳು ಉಪಸ್ತಿತರಿದ್ದರು.
ಇದನ್ನೂ ಓದಿ : ಬೀದರ್ | ಅಲ್ಪಸಂಖ್ಯಾತರ ಶಾಲಾ-ಕಾಲೇಜು ʼಅತಿಥಿʼ ಆಯ್ಕೆಗೆ ಪ್ರವೇಶ ಪರೀಕ್ಷೆ: ಉಪವಾಸ ಧರಣಿ ಎಚ್ಚರಿಕೆ!