ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಕ್ರೈಸ್ತ ಸಮುದಾಯದ ಮೇಲೂ ದೌಜನ್ಯಗಳು ನಡೆಯುತ್ತಿವೆ. ಗಲಭೆಯನ್ನು ನಿಯಂತ್ರಿಸಲು ಅಲ್ಲಿನ ಸರ್ಕಾರ ವಿಫಲವಾಗಿದೆ. ಆ ಸರ್ಕಾರವನ್ನು ವಜಾಗೊಳಿಸಿ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಅಖಿಲ ಭಾರತ ಕ್ರೈಸ್ತ ಮಹಾಸಭಾ ಒತ್ತಾಯಿಸಿದೆ.
ಬೀದರ್ ಜಿಲ್ಲೆಯ ಹುಮನಾಬಾದನಲ್ಲಿ ಅಖಿಲ ಭಾರತ ಕೈಸ್ತ ಮಹಾಸಭಾ ಹಾಗೂ ದಯಾಸಾಗರ ಸಾಮಾಜಿಕ ಮತ್ತು ಧಾರ್ಮಿಕ ಸಂಘಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಗ್ರೇಡ್-2 ತಹಸೀಲ್ದಾರ್ ಮಂಜುನಾಥ್ ಪಾಂಚಾಳ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಪ್ರಜಾಪ್ರಭುತ್ವ ದೇಶ ಭಾರತದಲ್ಲಿ ಸರ್ವರಿಗೂ ಬದುಕುವ ಹಕ್ಕು ಸಂವಿಧಾನಾತ್ಮಕವಾಗಿ ದಕ್ಕಿದೆ. ಆದರೆ, ಮಣಿಪುರದಲ್ಲಿ ಕ್ರೈಸ್ತ ಸಮುದಾಯದವರ ಮೇಲೆ ಧರ್ಮ, ಜಾತಿ, ನಿಂದನೆ, ಅಮಾನುಷ ಹಲ್ಲೆಗಳು ನಡೆದಿವೆ. ಮಣಿಪುರ ಹಿಂಸಾಚಾರದಲ್ಲಿ 150ಕ್ಕೂ ಅಧಿಕವಾಗಿ ಜನರು ಸಾವನ್ನಪ್ಪಿದ್ದಾರೆ. 300ಕ್ಕೂ ಹೆಚ್ಚು ಚರ್ಚೆಗಳನ್ನು ಧ್ವಂಸಗೊಳಿಸಿದ್ದಾರೆ. ಈ ಘಟನೆಯಿಂದ 50 ಸಾವಿರ ಕಟುಂಬಗಳು ಬೀದಿ ಪಾಲಾಗಿವೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
“ತಾಯಿ ಸ್ಥಾನದಲ್ಲಿರುವ ಇಬ್ಬರು ಹೆಣ್ಣುಮಕ್ಕಳನ್ನು ನಗ್ನ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆ ಘಟನೆ ಅತ್ಯಂತ ಹೀನ ಕೃತ್ಯವಾಗಿದ್ದು, ದೇಶವೇ ತಲೆ ತಗ್ಗಿಸುವಂತಾಗಿದೆ. ಮಣಿಪುರದ ಬಿಜೆಪಿ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಬಕಾ ಸಾಥ್ ಸಬಕಾ ವಿಕಾಸ್, ಬೇಟಿ ಪಡಾವೊ ಬೇಟಿ ಬಚ್ಚವೋ ಎಂಬ ಘೋಷಣೆ ಕಣ್ಮರೆಯಾಗಿದೆ. ಕ್ರೈಸ್ತ ಧರ್ಮಿಯರ ಮೇಲೆ ನಡೆದ ದೌಜನ್ಯವನ್ನು ತಡೆಯಲು ಮಣಿಪುರ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು, ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು” ಎಂದು ಒತ್ತಾಯಿಸಿದ್ದಾರೆ.
“ಕ್ರೈಸ್ತ ಧರ್ಮಿಯರ ಮೇಲೆ ದೌಜನ್ಯ ಎಸಗಿ, ಚರ್ಚಗಳನ್ನು ಧ್ವಂಸ ಮಾಡಿರುವ ಕೀಡಿಗೇಡಿಗಳನ್ನು ಬಂಧಿಸಿ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಆರೋಪಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ಕ್ರೈಸ್ತ ಮಹಾಸಭಾ ಸಂಸ್ಥಾಪಕ ಪ್ರಜ್ವಲ್ ಸ್ವಾಮಿ, ಹುಮನಾಬಾದ್ ತಾಲೂಕು ಅಧ್ಯಕ್ಷ ಆರ್.ರೋಹನ್, ದಯಾಸಾಗರ ಸಾಮಾಜಿಕ ಮತ್ತು ಧಾರ್ಮಿಕ ಸಂಘದ ಅಧ್ಯಕ್ಷ ಪ್ರಭುದಾಸ ಸೇರಿದಂತೆ ಸಮಾಜದ ಪ್ರಮುಖರಾದ ಅರ್ಜುನ್, ಸಂಜಯ ಜಾಗಿರದಾರ, ರಾಜು ಕಡ್ಯಾಳ, ಜೈರಾಜ ವೈದ್ಯ, ಜಾಕ್ಸನ್, ಸಂಪತ್ ದರ್ಗಿ, ಸುನಿಲ ಮಾನಕರೆ ಸೇರಿದಂತೆ ಸಂಘಟನೆಯ ಮಹಿಳೆಯರು ಭಾಗವಹಿಸಿದ್ದರು.