ಕಾರಂಜಾ ಯೋಜನೆಯಲ್ಲಿ ಜಮೀನು ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು ಎಂದು ಆಗ್ರಹಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಬೀದರ್ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರೈತರು ಕೊರಳಿಗೆ ಹಗ್ಗ ಕಟ್ಟಿಕೊಂಡು ವಿನೂತನವಾಗಿ ಪ್ರತಿಭಟಿಸಿದರು. ‘ಬೇಕೇ ಬೇಕು ಪರಿಹಾರ ಬೇಕು, ಇಲ್ಲವೇ ಸಾಮೂಹಿಕ ಆತ್ಮಹತ್ಯೆಗೆ ಅವಕಾಶ ಕೊಡಿ’ ಎಂದು ಘೋಷಣೆ ಕೂಗಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್‍ಯಾಲಿ ನಡೆಸಲು ಮುಂದಾದರು. ಜಿಲ್ಲಾಧಿಕಾರಿ ಕಚೇರಿಗೆ ಹೋಗುವುದನ್ನು ತಡೆದ ಪೊಲೀಸರು 30ಕ್ಕೂ ಅಧಿಕ ಮಂದಿ ರೈತರನ್ನು ವಶಕ್ಕೆ ಪಡೆದಿದ್ದು, ಬಸ್ಸಿನಲ್ಲಿ ಭಾಲ್ಕಿ ತಾಲೂಕಿನ ಕಡೆಗೆ ಕರೆದೊಯ್ದು ಸಂಜೆ ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಕಾರಂಜಾ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕಾರಂಜಾ ಜಲಾಶಯ ನಿರ್ಮಿಸಿ 35 ವರ್ಷಗಳಾಗಿವೆ. ಜಮೀನು ಕಳೆದುಕೊಂಡ ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು 887 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗುತ್ತಿದೆ. ಆದರೆ ಯಾವುದೇ ಸರ್ಕಾರ ನಮ್ಮ ಬೇಡಿಕೆ ಈಡೇರಿಕೆಗೆ ಮುಂದಾಗುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಲೋಕಸಭೆ ಚುನಾವಣೆಯಲ್ಲಿ ಸಾಗರ್ ಖಂಡ್ರೆ ಅವರಿಗೆ ಬಹಿರಂಗವಾಗಿ ಬೆಂಬಲಿಸಿದ್ದೆವು. ಆದರೆ ಸಾಗರ್ ಖಂಡ್ರೆಯವರು ಸಂಸದರಾಗಿ ಆಯ್ಕೆಯಾದ ಬಳಿಕ ಇತ್ತ ತಿರುಗಿಯೂ ನೋಡಿಲ್ಲ. ಇದರಿಂದ 28 ಹಳ್ಳಿಗಳ ಸಂತ್ರಸ್ತರು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಲಾಗಿದೆ. ಅದರಂತೆ ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ವೇಳೆ ಪೊಲೀಸರು ನಮ್ಮನ್ನು ತಡೆದಿದ್ದಾರೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ” ಎಂದು ಎಚ್ಚರಿಕೆ ನೀಡಿದರು.
“ಕಾರಂಜಾ ಸಂತ್ರಸ್ತರ ಪ್ರತಿಭಟನೆ ವಿಷಯ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ನನಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸಭೆ ನಡೆಸಲು ನಾಳೆ ಮಧ್ಯಾಹ್ನ ವೇಳೆಗೆ ದಿನಾಂಕ ನಿಗದಿಪಡಿಸುವೆ ಎಂದು ಭರವಸೆ ನೀಡಿದ್ದಾರೆ. ಏನಾಗುತ್ತದೆ ನೋಡೋಣ” ಎಂದು ಚಂದ್ರಶೇಖರ ಪಾಟೀಲ ಈ ದಿನ.ಕಾಮ್‌ಗೆ ತಿಳಿಸಿದ್ದಾರೆ.
ವಿಷ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ರೈತ
“ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೇಕುಳಗಿ ಗ್ರಾಮದ ಕಾರಂಜಾ ಸಂತ್ರಸ್ತ ರೈತ ನಾಗಶೆಟ್ಟಿ ಎಂಬುವವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ತಕ್ಷಣವೇ ಅವರಿಂದ ಪೊಲೀಸರು ವಿಷದ ಡಬ್ಬಿ ಕಸಿದುಕೊಂಡು, ಅವರನ್ನು ಪೊಲೀಸ್ ಜೀಪಿನಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ” ಎಂದು ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಾಟೀಲ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಗ್ರಾಮದ ನಟ್ಟನಡುವೆ ಕಸ ವಿಲೇವಾರಿ ಘಟಕ; ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ
ಪ್ರತಿಭಟನೆಯಲ್ಲಿ ಕಾರಂಜಾ ಹೋರಾಟ ಸಮಿತಿಯ ಪ್ರಮುಖರಾದ ನಾಗಶೆಟ್ಟಿ ಹಚ್ಚಿ, ರಾಜಕುಮಾರ ಕಮಲಪೂರೆ, ಮಾದಪ್ಪಾ ಖೌದೆ, ಸಂಗಾರೆಡ್ಡಿ ಔರಾದ್, ಯೂಸುಫ್ ಮಿಯ್ಯಾ ರೇಕುಳಗಿ, ರಾಜಶೇಖರ ಖೇಣಿರಂಜೋಳ, ಚಂದ್ರಶೇಖರ ಮುತ್ತಣ್ಣಾ, ಲಕ್ಷ್ಮಿಬಾಯಿ ಸಂಗೊಳಗಿ, ವಿದ್ಯಾವತಿ ಸೇರಿದಂತೆ ಅನೇಕರು ಇದ್ದರು.