ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ದಿನದಂದು ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಂಡಿರುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ನಿರ್ಧಾರ ವಿರೋಧಿಸಿ ನಗರದಲ್ಲಿ ಬಸವಪರ ಸಂಘಟನೆಗಳ ನೇತ್ರತ್ವದಲ್ಲಿ ಪ್ರತಿಭಟನೆ ನಡೆಯಿತು.
ಬೀದರ್ ನಗರದ ವಿಶ್ವಗುರು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಜಿಲ್ಲೆಯ ವಿವಿಧ ಮಠಾಧೀಶರು, ಬಸವಪರ ಸಂಘಟನೆಗಳ ಪ್ರಮುಖರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜಾಧ್ಯಕ್ಷ ಶಂಕರ ಬಿದರಿ ವಿರುದ್ಧ ಘೋಷಣೆ ಕೂಗಿದರು.
ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ʼವೀರಶೈವ ಮಹಾಸಭಾವು ಪಂಚಾಚಾರ್ಯರ ಯುಗಮಾನೋತ್ಸವವನ್ನು ಏ.30ರಂದು ನಡೆಯುವ ಬಸವ ಜಯಂತಿ ದಿನದಂದು ಆಚರಿಸುವಂತೆ ಆದೇಶ ನೀಡಿರುವುದು ಅತ್ಯಂತ ಖಂಡನೀಯ. ಬಸವಣ್ಣನವರು ಸಾರಿದ ತತ್ವಗಳ ಮೇಲೆ ನಂಬಿಕೆ ಹೊಂದಿದ ಲಕ್ಷಾಂತರ ಲಿಂಗಾಯತ ಸಮಾಜ ಬಾಂಧವರ ಹಾಗೂ ಬಸವಭಕ್ತರ ಭಾವನೆಗಳಿಗೆ ಧಕ್ಕೆ ತರುವ ಗಂಭೀರ ವಿಷಯವಾಗಿದೆ. ಹೀಗಾಗಿ ಮುಂದಿನ ಎರಡ್ಮೂರು ದಿನಗಳಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದವರು ಈ ನಿರ್ಧಾರ ಹಿಂಪಡೆಯಬೇಕುʼ ಎಂದು ಆಗ್ರಹಿಸಿದರು.
ಬಸವಕಲ್ಯಾಣ ಬಸವ ಮಹಾಮನೆಯ ಸಿದ್ಧರಾಮ ಬೆಲ್ದಾಳ ಶರಣರು ಮಾತನಾಡಿ, ʼಬಸವಪೂರ್ವ ಕಾಲದಲ್ಲಿ ವೀರಶೈವ ಎಂಬುದು ಇರಲೇ ಇಲ್ಲ. ವೀರಶೈವ ಪ್ರಾಚೀನ ಪದ ಅಲ್ಲ, ಪಂಚಪೀಠಗಳು ಪ್ರಾಚೀನ ಅಲ್ಲ. ರೇಣುಕಾಚಾರ್ಯ ಹುಟ್ಟಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ರೇವಣಸಿದ್ದ ಜನಿಸಿದ್ದಾರೆ, ಪಂಚಾಚಾರ್ಯರು ರೇವಣಸಿದ್ದ ಅವರನ್ನೇ ರೇಣುಕಾಚಾರ್ಯ ಎಂದು ಕರೆಯುತ್ತಾರೆ. 15ನೇ ಶತಮಾನದ ಬಳಿಕ ಪಂಚಪೀಠಗಳು ಹುಟ್ಟಿದ್ದು, ವೀರಶೈವ ಎಂಬುದು ಧರ್ಮವೇ ಅಲ್ಲʼ ಎಂದು ಹೇಳಿದರು.

ʼಬಸವ ಸಂಸ್ಕೃತಿ ಹಾಗೂ ಪಂಚಾಚಾರ್ಯ ಸಂಸ್ಕೃತಿ ಭಿನ್ನವಾಗಿವೆ. ಬಸವ ಜಯಂತಿಗೂ ರೇಣುಕಾಚಾರ್ಯರಿಗೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಬಸವ ಜಯಂತಿ ದಿನದಂದು ರೇಣುಕಾಚಾರ್ಯ ಜಯಂತಿ ಆಚರಿಸಲು ಮುಂದಾಗಿರುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕ್ರಮ ಖಂಡನೀಯ, ಇದು ಕೂಡಲೇ ಹಿಂಪಡೆಯಬೇಕುʼ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ʼಏಪ್ರಿಲ್ 30ರಂದು ನಾಡಿನಾದ್ಯಂತ ಜರಗಲಿರುವ ಬಸವ ಜಯಂತಿಯ ದಿನದಂದು ಬೆಂಗಳೂರು ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಳ್ಳುತ್ತಿರುವುದು ಪವಿತ್ರ ದಿನದ ತಾತ್ವಿಕತೆ, ಐತಿಹಾಸಿಕತೆ ಹಾಗೂ ಅದರ ಮಹತ್ವವನ್ನು ಕುಗ್ಗಿಸುವಂತೆ ಪರಿಣಮಿಸುತ್ತಿದೆ. ಇದರಿಂದ ಸಮಾಜದಲ್ಲಿ ಗೊಂದಲ ಮೂಡಿಸುತ್ತಿದೆʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು ಕುಂಬಳಗೂಡ ಡಾ.ಚನ್ನಬಸವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು, ಬಸವಕಲ್ಯಾಣ ಬಸವಧರ್ಮ ಪೀಠದ ಸಿದ್ಧರಾಮೇಶ್ವರ ಸ್ವಾಮೀಜಿ, ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಬಿಕೆ ಪಾಟೀಲ್, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಬಸವ ಕೇಂದ್ರ ಜಿಲ್ಲಾಧ್ಯಕ್ಷ ಶರಣಪ್ಪ ಮಿಠಾರೆ, ಲಿಂಗಾಯತ ಸಮನ್ವಯ ಸಮಿತಿ ಸಂಚಾಲಕ ಶ್ರೀಕಾಂತ ಸ್ವಾಮಿ ಮಾತನಾಡಿದರು.
ʼಬಸವಣ್ಣನವರ ತಾತ್ವಿಕತೆಯ ಬೆಳಕು ಹರಡುವ, ಸಮಾಜ ಪರಿವರ್ತನೆಗೆ ಪೂರಕವಾದ ಹಾಗೂ ನೀತಿ, ಶ್ರದ್ದೆ, ತತ್ವಗಳಿಗೆ ಪ್ರಾಮುಖ್ಯತೆ ನೀಡುವ ಮಹತ್ತರ ದಿನ. ಇತಿಹಾಸವಿಲ್ಲದ ಹಾಗೂ ಬಸವ ಜಯಂತಿಗೆ ಸಂಬಂಧವಿಲ್ಲದ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನದ ತಾತ್ವಿಕ ಮಹತ್ವವನ್ನು ಕ್ಷೀಣಗೊಳಿಸುತ್ತದೆ. ಇದು ಲಿಂಗಾಯತ ಸಮುದಾಯದ ಹಾಗೂ ಸಮಸ್ತ ಬಸವಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತದೆ. ಬಸವ ಜಯಂತಿ ದಿನ ಪಂಚಾಚಾರ್ಯ ಯುಗಮಾನೋತ್ಸವ ಆಚರಣೆ ಖಂಡನೀಯ, ಕೂಡಲೇ ಕೈಬಿಡಬೇಕುʼ ಎಂದು ಒಕ್ಕೊರಲಿನಿಂದ ಒತ್ತಾಯಿಸಿದರು.
ಪಂಚಾಚಾರ್ಯರ ಯುಗಮಾನೋತ್ಸವವನ್ನು ಬಸವ ಜಯಂತಿಯ ದಿನದಂದು ಹಮ್ಮಿಕೊಳ್ಳದೆ ಬೇರೆ ದಿನ ಆಯ್ಕೆ ಮಾಡುವಂತೆ ಸಂಬಂಧಿತ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡಬೇಕು. ಸಮಾಜದಲ್ಲಿ ಭಿನ್ನತೆ, ಸಂಘರ್ಷ ಉಂಟಾಗದಂತೆ ಸರ್ಕಾರ ಜವಾಬ್ದಾರಿಯುತವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಿಎಂ ಸಿದ್ಧರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಮಹಮ್ಮದ್ ಜಿಯಾವುದ್ದಿನ್ ಅವರಿಗೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಬಸವ ಜಯಂತಿ ದಿನದಂದು ಪಂಚಾಚಾರ್ಯರ ಯುಗಮಾನೋತ್ಸವ ಹಮ್ಮಿಕೊಂಡಿರುವ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಅವರ ಭಾವಚಿತ್ರ ಕೈಯಲ್ಲಿ ಹಿಡಿದು ಅವರ ವಿರುದ್ಧ ಧಿಕ್ಕಾರ ಕೂಗಿದರು.

ವಿವಿಧ ಬಸವಪರ ಸಂಘಟನೆಗಳ ಪ್ರಮುಖರಾದ ರಾಜೇಂದ್ರ ಕುಮಾರ್ ಗಂದಗೆ, ಜೈರಾಜ ಖಂಡ್ರೆ, ಶಿವರಾಜ್ ಪಾಟೀಲ್ ಅತಿವಾಳ, ಶಿವಶರಣಪ್ಪ ಪಾಟೀಲ್ ಹಾರೂರಗೇರಿ, ಶ್ರೀನಾಥ ಕೋರೆ, ಬಸವರಾಜ ಬುಳ್ಳಾ, ಹಾವಶೆಟ್ಟಿ ಪಾಟೀಲ್, ಸುವರ್ಣಾ ಧನ್ನೂರ, ಜಗದೇವಿ ಯದಲಾಪುರ, ಡಾ.ವಿಜಯಶ್ರೀ ಬಶೆಟ್ಟಿ, ರಾಚಪ್ಪ ಪಾಟೀಲ್, ಮಹೇಶ ಸಾವಳಗಿ, ಗಣಪತಿ ದೇಶಮುಖ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗಂಡಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕಚೇರಿ ಮುಂದೆ ಧರಣಿ :
ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯೊಂದಿಗೆ ರೇಣುಕಾಚಾರ್ಯರ ಯುಗಮಾನೋತ್ಸವ ಥಳಕು ಹಾಕಬಾರದು. ಬಸವ ಜಯಂತಿ ದಿನ ಬಸವ ಜಯಂತಿಯೇ ಆಚರಣೆಯಾಗಬೇಕು ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ʼಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ವತಿಯಿಂದ ಬೆಂಗಳೂರಿನಲ್ಲಿ ಏ.30ರಂದು ಬಸವ ಜಯಂತಿ ದಿನ ರೇಣುಕಾಚಾರ್ಯ ಜಯಂತಿ ಹಮ್ಮಿಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆʼ ಎಂದರು.
ʼಈ ನಿರ್ಧಾರ ಕೂಡಲೇ ಹಿಂಪಡೆಯಬೇಕೆಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ರಾಜ್ಯ ಘಟಕ ಅಧ್ಯಕ್ಷ ಶಂಕರ ಬಿದರಿ ಅವರಿಗೆ ನಿನ್ನೆ ರಾತ್ರಿ ಕರೆ ಮಾಡಿ ವಿನಮೃವಾಗಿ ಮನವಿ ಮಾಡಿದ್ದೇನೆ. ಆದರೆ ಅವರು ಸಕರಾತ್ಮಕವಾಗಿ ಸ್ಪಂದಿಸಲಿಲ್ಲ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದು ಆದೇಶ ಹಿಂಪಡೆಯುವಂತೆ ಒತ್ತಡ ಹಾಕಲಾಗುವುದು. ಯಾವುದಕ್ಕೂ ಕೈಗೂಡದಿದ್ದರೆ ಬೆಂಗಳೂರಿನ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಕಚೇರಿ ಮುಂದೆ ಸಾವಿರಾರು ಸಂಖ್ಯೆಯ ಬಸವ ಅನುಯಾಯಿಗಳು ಧರಣಿ ನಡೆಸಲಾಗುವುದುʼ ಎಂದು ಹೇಳಿದರು.
ನಿರ್ಧಾರ ಕೈಬಿಡುವಂತೆ ತಿಳಿಸುವೆ : ಸಚಿವ ಈಶ್ವರ ಖಂಡ್ರೆ
ಬಸವಪರ ಸಂಘಟನೆಗಳ ಪ್ರಮುಖರು, ಮಠಾಧೀಶರ ನೇತ್ರತ್ವದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರು, ಅಖಿಲ ಭಾರತ ವೀರಶೈವ ಮಹಾಸಭಾ ಮಹಾಪ್ರಧಾನ ಕಾರ್ಯದರ್ಶಿಗಳು ಆದ ಈಶ್ವರ ಖಂಡ್ರೆ ಅವರನ್ನು ಭೇಟಿ ನೀಡಿ ಬಸವ ಜಯಂತಿ ದಿನ ಪಂಚಾಚಾರ್ಯರ ಯುಗಮಾನೋತ್ಸವ ಆಚರಣೆ ನಿರ್ಧಾರ ಕೈಬಿಡುವಂತೆ ಮನವರಿಕೆ ಮಾಡಿದರು.
ಬಳಿಕ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ಸಚಿವರು ʼಈ ಬಗ್ಗೆ ವೀರಶೈವ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷರೊಂದಿಗೆ ಮಾತನಾಡಿ ಕೈಬಿಡುವಂತೆ ತಿಳಿಸುವೆʼ ಎಂದು ಹೇಳಿದರು.