ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯಕಾರಿ ಹಂತಕ್ಕೆ ತಲುಪಿದೆ. ಆದ್ದರಿಂದ ಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಮಹಾಯಾನದ ಭಾಗವಾಗಿ ಸಂವಿಧಾನ ಸಂರಕ್ಷಕರ ಸಮಾವೇಶವನ್ನು ಏ.26ರಂದು ದಾವಣಗೆರೆಯಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ‘ಎದ್ದೇಳು ಕರ್ನಾಟಕ’ ಜಿಲ್ಲಾ ಸಂಯೋಜಕ ಓಂಪ್ರಕಾಶ ರೊಟ್ಟೆ ತಿಳಿಸಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ʼದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಹೋರಾಟಗಾರ್ತಿ ಮೇಧಾ ಪಾಟ್ಕರ್, ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್, ನಟ ಪ್ರಕಾಶ್ ರೈ, ಚಿಂತಕ ಬರಗೂರು ರಾಮಚಂದ್ರಪ್ಪ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ತಮಿಳುನಾಡು ಸಂಸದ ಶಶಿಕಾಂತ್ ಸೆಂಥಿಲ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕೇರಳ, ಪಂಜಾಬ್, ದೆಹಲಿ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆʼ ಎಂದು ಮಾಹಿತಿ ನೀಡಿದರು.
ʼಯಾವ ರಾಜಕೀಯ ಪಕ್ಷವೂ ಸಂವಿಧಾನ ಉಳಿಸಿಕೊಳ್ಳುವ ಆಸಕ್ತಿ ತೋರಿಲ್ಲ. ಸಂವಿಧಾನ ರಕ್ಷಣೆ ಮಾಡಿಕೊಳ್ಳುವ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಮೇಲಿದೆ. ಸಂವಿಧಾನ ಉಳಿದರೆ ದೇಶ ಹಾಗೂ ಜನರು ಉಳಿಯುತ್ತಾರೆ. ಸಂವಿಧಾನದ ಆಶಯ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಕನಸಿ ಭಾರತವನ್ನು ರಕ್ಷಿಸಿಕೊಳ್ಳುವ ತುರ್ತು ಎದುರಾಗಿದೆʼ ಎಂದು ಹೇಳಿದರು.
ʼಸಂವಿಧಾನ ಸಂರಕ್ಷಣಾ ಪಡೆ ಕಟ್ಟುವ ಪ್ರಯತ್ನ ಜ.26ರಿಂದ ಶುರುವಾಗಿದೆ. 3 ತಿಂಗಳ ಅವಧಿಯಲ್ಲಿ 10 ಸಾವಿರ ಜನರನ್ನು ತಲುಪಿದ್ದು, ಈ ಎಲ್ಲರೂ ಸಮಾವೇಶಕ್ಕೆ ಬರಲಿದ್ದಾರೆ. ರಾಜ್ಯದ ಎಲ್ಲ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಈ ಪ್ರಯತ್ನ ಮಾಡುತ್ತಿದ್ದೇವೆ. ರೈತ, ದಲಿತ, ಕನ್ನಡ ಪರ ಸಂಘಟನೆಗಳು, ಅಲ್ಪಸಂಖ್ಯಾತ ಸಮುದಾಯಗಳು ಇದಕ್ಕೆ ಕೈಜೋಡಿಸಿವೆʼ ಎಂದು ಮುಖಂಡ ನಿಜಾಮುದ್ದೀನ್ ಹೇಳಿದರು.
ಮುಂದಿನ ಮೂರು ವರ್ಷಗಳಲ್ಲಿ 10 ಸಾವಿರ ಕಾರ್ಯಕರ್ತರ ಈ ಸಂವಿಧಾನ ಸಂರಕ್ಷಣಾ ಪಡೆಯನ್ನು ಒಂದು ಲಕ್ಷಕ್ಕೆ ಸಜ್ಜುಗೊಳಿಸಲಿದ್ದು, ಅದಕ್ಕಾಗಿ ರಾಜ್ಯಾದ್ಯಂತ ಎಲ್ಲಾ ತಾಲೂಕು, ಜಿಲ್ಲೆಗಳಲ್ಲಿ ಕೆಲಸ ಮಾಡಲಿದ್ದೇವೆ. ಪ್ರತಿ ಊರು, ಕೇರಿ, ಹಾಡಿ, ಬೀದಿಗಳಲ್ಲಿ, ʼಸಂವಿಧಾನ ಸಂರಕ್ಷಕ ಪಡೆʼ ಹೆಸರಿನಲ್ಲಿ ದೇಶಪ್ರೇಮಿ ತಂಡಗಳನ್ನು ಕಟ್ಟುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಲಕ್ಷಕಾರ್ಯಕರ್ತರ ಪಡೆಯನ್ನು ಸಜ್ಜುಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆʼ ಎಂದು ಜಿಲ್ಲಾ ಸಂಯೋಜಕ ಜಗದೀಶ್ವರ ಬಿರಾದರ್ ಹೇಳಿದರು.
ʼಸಂವಿಧಾನ ಬದಲಾವಣೆಯಾದರೆ ದೇಶಕ್ಕೆ ಅಪಾಯ ಖಚಿತ. ದೇಶದ ಜನರನ್ನು ಎಚ್ಚರಿಸುವುದರ ಜೊತೆಗೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಗೊಳಿಸುವ ಸಂದೇಶ ಸಾರುವ ಉದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶ ಮುಖಾಂತರ ರಾಜ್ಯದ 15 ಸಾವಿರ ಯುವಕರನ್ನು ಜಾಗೃತಿಗೊಳಿಸಲಾಗುತ್ತಿದೆ. ಈ ಸಮಾವೇಶದಲ್ಲಿ ಬೀದರ್ ಜಿಲ್ಲೆಯಿಂದ ಸುಮಾರು 200 ಜನ ಯುವಕರು ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವ್ಯಕ್ತಿಯ ಕುತ್ತಿಗೆ ಕಡಿದು ಬರ್ಬರ ಹತ್ಯೆ
ಎದ್ದೇಳು ಕರ್ನಾಟಕ ಸಂಘಟನೆ ಜಿಲ್ಲಾ ಸಂಯೋಜಕ ಸಂದೀಪ ಮುಕಿಂದೆ ಸೇರಿದಂತೆ ಮಾನವ ಬಂಧುತ್ವ ವೇದಿಕೆಯಾ ಮಹೇಶ ಗೊರನಾಳಕರ್, ದಲಿತ ಯುನಿಟಿ ಮ್ಯೂಮೆಂಟ್ ರಾಜ್ಯಾಧ್ಯಕ್ಷ ಪ್ರಕಾಶ ರಾವಣ, ಸಾಮಾಜಿಕ ಚಿಂತಕರಾದ ಜೈವಂತ ಸಿಂಗಾರೆ, ಬಾಲಾಜಿ ಸೂರ್ಯವಂಶಿ ಜಮಾಅತೆ ಇಸ್ಲಾಂ ಹಿಂದ್ ಸಂಘಟನೆಯ ಸೈಯದ್ ಇಬ್ರಾಹಿಂ ಹಾಗೂ ಇತರರಿದ್ದರು.