ಬಡ ಕೂಲಿ ಕಾರ್ಮಿಕರ ಮದುವೆ, ಸಭೆ, ಸಮಾರಂಭಕ್ಕೆ ಅನುಕೂಲಕ್ಕಾಗಿ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿಗೊಂದು ಕಲ್ಯಾಣ ಮಂಟಪ ನಿರ್ಮಾಣ ಮಾಡಲಾಗುವುದು ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಔರಾದ್ (ಎಸ್) ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಅನುದಾನದಡಿ ₹35 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಲ್ಯಾಣ ಮಂಟಪವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ʼಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಬಡ ಜನರ ಮದುವೆ ಖರ್ಚು ಉಳಿತಾಯಕ್ಕಾಗಿ ಕಲ್ಯಾಣ ಮಂಟಪ ನಿರ್ಮಿಸುವುದಾಗಿ ಚುನಾವಣೆಗೂ ಮನ್ನ ಭರವಸೆ ನೀಡಿದ್ದೆ. ಅದರಂತೆ ಈಗಾಗಲೇ ಸುಮಾರು 17 ಗ್ರಾಮ ಪಂಚಾಯಿತಿಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣ ಹಂತದಲ್ಲಿವೆʼ ಎಂದರು.
ʼಔರಾದ (ಎಸ್) ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು ಮೂರು ಗ್ರಾಮಗಳಲ್ಲಿನ ಸಾವಿರಾರು ಜನರ ಅನುಕೂಲಕ್ಕಾಗಿ ಈ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಸಾರ್ವಜನಿಕರು ಮದುವೆ, ಸಭೆ ಸಮಾರಂಭಕ್ಕೆ ಇನ್ನಿತರ ಕಾರ್ಯಕ್ರಮಗಳಿಗೆ ಮಂಟಪದ ಸದುಪಯೋಗ ಪಡೆದುಕೊಳ್ಳಬೇಕುʼ ಎಂದು ತಿಳಿಸಿದರು.

ʼಕ್ಷೇತ್ರದ ಅಭಿವೃದ್ಧಿಗಾಗಿ ರಸ್ತೆ, ಒಳಚರಂಡಿ, ವಿದ್ಯುತ್, ಕುಡಿಯುವ ನೀರು, ಶಿಕ್ಷಣ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವುದು ನನ್ನ ಕರ್ತವ್ಯ. ಕ್ಷೇತ್ರದ ಪರಿಪೂರ್ಣ ಅಭಿವೃದ್ಧಿಯೇ ನನ್ನ ಗುರಿ, ಅದಕ್ಕಾಗಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಪ್ರತಿಯೊಂದು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುತ್ತಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಬೀದರ್ | ರಾಷ್ಟ್ರೀಯ ಬಸವ ದಳದಿಂದ ಇಫ್ತಾರ್ ಕೂಟ ಆಯೋಜನೆ
ಬಿಜೆಪಿ ಮಂಡಲ ಅಧ್ಯಕ್ಷ ಗುರುನಾಥ ರಾಜಗೀರಾ, ಪ್ರಧಾನ ಕಾರ್ಯದರ್ಶಿ ಚಂದ್ರಯ್ಯ ಸ್ವಾಮಿ, ಸಂಜೀವಕುಮಾರ ಕೋಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟರೆಡ್ಡಿ ಪೋಗಲ್, ಗ್ರಾಮದ ಮುಖಂಡರಾದ ರಾಜರೆಡ್ಡಿ ಶಾಬಾದ, ಸುರೇಶ್ ಮಾಶೆಟ್ಟಿ, ಸೂರ್ಯಕಾಂತ ಸೇಡಂ, ಶಿವಕುಮಾರ ಸ್ವಾಮಿ, ಜಗನ್ನಾಥ ಪಾಟೀಲ, ಅಶೋಕ ಪಾಟೀಲ, ಅಡೆಪ್ಪಾ ಶೇರಿಕಾರ, ಪುಂಡಲೀಕ ಟುಬಾಕ, ನರಸಿಂಹರೆಡ್ಡಿ ಗಂಗ್ವಾರ, ನಾಗಶೆಟ್ಟಿ ಚಟ್ನಳ್ಳಿ, ಹೇಮಾ ತುಕ್ಕಾರೆಡ್ಡಿ, ಸಂತೋಷಿ, ರಾಜಕುಮಾರ ಜಾಧವ, ಮಾರುತಿ ನಾಗನಕೇರಿ, ಮಲ್ಲಿಕಾರ್ಜನ ಭೈರನಳ್ಳಿಕರ್, ಶಂಕರ್, ರಜಮದ್, ಜಮಾಲ್, ಜಹಿರೋದಿನ್, ಅಶೋಕ ಮತ್ತಿತರರು ಉಪಸ್ಥಿತರಿದ್ದರು.