ನಾಗರಿಕ ಸಮಾಜಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದೆ ಎಂದು ಶೈನಿ ಪ್ರದೀಪ್ ಗುಂಟಿ ಹೇಳಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ನಗರದ ಐಎಂಎ ಹಾಲ್‍ನಲ್ಲಿ ಈಚೆಗೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಮಹಿಳೆಯರು ಎಲ್ಲ ಕ್ಷೇತ್ರಗಳಿಗೂ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆʼ ಎಂದು ತಿಳಿಸಿದರು.
ಹಳ್ಳದಕೇರಿಯ ಕೃಷಿ ಸಂಶೋಧನಾ ಕೇಂದ್ರದ ಡಾ. ಕೆ. ಭವಾನಿ ಮಾತನಾಡಿ, ʼಮಹಿಳೆ ಹಲವು ಜವಾಬ್ದಾರಿಗಳನ್ನು ತಾಳ್ಮೆಯಿಂದ ನಿಭಾಯಿಸುತ್ತಾಳೆ. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಾಳೆʼ ಎಂದು ಹೇಳಿದರು.
ಮಹಿಳೆಯರಲ್ಲಿ ಕಂಡು ಬರುವ ವಿವಿಧ ಬಗೆಯ ಕ್ಯಾನ್ಸರ್‌ಗಳಿಗೆ ಕಾರಣವಾಗುವ ಅಂಶಗಳು ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಡಾ. ಆರತಿ ರಘು, ಮಕ್ಕಳ ಆರೋಗ್ಯಪೂರ್ಣ ಬೆಳವಣಿಗೆ ಕುರಿತು ಬ್ರಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಶಾಂತಲಾ ಆರ್.ಕೌಜಲಗಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ 25 ಮಂದಿ ಆಶಾ, ಅಂಗನವಾಡಿ ಕಾಯಕರ್ತೆಯರು ಹಾಗೂ ನರ್ಸ್‍ಗಳನ್ನು ಸನ್ಮಾನಿಸಲಾಯಿತು. ನೀಲಾಂಬಿಕೆ ಶಿವಕುಮಾರ ಪಾಖಾಲ್ ಅಧ್ಯಕ್ಷತೆ ವಹಿಸಿದ್ದರು.
ಇನ್ನರ್ ವ್ಹೀಲ್ ಕಾರ್ಯದರ್ಶಿ ಮಂಜುಳಾ ಆರ್.ಮೂಲಗೆ, ಕೀರ್ತಿ ಎಸ್.ರಾಮಶೆಟ್ಟಿ, ರೋಟರಿ ಕ್ಲಬ್ ಬೀದರ್ ಕ್ವೀನ್ ಅಧ್ಯಕ್ಷೆ ಜಯಶ್ರೀ ಪ್ರಭಾ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಕವಿತಾ ಪ್ರಭಾ, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಅಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ಡಾ. ಶಾರದಾ ಗುದಗೆ, ರೂಪಾ ಕರ್ಪೂರ, ಡಾ. ವಿನಯಕುಮಾರ ಬಿಯಾನಿ, ಕಾಮಶೆಟ್ಟಿ ಚಿಕ್ಕಬಸೆ, ರಾಹುಲ್ ಅಟ್ಟಲ್, ಸಂತೋಷಕುಮಾರ ಸ್ವಾಮಿ, ನಿತಿನ್ ಕರ್ಪೂರ, ಡಾ. ರಿತೇಶ್ ಸುಲೆಗಾಂವ್, ಚೇತನ್ ಮೇಗೂರ್ ಮತ್ತಿತರರು ಇದ್ದರು.ಡಾ.ನಿತೇಶ ಬಿರಾದಾರ, ಡಾ.ನಾಗೇಶ ಪಾಟೀಲ ನಿರೂಪಿಸಿದರು. ಅನುರಾಧಾ ತಟ್ಟಪಟ್ಟಿ ವಂದಿಸಿದರು.