ಬೀದರ್ ತಾಲ್ಲೂಕಿನ ಸಿಂದೋಲ್-ಯಾಕತಪುರ ರಸ್ತೆ ಡಾಂಬರೀಕರಣ ಮಾಡಬೇಕು ಎಂದು ಭಾರತೀಯ ರಾಷ್ಟ್ರೀಯ ಭೀಮ ಆರ್ಮಿ ಸಮಿತಿ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಈ ಕುರಿತು ಬುಧವಾರ ಜಿಲ್ಲಾಧಿಕಾರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
‘ಸಿಂದೋಲ್-ಯಾಕತಪುರ (ವಯಾ ತಡಪಳ್ಳಿ)
9ಕಿ.ಮೀ. ಉದ್ದದ ರಸ್ತೆ ಹಾಳಾಗಿ 15 ವರ್ಷಗಳು ಕಳೆದಿವೆ. ಆದರೆ, ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ’ ಎಂದು ಹೇಳಿದರು.
ರಸ್ತೆ ಹದಗೆಟ್ಟ ಕಾರಣ ಸಿಂದೋಲ್, ಸಿಂದೋಲ್ ತಾಂಡಾ, ತಡಪಳ್ಳಿ, ಪಾತರಪಳ್ಳಿ, ಶೇಕಾಪುರ ಗ್ರಾಮಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ರೈತರು ಹಾಗೂ ಸಾರ್ವಜನಿಕರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ ಅನೇಕ ದ್ವಿಚಕ್ರ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ ಎಂದರು.
ಸಮಿತಿಯ ರಾಜ್ಯ ಅಧ್ಯಕ್ಷ ದಿಲೀಪಕುಮಾರ ವರ್ಮಾ, ಉಪಾಧ್ಯಕ್ಷ ಅಶೋಕ ಭಾವಿದೊಡ್ಡಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಭಾವಿದೊಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ರಾಹುಲ್ ಭಂಗೂರೆ, ಉಪಾಧ್ಯಕ್ಷ ಅವಿನಾಶ್ ಭಾಲ್ಕೆ, ಪ್ರಮುಖರಾದ ಭೀಮರಾವ್ ಖಂದಾರೆ, ಗೌತಮ ಕೌಡೆ, ಭಗತ್ ಸಿಂಧೆ, ಜಾವೀದ್‍ಮಿಯಾ, ಜಗನ್ನಾಥ ಇದ್ದರು.