ಹುಮನಾಬಾದ್ ತಾಲ್ಲೂಕಿನ ಸಿಂಧನಕೇರಾ ಗ್ರಾಮದಲ್ಲಿರುವ ಹುಮನಾಬಾದ್ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಈಚೆಗೆ ಘಟಕದ ಎದುರುಗಡೆ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಪುರಸಭೆ ಕಚೇರಿ ಮೀನಾಕುಮಾರಿ ಅವರಿಗೆ ಸಲ್ಲಿಸಿದರು.
ʼಸಿಂಧನಕೇರಾ ಗ್ರಾಮದ ಹೊರವಲಯದಲ್ಲಿನ ತ್ಯಾಜ್ಯ ವಿಲೇವಾರಿ ಘಟಕದಿಂದ ಗಬ್ಬು ವಾಸನೆ ಬರುತ್ತಿದೆ. ಇದರಿಂದ ಗ್ರಾಮದ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತಿದೆ. ಮನೆಯಿಂದ ಹೊರಗೆ ಬಂದರೆ ಸಾಕು ಗಬ್ಬು ವಾಸನೆ, ಊಸಿರಾಟಕ್ಕು ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಇಲ್ಲಿಯ ಅಧಿಕಾರಿಗಳು ಸರ್ಕಾರ ನಿಯಮವನ್ನು ಗಾಳಿಗೆ ತೂರಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಈ ಸಮಸ್ಯೆ ಹೆಚ್ಚಾಗಿದೆʼ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ʼತ್ಯಾಜ್ಯ ಘಟಕ ಒಂದು ವಾರದಲ್ಲಿ ಸ್ಥಳಾಂತರ ಮಾಡಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ರಾಷ್ಟೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆʼ ಎಂದು ಎಚ್ಚರಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಮರನಾಥ ಸೇರಿದಂತೆ ಗ್ರಾಮಸ್ಥರಾದ ಭೀಮರೆಡ್ಡಿ ಸಿಂಧನಕೇರಾ, ಯುವರಾಜ ಐಹೊಳೆ, ರಾಜು ಚೀಲವಂತ, ಮಂಜು ಕಾಡವಾದಿ , ಗುರು ಪಾಟೀಲ, ವಿಶ್ವನಾಥ ಪಾಟೀಲ, ರವಿ ಮಿತ್ರಾ, ಪ್ರವೀಣ್ ಹೊಂಬಾಳೆ, ಶೇಖ್, ಅನೀಲ ತೆಲಂಗ, ಗುಂಡಪ್ಪ, ರಾಕೇಶ್ ಕೋರಿ ಮತ್ತಿತರರಿದ್ದರು.
ಇದನ್ನೂ ಓದಿ : ಬೀದರ್ | ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮಾತ್ರಭಾಷೆ ಕನ್ನಡದಲ್ಲೇ 4,321 ವಿದ್ಯಾರ್ಥಿಗಳು ಫೇಲ್!