ಕಮಲನಗರ ತಾಲೂಕಿನ ಠಾಣಾ ಕುಶನೂರ ಗ್ರಾಮದಲ್ಲಿರುವ ಹಾಲು ಶುದ್ಧೀಕರಣ ಘಟಕ (ಕೆಎಂಎಫ್)ದಿಂದ ಹೊರಸೂಸುವ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿಲ್ಲ. ಪರಿಣಾಮ ಸುತ್ತಲಿನ ನಿವಾಸಿಗಳಿಗೆ ಅನೈರ್ಮಲ್ಯ ಕಾಡುತ್ತಿದೆ. ಕೂಡಲೇ ಕ್ರಮ ಕೈಗೊಂಡು ತ್ಯಾಜ್ಯ ವಿಲೇವಾರಿ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ ಹಾಗೂ ಕಮಲನಗರ ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಸಂಗ್ರಹವಾದ ಹಾಲು ಠಾಣಾ ಕುಶನೂರ ಗ್ರಾಮದ ಕೆಎಂಎಫ್ ಶುದ್ಧೀಕರಣ ಘಟಕದಲ್ಲಿ ಶೇಖರಣೆಯಾಗುತ್ತವೆ. ಈ ಶುದ್ಧೀಕರಣ ಘಟಕ ಗ್ರಾಮದಲ್ಲಿ ಅಂಚಿನಲ್ಲೇ ಇದ್ದು, ಘಟಕದ ತ್ಯಾಜ್ಯ ನೀರನ್ನು ರಸ್ತೆ ಪಕ್ಕದ ಚರಂಡಿಗಳಿಗೆ ಹರಿಸಲಾಗುತ್ತಿದೆ. ಇದರಿಂದ ಸುತ್ತಲಿನ ನಿವಾಸಿಗಳಿಗೆ, ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗ್ಗೆ ಕಳೆದ ಜನವರಿಯಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಕ್ರಮ ಕೈಗೊಳ್ಳುವಂತೆ ಕೇಳಿದ್ದೆವು. ನಮ್ಮ ಮನವಿಗೆ ಸ್ಪಂದಿಸಿದ ಪಿಡಿಒ ಕೆಎಂಎಫ್ ಶುದ್ಧೀಕರಣ ಘಟಕಕ್ಕೆ ನೋಟೀಸ್ ನೀಡಿದ್ದಾರೆ. ಆದರೆ, ಕೆಎಂಎಫ್ ಯಾವುದೇ ಪ್ರತಿಕ್ರಿಯೆ ನೀಡದೆ, ತ್ಯಾಜ್ಯವನ್ನು ಚರಂಡಿಗೆ ಹರಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೂಡಲೇ ತ್ಯಾಜ್ಯ ನೀರು ಬರದಂತೆ ತಡೆಯಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಿವಾಸಿಗಳಾದ ರವೀಂದ್ರ ಕಾಶಿನಾಥ್, ವೀರಭದ್ರ ಬಿರಾದಾರ, ಸಂತೋಷ್ ಜೀರ್ಗೆ, ಸುನಿಲ್ ವಾಘಮಾರೆ, ಜೈರಾಜ ಖೇಮಶೆಟ್ಟಿ, ಮಾರುತಿ ಜೀರ್ಗೇ, ಬಾಬುರಾವ್ ಜೀರ್ಗೆ, ಸಂತೋಷ ಸ್ವಾಮಿ ಆಗ್ರಹಿಸಿದ್ದಾರೆ.