ಜನಪದರು ಬದುಕುವ ಕಲೆ ಅರಿತಿದ್ದರು. ಹಾಗಾಗಿಯೇ ಬದುಕಿನುದ್ದಕ್ಕೂ ಅವರು ಸಂತೋಷ ಮತ್ತು ಸಂಭ್ರಮದಿಂದಿದ್ದರು. ಬದುಕುವ ಕಲೆಯಿಂದಲೇ ಬದುಕಿಗೆ ಘನತೆಯಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಪ್ರೊ. ಶಂಭುಲಿಂಗ ಕಾಮಣ್ಣ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ-2025 ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ʼಆಧುನಿಕ ಕಾಲಘಟ್ಟದಲ್ಲಿ ಬದುಕುವ ಕಲೆಗಿಂತ ಭೌತಿಕ ಸಂಗತಿಗಳ ಬೆನ್ನಟ್ಟಿ ಓಡುವ ಅವಸರ ಕಲಿತಿದ್ದೇವೆ. ಕಲೆಯಿಂದ ಬದುಕುವುದು ಅರಿತಿಲ್ಲʼ ಎಂದರು.
ʼಯಾಂತ್ರಿಕ ಜೀವನದಿಂದ ನೆಮ್ಮದಿ, ಶಾಂತಿ ಹಾಳಾಗುತ್ತದೆ. ಸಂಕೀರ್ಣತೆ ಇಲ್ಲದ, ಸಹಜ, ಸರಳ, ಅನುಭವದಿಂದ ಕೂಡಿದ ಜನಪದರ ಜೀವನದ ಸತ್ವ ತಿಳಿಯಬೇಕು. ಬದುಕು ಹಸನಾಗುವ ಬಗೆ ಜನಪದರಲ್ಲಿ ಕರಗತವಾಗಿತ್ತು. ಜೀವನ ಸತ್ವ ಹಾಗೂ ಜಾನಪದ ಸಂಸ್ಕೃತಿ ಯುವ ಸಮೂಹಕ್ಕೆ ದಾಟಿಸಲು ಜಾನಪದ ಉತ್ಸವ ಸರ್ಕಾರ ಮಾಡುತ್ತಿದೆʼ ಎಂದರು.

ಚಿಟಗುಪ್ಪಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ. ಚಿತ್ರಶೇಖರ ಚಿರಳ್ಳಿ ಮಾತನಾಡಿ, ʼನಮ್ಮ ಹಿರಿಯರ ಒಟ್ಟು ಜೀವನ ಕ್ರಮವೇ ಜಾನಪದವಾಗಿತ್ತು. ಹಬ್ಬ, ಹರಿದಿನ, ಜಾತ್ರೆ, ಉತ್ಸವಗಳು ಸೇರಿ ಇಡೀ ಜನಪದ ಸಂಸ್ಕೃತಿ ಹೊಸ ಪೀಳಿಗೆಗೆ ಪರಿಚಯಿಸುವ ಕೆಲಸ ಜಾನಪದ ಉತ್ಸವದಿಂದ ನಡೆಯುತ್ತದೆ. ಜಾನಪದ ಸಂಸ್ಕೃತಿ ಗ್ರಾಮೀಣದಲ್ಲಿ ಇಂದಿಗೂ ಜೀವಂತವಾಗಿದೆʼ ಎಂದರು.
ಶ್ರೀ ಬಸವೇಶ್ವರ ಪದವಿ ಕಾಲೇಜು ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ʼಭೂಮಿ ತತ್ವ ಹಾಗೂ ಮನುಷ್ಯತ್ವದ ತಾತ್ವಿಕತೆ ತನ್ನ ಒಡಲಿನಲ್ಲಿ ಇರಿಸಿಕೊಂಡ ಜಾನಪದ ಸಂಸ್ಕೃತಿ ಸೌಹಾರ್ದತೆ, ಸಹಬಾಳ್ವೆಯನ್ನು ಪ್ರತಿನಿಧಿಸುತ್ತದೆ. ಉತ್ಸವಗಳು ಕಲೆ, ಸೃಜನಶೀಲತೆಯನ್ನು ಅರಳಿಸುವ ಹಾಗೂ ಮಾನವೀಯ ಸಂಬಂಧಗಳನ್ನು ಕಾಪಿಡುವ ದಾರಿಯಾಗಿವೆ. ಬಹುಸಂಸ್ಕೃತಿಯ ಮೇಳೈಕೆ ಉತ್ಸವಗಳ ಚೆಹರೆಯಾಗಿವೆʼ ಎಂದು ತಿಳಿಸಿದರು.
ʼರಂಗಭೂಮಿ ಕಲೆಯ ಜೊತೆಗೆ ಸಾಂಸ್ಕೃತಿಕ ಎಚ್ಚರ ಮೂಡಿಸುವ ಮಾಧ್ಯಮವಾಗಿದೆ. ಜನಪದ ರಂಗಭೂಮಿಗಿಂತ ಬೌದ್ಧಿಕ ಲೋಕವಾದ ಹವ್ಯಾಸಿ ರಂಗಭೂಮಿ ಸಮಾಜದ ಅರಿವಿಗೆ, ಪ್ರತಿರೋಧಕ್ಕೆ, ಕನಸುಗಾರಿಕೆಗೆ ವೇದಿಕೆಯಾಗಿದೆ. ಸಂವಾದಗಳಿಲ್ಲದ ಈ ಕಾಲಘಟ್ಟದಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇರುವವರನ್ನೂ ವಿರೋಧಿಗಳಾಗಿ ಗ್ರಹಿಸುತ್ತಿರುವುದು ಅಪಾಯಕಾರಿ. ಜನಪದರು ಮಾತುಕತೆ, ಸಂವಾದಕ್ಕೆ ಆದ್ಯತೆ ನೀಡಿಯೇ ಜೀವನ ಪ್ರೀತಿ ಕಾಯ್ದುಕೊಳ್ಳಲು ಸಾಧ್ಯವಾಗಿತ್ತುʼ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಡಾ. ಬಲಿರಾಮ ಹುಡೆ ಮಾತನಾಡಿ, ʼಇಂದು ಒಕ್ಕಲುತನ ಮಾಡುವ ಎಲ್ಲರ ಮನೆಯಲ್ಲೂ ಜಾನಪದ ಸಂಸ್ಕೃತಿ ಜೀವಂತವಾಗಿದೆ. ಗ್ರಾಮೀಣ ಸೊಗಡಿನಿಂದ, ಸಂಸ್ಕೃತಿಯಿಂದ ದೂರ ಸರಿಯುತ್ತಿರುವ ಈ ಕಾಲದ ಎಲ್ಲಾ ಜನರು ಜಾಗತೀಕರಣದ ಗುಲಾಮರಾಗುತ್ತಿದ್ದಾರೆ. ಇದು ಜಾನಪದ ಸಂಸ್ಕೃತಿ ಅಳಿಯಲು ಕಾರಣವಾಗಿದೆʼ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ವಿವಿಧ ಜಾನಪದ ಹಾಡು ಹಾಗೂ ಕಲಾ ಪ್ರದರ್ಶನ ನಡೆಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | ಚಾಕುವಿನಿಂದ ಇರಿದು ವ್ಯಕ್ತಿ ಕೊಲೆ
ದೀಪಕಕುಮಾರ್ ಗೌಡ, ಸುಭಾಷ ಮಚಕುರೆ, ಸುದರ್ಶನಾ, ಶ್ರೀದೇವಿ ಚೌಧರಿ, ಮಹೇಶ ಮಂಠಾಳೆ, ಬಸವರಾಜ ಬಿರಾದಾರ, ಡಾ. ಅಂಜಲಿ, ಅಶ್ವಿನಿ, ಚಿನ್ನಮ್ಮ, ರೇಖಾ ಮೊದಲಾದವರಿದ್ದರು. ಡಾ. ಚಂದ್ರಕಾಂತ ಗಾಯಕವಾಡ ಸ್ವಾಗತಿಸಿದರು. ಡಾ. ಶ್ರೀಕಾಂತ ಚೌಹಾಣ್ ಪ್ರಾಸ್ತಾವಿಕ ಮಾತನಾಡಿದರು. ಮೀನಾಕ್ಷಿ ಬಿರಾದಾರ ನಿರೂಪಿಸಿದರು. ಡಾ.ಪೀರಪ್ಪ ಸಜ್ಜನ್ ವಂದಿಸಿದರು.