ಬೀದರ್ | ಒಪ್ಪೊದಿಲ್ಲ, ಒಪ್ಪೊದಿಲ್ಲ ನಾಗಮೋಹನದಾಸ್ ವರದಿ ಒಪ್ಪೊದಿಲ್ಲ : ಬೃಹತ್‌ ಪ್ರತಿಭಟನಾ ರ್‍ಯಾಲಿ

Date:

Advertisements

ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಸಲ್ಲಿಸಿದ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿ ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಘಟಕದ ವತಿಯಿಂದ ಗುರುವಾರ ಬೃಹತ್‌ ಪ್ರತಿಭಟನೆ ನಡೆಯಿತು.

ಬಲಗೈ ಸಮುದಾಯಗಳ ಒಳಮೀಸಲಾತಿ ಹೋರಾಟ ಸಮಿತಿಯಿಂದ ಗುರುವಾರ ಕರೆ ನೀಡಿರುವ ಪ್ರತಿಭಟನೆಗೆ ಓಗೊಟ್ಟು ವಿವಿಧ ತಾಲ್ಲೂಕಗಳಿಂದ ಆಗಮಿಸಿದ ಕಾರ್ಯಕರ್ತರು ಡಾ.ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದರು. ಅಪಾರ ಸಂಖ್ಯೆಯಲ್ಲಿ ಬಂದ ಸಮಿತಿಯ ಕಾರ್ಯಕರ್ತರು ಕೈಯಲ್ಲಿ ನೀಲಿ ಧ್ವಜ, ಹಿಡಿದು ಗಮನ ಸೆಳೆದರು.

ʼಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಶೇ 8ರಷ್ಟು ಮೀಸಲಾತಿ ಬೇಕುʼ, ʼದಿಕ್ಕಾರ ದಿಕ್ಕಾರ ನಾಗಮೋಹನ್‌ದಾಸ್‌ಗೆ ದಿಕ್ಕಾರ’, ʼಬಲಗೈ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಿʼ, ʼಒಪ್ಪೊದಿಲ್ಲ, ಒಪ್ಪೊದಿಲ್ಲ ನಾಗಮೋಹನ್‌ದಾಸ್‌ ವರದಿ ಒಪ್ಪೊದಿಲ್ಲ’ ಎಂಬ ಬರಹವುಳ್ಳ ಭಿತ್ತಿ ಪತ್ರಗಳು ಹಿಡಿದು ಹೆಜ್ಜೆ ಹಾಕಿದರು. ನಾಗಮೋಹನ್‌ದಾಸ್‌ ವರದಿ ವಿರುದ್ಧ ಘೋಷಣೆ ಮೊಳಗಿದವು.

Advertisements
WhatsApp Image 2025 08 14 at 7.34.31 PM
ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ ಯುವಕರು, ಮಹಿಳೆಯರು, ಹಿರಿಯ ನಾಗರಿಕರು ಜಿಟಿಜಿಟಿ ಮಳೆಯಲ್ಲಿ ಹೆಜ್ಜೆ ಹಾಕಿದರು.

ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ‌ ಮೊದಲಿಗೆ ಕೆಲಹೊತ್ತು ಕ್ರಾಂತಿ ಗೀತೆ ಮೊಳಗಿದವು, ಬಳಿಕ ಸಮಿತಿಯ ಮುಖಂಡರು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ತದನಂತರ ಅಪಾರ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಕಾಲ್ನಡಿಗೆ ಮುಖಾಂತರ ನಗರದ ಛತ್ರಪತಿ ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮೋಹನ್‌ ಮಾರ್ಕೆಟ್‌, ನೆಹರೂ ಕ್ರೀಡಾಂಗಣ, ಮಡಿವಾಳ ಮಾಚಿದೇವರ ವೃತ್ತದ ಮಾರ್ಗವಾಗಿ ಚಿಕ್ಕಪೇಟ್‌ ರಸ್ತೆಯಲ್ಲಿರುವ ತಾತ್ಕಾಲಿಕ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು.

ಸಮಿತಿಯ ಮುಖಂಡರು ಮಾತನಾಡಿ, ʼನಾಗಮೋಹನ್‌ದಾಸ್ ವರದಿ ದುರುದ್ದೇಶದಿಂದ ಕೂಡಿದೆ. ಅವೈಜ್ಞಾನಿಕವಾಗಿ ಏಕಪಕ್ಷೀಯವಾಗಿ ಮಾಹಿತಿ ಕಲೆ ಹಾಕಲಾಗಿದೆ. ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿ, ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಿರುವ ನಾಗಮೋಹನ್‌ದಾಸ್ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುತ್ತದೆʼ ಎಂದು ಎಚ್ಚರಿಸಿದರು.

ʼಬಲಗೈ ಸಮುದಾಯಕ್ಕೆ ಸೇರಿದ ವಿವಿಧ ಜಾತಿಗಳ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇಂತಹ ಹಲವು ಲೋಪದೋಷಗಳು ಈ ವರದಿಯಲ್ಲಿವೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದ್ದು, ಇದನ್ನು ನಾವು ಸಹಿಸುವುದಿಲ್ಲ. ಈ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸದೆ, ತಿರಸ್ಕರಿಸಲು ನಿರ್ಣಯ ಕೈಗೊಳ್ಳಬೇಕು. ನಮ್ಮ ಪಾಲು ನಮಗೆ ದಕ್ಕುವ ತನಕ ಹೋರಾಟ ನಿರಂತರವಾಗಿರುತ್ತದೆʼ ಎಂದು ತಿಳಿಸಿದರು.

WhatsApp Image 2025 08 14 at 8.57.21 PM
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ʼಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರ ಆದೇಶ ಹೊರಡಿಸಬೇಕು. ಎಡ್ಗರ್‌ ಥರ್ಸಟನ್‌ ಹಾಗೂ ಕೆ.ರಂಗಾಚಾರಿ ಸಂಶೋಧನೆ ಮಾಡಿ ಬರೆದಿರುವ ‘ಕಾಸ್ಟ್‌ ಅಂಡ್‌ ಟ್ರೈಬ್ಸ್‌ ಸದರ್ನ್‌ ಇಂಡಿಯಾ’ ಆಧರಿಸಿ ಬಲಗೈ ಸಮುದಾಯಗಳನ್ನು ಗುರುತಿಸಿ, ಜನಸಂಖ್ಯೆ ಒಟ್ಟುಗೂಡಿಸಿ ಮೀಸಲಾತಿ ಪ್ರಮಾಣ ಹಂಚಿಕೆ ಮಾಡಬೇಕು. ಸಮೀಕ್ಷೆಯನ್ನು ಸಮರ್ಪಕವಾಗಿ ಮಾಡಿಲ್ಲ. ಆದಕಾರಣ ಸಂಗ್ರಹಿಸಿರುವ ಮಾಹಿತಿ ದೃಢೀಕರಣಕ್ಕೆ 15 ದಿನಗಳ ಕಾಲಾವಕಾಶ ಕೊಟ್ಟು ತಂತ್ರಾಂಶದ ಮೂಲಕ ಆಕ್ಷೇಪಣೆಗಳನ್ನು ಸ್ವೀಕರಿಸಬೇಕು. ಬಳಿಕ ಮೀಸಲಾತಿ ಮರು ಹಂಚಿಕೆ ಮಾಡಬೇಕುʼ ಎಂದು ಆಗ್ರಹಿಸಿದರು.

ʼಆಯೋಗವು ದುರುದ್ದೇಶದಿಂದ ಪರೈಯ್ಯ ಪರಯನ್‌ ಸಮುದಾಯವನ್ನು ಎಡಗೈ ಗುಂಪಿಗೆ ಸೇರಿಸಿರುವುದನ್ನು ರದ್ದುಪಡಿಸಿ, ಬಲಗೈ ಗುಂಪಿಗೆ ಸೇರಿಸಬೇಕು. ಜಾತಿಗಳೇ ಇಲ್ಲದ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಸಮೂಹಗಳಿಗೆ ನಿಗದಿಪಡಿಸಿರುವ ಶೇ 1ರಷ್ಟು ಮೀಸಲಾತಿ ರದ್ದುಪಡಿಸಿ ಆಯಾ ಜಾತಿಗಳಿಗೆ ಮರು ಹಂಚಿಕೆ ಮಾಡಬೇಕು. ಎಂಟು ಲಕ್ಷ ಮಕ್ಕಳು ಗಣತಿಯಿಂದ ಹೊರಗುಳಿದಿದ್ದಾರೆ. ಅವರನ್ನು ಸಮೀಕ್ಷೆಗೆ ಒಳಪಡಿಸಬೇಕು. ಹೊಲೆಯ ಮತ್ತು ಹೊಲೆಯ ಸಂಬಂಧಿತ ಪ್ರವರ್ಗ(ಸಿ) ಗುಂಪಿಗೆ ಸೇರಬೇಕಿರುವ ಜಾತಿಗಳನ್ನು ಪ್ರವರ್ಗ–ಎ,ಬಿ,ಇ ವರ್ಗಗಳಿಗೆ ಉದ್ದೇಶಪೂರ್ವಕವಾಗಿ ಸೇರಿಸಿ ಅನ್ಯಾಯ ಮಾಡಲಾಗಿದೆ. ಸದರಿ ಜಾತಿಗಳನ್ನು ʼಸಿʼ ಗುಂಪಿಗೆ ಸೇರಿಸಬೇಕುʼ ಎಂದು ಒತ್ತಾಯಿಸಿದರು.

ʼಪಟ್ಟಿಯಲ್ಲಿರುವ 49 ಮೂಲ ಉಪಜಾತಿಗಳು ಪರಿಶಿಷ್ಟ ಜಾತಿಯ ಬಲಗೈ, ಛಲವಾದಿ, ಹೊಲೆಯ ಸಂಬಂಧಿತ ಜಾತಿಗಳು ಒಂದೇ ಆಗಿದ್ದು, ಒಂದೇ ಗುಂಪಿಗೆ ಸೇರಿಸಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಲಗೈ ಗುಂಪಿನ ಜಾತಿಗಳು ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಧಿಕಾರಕ್ಕೆ ತಂದಿವೆ. ಹೀಗಾಗಿ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಶೇ50 ಕ್ಕಿಂತ ಕಡಿಮೆ ಸಮೀಕ್ಷೆಯಾಗಿದ್ದು, ಅದನ್ನು ಮರುಸಮೀಕ್ಷೆ ನಡೆಸಬೇಕು ಸೇರಿ ಒಟ್ಟು 11 ಬೇಡಿಕೆಗಳ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ನಾಗಮೋಹನ್‌ದಾಸ್‌ ವರದಿ ಹರಿದು ಆಕ್ರೋಶ :

ಬೇಡಿಕೆಯ ಮನವಿ ಪತ್ರವನ್ನು ಸ್ವೀಕರಿಸಲು ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಅವರು ಆಗಮಿಸಿದರು. ಅದಕ್ಕೆ ಒಪ್ಪದ ಪ್ರತಿಭಟನಾಕಾರರು ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿಯವರೇ ಬರಬೇಕು ಎಂದು ಪಟ್ಟು ಹಿಡಿದರು. ಸುಮಾರು 20 ನಿಮಿಷಗಳ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.

ಬಳಿಕ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹಾದೇವಪ್ಪಾ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಂ ಖಾನ್‌ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.

WhatsApp Image 2025 08 14 at 8.57.37 PM
ಎಚ್.ಎನ್.ನಾಗಮೋಹನದಾಸ್ ವರದಿಯ ಪ್ರತಿ ಹರಿದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಕೆಲ ಕಾರ್ಯಕರ್ತರು ನಾಗಮೋಹನ್‌ದಾಸ್‌ ಅವರ ವರದಿ ಪ್ರತಿ ಸುಟ್ಟು ಹಾಕಲು ಪ್ರಯತ್ನಿಸಿ, ಬಳಿಕ ಅದನ್ನು ಹರಿದು ಹಾಕಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರಸಂಗ ನಡೆಯಿತು.

ಇದನ್ನೂ ಓದಿ : Exclusive | ದರ್ಶನ್‌ ಜೀವನ ಮಾತ್ರವಲ್ಲ, ಜೊತೆಗಿದ್ದವರ ಜೀವನವೂ ಹಾಳಾಯ್ತು- ನಟಿ ರಮ್ಯಾ

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ವಿಠ್ಠಲದಾಸ್‌ ಪ್ಯಾಗೆ, ಮಾರುತಿ ಬೌದ್ಧೆ, ಬಾಬುರಾವ್‌ ಪಾಸ್ವಾನ್‌, ಅನಿಲಕುಮಾರ್‌ ಬೇಲ್ದಾರ್‌, ರಮೇಶ ಡಾಕುಳಗಿ, ಕಾಶಿನಾಥ ಚಲ್ವಾ, ಮಹೇಶ ಗೋರನಾಳಕರ್‌, ವಿನೋದ್‌ ಅಪ್ಪೆ, ವಿನಯಕುಮಾರ್‌ ಮಾಳಗೆ, ಶ್ರೀಪತರಾವ್‌ ದೀನೆ, ವಿನೋದಕುಮಾರ್‌ ಬಂದಗೆ, ಅರವಿಂದಕುಮಾರ ಅರಳಿ, ಉಮೇಶಕುಮಾರ ಸ್ವಾರಳ್ಳಿಕರ್‌, ಸುರೇಶ ಮೋರೆ, ದಿಲೀಪ್‌ಕುಮಾರ್‌ ವರ್ಮಾ, ಬಕ್ಕಪ್ಪಾ ಕೋಟೆ, ದೇವೇಂದ್ರ ಸೋನಿ ಚಿದ್ರಿ, ಮಾರುತಿ ಕಂಟೆ, ಅವಿನಾಶ ದೀನೆ, ಸುನೀಲ ಸಂಗಮ, ವಿಲಾಸ ಮೋರೆ, ಬಾಬು ಟೈಗರ್, ಸಂದೀಪ್‌ ಕಾಂಟೆ, ಬಸವರಾಜ ಆರ್ಯ, ಗಗನ ಫುಲೆ, ಸಂದೀಪ ಮುಕಿಂದೆ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

ಬೀದರ್‌ | ಸೆ.3ರಂದು ಬಸವ ಸಂಸ್ಕೃತಿ ಅಭಿಯಾನ : ರಂಗೋಲಿ, ಬಾಲ ಶರಣರ ವೇಷಧಾರಿ ಸ್ಪರ್ಧೆ

ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಅಭಿಯಾನ ಸಮಿತಿ ವತಿಯಿಂದ ಬೀದರ್ ನಗರದಲ್ಲಿ...

Download Eedina App Android / iOS

X