ಬೀದರ್ ಜಿಲ್ಲೆಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಭಿಕ್ಷಾಟನೆ ನಡೆಯುವ ಸ್ಥಳಗಳಲ್ಲಿ ಸ್ಥಳ ಪರಿಶೀಲಿಸಿ 19 ಜನರನ್ನು ರಕ್ಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಒಟ್ಟು 19 ಜನ ಭಿಕ್ಷುಕರಲ್ಲಿ 14 ಜನ ಮಕ್ಕಳಿದ್ದಾರೆ. ಇಬ್ಬರು ಮಕ್ಕಳನ್ನು ಬ್ರೀಮ್ಸ್ ಕೇಂದ್ರದಲ್ಲಿ ಆರೋಗ್ಯ ತಪಾಸಣೆಗಾಗಿ ದಾಖಲು ಮಾಡಲಾಗಿದೆ. 12 ಮಕ್ಕಳನ್ನು ಹಾಗೂ 3 ಜನ ಮಹಿಳೆಯರಿಗೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಡಲಾಗಿದೆ. ಇಬ್ಬರು ಪುರುಷರನ್ನು ನಗರಸಭೆ ವ್ಯಾಪ್ತಿಯಲ್ಲಿ ಬರುವಂತಹ ಪುನರ್ವಸತಿ ಕೇಂದ್ರದಲ್ಲಿ ಇಡಲಾಗಿದೆ ಎಂದು ತಿಳಿಸಿದರು.
ಬೀದರ ಜಿಲ್ಲೆಯಲ್ಲಿ ಪ್ರಮುಖ ಸಾರ್ವಜನಿಕ ಸ್ಥಳ ಹಾಗೂ ದೇವಸ್ಥಾನದಲ್ಲಾ ಭಿಕ್ಷಾಟನೆಗೆ ಸಂಬಂಧಿಸಿದಂತೆ ಚಿಕ್ಕ ಕಂದಮ್ಮ, ಮಕ್ಕಳನ್ನು ದಿನದ ಬಾಡಿಗೆ ಪಡೆದು ಭಿಕ್ಷಾಟನೆಯಲ್ಲಿ ತೊಡಗಿಸುವುದು, ಮಹಿಳೆಯರು ಹಸುಗೂಸುಗಳನ್ನು ಬಳಸಿಕೊಂಡು ಭಿಕ್ಷೆ ಬೇಡುತ್ತಿರುವುದು ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ ಎಂದರು.
ಪ್ರಾಥಮಿಕ ಹಂತದಲ್ಲಿಯೇ ಸಂಘಟಿತ ಭಿಕ್ಷಾಟನೆಯ ಜಾಲಗಳ ಕಡಿವಾಣ ಹಾಕಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜು.11 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಕರ್ನಾಟಕ ಭಿಕ್ಷಾಟನಾ ನಿಷೇಧ ಅಧಿನಿಯಮ 1975ರನ್ವಯ ಕರ್ನಾಟಕ ಭಿಕ್ಷಾಟನಾ ನಿಷೇಧ ಭಿಕ್ಷುಕರ ನಿಯಂತ್ರಣಕ್ಕಾಗಿ ಟಾಸ್ಕ್ ಪೊರ್ಸ್ ಸಮತಿ ಸಭೆ ಕರೆದು ಸಂಬಂಧಪಟ್ಟ ಅಧಿಕಾರಿಗಳಿಗೆ ಸರ್ಕಾರದಿಂದ ವಹಿಸಲಾದ ಜವಾಬ್ದಾರಿಗಳನ್ನು ನಿಯಮಾನುಸಾರ ಕಟ್ಟು ನಿಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
‘ಭಿಕ್ಷುಕರು ನಿಯಂತ್ರಣಕ್ಕೆ ಕೇವಲ ಕಾನೂನು ಪ್ರಾಯೋಗಿಕ ಕ್ರಮವಷ್ಟೇ ಸಾಲದು. ಮಾನವಿಯತೆ, ಪುನರ್ವಸತಿ ಮತ್ತು ಸಮಾನ ಹಕ್ಕುಗಳು ನೀಡಲು ಸಮಗ್ರ ಕ್ರಮ ಅಗತ್ಯವಿದೆ. ಸರ್ಕಾರ, ಸಮಾಜ, ಸಂಘ- ಸಂಸ್ಥೆಗಳು ಹಾಗೂ ನಾಗರಿಕರು ಕೈಜೊಡಿಸಿದಾಗ ಶಾಶ್ವತ ಪರಿಹಾರ ಸಾಧ್ಯ. ಭಿಕ್ಷಾಟನೆ ಒಂದು ಗಂಭಿರ ಸಾಮಾಜಿಕ ಸಮಸ್ಯೆ ಅಲ್ಲದೇ ನಗರಗಳ ಸೌಕರ್ಯ ಮತ್ತು ಶಿಸ್ತಿಗೆ ಅಡ್ಡಿಯಾಗುತ್ತಿರುವ ಪ್ರಕರಣವಾಗಿದೆ’ ಎಂದು ಹೇಳಿದರು.
ಕರ್ನಾಟಕ ಸರ್ಕಾರವು ಭಿಕ್ಷಾಟನೆಯನ್ನು ನಿಯಂತ್ರಣಕ್ಕೆ ಕರ್ನಾಟಕ ಭಿಕ್ಷಾಟನೆ ನಿಷೇಧ ಅಧಿನಿಯಮ 1975 ಈ ಕಾಯ್ದೆಯಂತೆ ಭಿಕ್ಷಾಟನೆ ಮಾಡುವುದು ನಿಷೇದಿಸಲಾಗಿದೆ. ಸಂಪತ್ತು ಇರುವ ಭಿಕ್ಷುಕರನ್ನು ಹಾಗೂ ಬಾಲ ನ್ಯಾಯ ಕಾಯ್ದೆ 2015ರ ಪ್ರಕಾರ ಮಕ್ಕಳನ್ನು ಬಿಕ್ಷಾಟನೆಗೆ ಬಳಸಿದ್ದಲ್ಲಿ 3 ವರ್ಷ ಜೈಲು ಹಾಗೂ 1 ಲಕ್ಷ ದಂಡ ಮತ್ತು ಹಂತವರ ವಿರುದ್ಧ ಕಠಿಣ ಶಿಕ್ಷೆ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಸ್ಥಳದಲ್ಲಿ ಯಾರಾದರೂ ಭಿಕ್ಷಾಟನೆಯಲ್ಲಿ ತೊಡಗಿರುವುದು ಕಂಡುಬಂದರೆ ಕೂಡಲೇ 1098 ಗೆ ಕರೆ ಮಾಹಿತಿ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : ಬೀದರ್ | ವಸತಿ ನಿಲಯದಲ್ಲಿ ಪದವಿ ವಿದ್ಯಾರ್ಥಿನಿ ಆತ್ಮಹತ್ಯೆ
ಜಿಲ್ಲೆಯಲ್ಲಿ ಬೇಟರಮೆಂಟ ಫೌಡೇಶನ್ ವತಿಯಿಂದ ವಿವಿಧ ಸ್ಥಳಗಳಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವರ ಸುಮಾರು 70 ಜನರಿಗೆ ರೇಷನ್ ಸರಬರಾಜು ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅದರಂತೆ ಜಿಲ್ಲೆಯ ಇನ್ನಿತರ ಸಂಸ್ಥೆಗಳು ಈ ಕಾರ್ಯಕ್ಕೆ ಮುಂದೆ ಬರಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.