ಕರ್ನಾಟಕ ರಾಜ್ಯದ ಎಲ್ಲ ಸೌಲಭ್ಯಗಳನ್ನು ಪಡೆಯಲು ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು ಎಂದು ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಇಸಿಓ ರಾಜಕುಮಾರ ಸಾಲಿಮಠ್ ಅಭಿಪ್ರಾಯಪಟ್ಟರು.
ಭಾಲ್ಕಿ ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಶನಿವಾರ ಆಯೋಜಿಸಿದ್ದ ಕನ್ನಡ ಕಲರವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ‘ಕರ್ನಾಟಕದಲ್ಲಿ ವಾಸವಿದ್ದು, ಕರ್ನಾಟಕದ ಹಲವು ಸೌಲಭ್ಯಗಳನ್ನು ಪಡೆಯಬೇಕಾದರೆ ನಮ್ಮ ಸಂಪರ್ಕ ಭಾಷೆ ಕನ್ನಡವಾಗಿರಬೇಕು’ ಎಂದರು.
ʼಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಾದ ಮರಾಠಿ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ಪತ್ರಿಕೆಯಲ್ಲಿಯೇ ಅತಿಹೆಚ್ಚು ಅನುತ್ತೀರ್ಣವಾಗುತ್ತಿರುವುದು ಆತಂಕದ ಸಂಗತಿಯಾಗಿದೆ. ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾಲ್ಕಿ ತಾಲೂಕು ಕಸಾಪ ಏರ್ಪಡಿಸಿದ ಕನ್ನಡ ಕಲರವ ವಿನೂತನ ಕಾರ್ಯಕ್ರಮ ಶ್ಲಾಘನೀಯ. ಇಂಗ್ಲಿಷ್ ವ್ಯಾಮೋಹದಲ್ಲಿ ನಮ್ಮ ನಾಡ ಭಾಷೆ ಮರೆಯಬಾರದು. ನಾವು ಮನೆಯಲ್ಲಿ ಯಾವುದೇ ಭಾಷೆ ಮಾತನಾಡಿದರೂ ಹೊರಗಡೆ ಕನ್ನಡ ಭಾಷೆ ಬಳಸುವುದು ರೂಢಿಸಿಕೊಳ್ಳಬೇಕುʼ ಎಂದು ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ನಾಗಭೂಷಣ ಮಾಮಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼಅನ್ಯ ಭಾಷಿಕರಿಗೆ ಕನ್ನಡ ಕಲಿಸಲು ಪ್ರಯತ್ನಿಸಬೇಕು. ಇದೇ ನಾವು ಕನ್ನಡಕ್ಕೆ ಕೊಡುವ ದೊಡ್ಡ ಕೊಡುಗೆಯಾಗಿದೆ. ನಾಡು, ನುಡಿಯ ರಕ್ಷಣೆಗಾಗಿ ಸ್ಥಾಪಿತವಾದ ಕಸಾಪ ಕನ್ನಡ ನಾಡು, ಭಾಷೆ, ಸಂಸ್ಕೃತಿ. ಪರಂಪರೆ ರಕ್ಷಣೆಗೆ ಹಗಲಿರುಳು ಶ್ರಮಿಸುತ್ತಿದೆ. ಕನ್ನಡದ ಅನೇಕ ಮಹಾತ್ಮರು ಕನ್ನಡಕ್ಕಾಗಿ ಅನುಪಮ ಸೇವೆ ಸಲ್ಲಿಸಿದ್ದು ಎಂದಿಗೂ ಮರೆಯುವಂತಿಲ್ಲʼ ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ʼತಾಲೂಕಿನಲ್ಲಿ ಕಸಾಪದಿಂದ ಕನ್ನಡಪರ ಚಟುವಟಿಕೆಗಳು ಉತ್ತಮವಾಗಿ ನಡೆಯುತ್ತಿವೆ. ಕನ್ನಡ ಉಳಿಸಿ, ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕಸಾಪ ಅಧ್ಯಕ್ಷ ನಾಗಭೂಷಣ ಮಾಮಡಿ ನೇತೃತ್ವದಲ್ಲಿ ಕಸಾಪ ಪದಾಧಿಕಾರಿಗಳು ಉತ್ತಮ ಸೇವೆ ಮಾಡುತ್ತಿರುವುದು ಶ್ಲಾಘನೀಯʼ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಸುಖದೇವ ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಸುಂದರರಾಜ ಹುಣಜಿಕರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯ ʼಬಿಳಿ ಬಂಗಾರʼ ಬೆಳೆಗಾರರಿಗೆ ಸಿಗದ ಪ್ರೋತ್ಸಾಹ : ಹೊರ ರಾಜ್ಯಕ್ಕೆ ಹತ್ತಿ ಮಾರಾಟ!
ಕಾರ್ಯಕ್ರಮದಲ್ಲಿ ಚಂದ್ರಕಾಂತ ತಳವಾಡೆ, ದೀಪಕ ಥಮಕೆ, ಉಪನ್ಯಾಸಕರಾದ ಲಕ್ಷ್ಮೀ, ಅನಿತಾ, ಸಂಸ್ಕೃತಿ, ಮಮಿತಾ ಉಪಸ್ಥಿತರಿದ್ದರು. ದೀಪಕ ಸ್ವಾಗತಿಸಿದರು. ಸುಂದರರಾಜ ನಿರೂಪಿಸಿದರು. ಚಂದ್ರಕಾಂತ ವಂದಿಸಿದರು.