ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸದ ಕಮಲನಗರ ತಾಲ್ಲೂಕಿನ ಡೋಣಗಾಂವ(ಎಂ) ಗ್ರಾಮ ಪಂಚಾಯಿತಿ ಆಡಳಿತ ವ್ಯವಸ್ಥೆ ವಿರುದ್ಧ ಡೋಣಗಾಂವ್ (ಎಂ) ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ʼಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಡೋಣಗಾಂವ್ (ಎಂ) ಗ್ರಾಮದಲ್ಲಿ ಮೂರು ವಾರ್ಡ್‌ಗಳಿದ್ದು, ಸುಮಾರು 4 ಸಾವಿರ ಜನಸಂಖ್ಯೆ ಹೊಂದಿದೆ. ಜೆಜೆಎಂ ಕಾಮಗಾರಿ ಕೈಗೊಂಡರೂ ಸಹ ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ. ನೀರು ಪೂರೈಕೆಗೆ ತೆರೆದ ಬಾವಿಯಿದ್ದರೂ ನೀರಿನ ಸಮಸ್ಯೆ ತಲೆದೋರಿದೆ. ಹೀಗಾಗಿ 3 ದಿನಕ್ಕೊಮ್ಮೆ ನೀರು ಬರುತ್ತದೆ. ಈ ಬಗ್ಗೆ ಅನೇಕ ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನೆ ಆಗಿಲ್ಲʼ ಎಂದು ಗ್ರಾಮಸ್ಥರು ದೂರಿದರು.
ಈ ಕುರಿತು ಶುಕ್ರವಾರ ಗ್ರಾಮದ ಪ್ರಮುಖರು ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ್ ಪಾಟೀಲ್ ಅವರಿಗೆ ನೀರಿನ ಸಮಸ್ಯೆ ಬಗೆಹರಿಸುವ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ʼಗ್ರಾಮದಲ್ಲಿ ನೀರಿನ ಸಮಸ್ಯೆಯಿಂದ ಜನರು ನೀರಿಗಾಗಿ ಕೊಡ ಹಿಡಿದು ಅಲೆದಾಡಬೇಕಾದ ಪರಿಸ್ಥಿತಿ ಇದೆ. ಜೆಜೆಎಂ ಕಾಮಗಾರಿ ಕೈಗೊಂಡರೂ ನೀರು ಪೂರೈಸುವಲ್ಲಿ ಗ್ರಾಮ ಆಡಳಿತ ವ್ಯವಸ್ಥೆ ವಿಫಲವಾಗಿದೆ. ಈ ಸಮಸ್ಯೆ ಮುಂದಿನ ತಿಂಗಳು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ 5 ದಿನಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮದ ಮುಖಂಡರು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಶಿವು ದೇಸಾಯಿ, ಅಪ್ಪಾಸಾಹೇಬ್ ದೇಶಮುಖ, ಉತ್ತಮರಾವ್ ಮಾನೆ, ವಿಲಾಸ ಗಂದಗೆ, ಮಹಾದೇವ ಚಾಕುರೆ, ಅನೀಲ್ ಗಂದಗೆ, ತುಳಸಿರಾಮ ಮಾನೆ, ವಿಜಯಕುಮಾರ್ ಪಾಟೀಲ್, ರಾಜಪ್ಪಾ ತೇಲಿ, ಸಂಗಮೇಶ ವಲ್ಲೂರೆ ಮತ್ತಿತರರಿದ್ದರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ವಿಜಯಕುಮಾರ್ ಅವರಿಗೆ ʼಈದಿನ.ಕಾಮ್ʼ ಸಂಪರ್ಕಿಸಿದರೆ, ಅವರು ಕರೆ ಸ್ವೀಕರಿಸಲಿಲ್ಲ.