ಬೀದರ್ ನಗರದ ಗರೀಬಿ ಕಾಲೋನಿಗೆ ಹೊಂದಿಕೊಂಡಿರುವ 35ನೇ ವಾರ್ಡ್‌ನಲ್ಲಿ ಕಳೆದ ವರ್ಷದಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿದ್ದು, ನೀರಿನ ಸಮಸ್ಯೆಯಿಂದ ಪರದಾಡುವಂತಾಗಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.
ಈ ಕುರಿತು ಮಂಗಳವಾರ ಭಾರತ ಕಮ್ಯೂನಿಷ್ಟ್ ಪಕ್ಷ (ಸಿಪಿಐ) ಜಿಲ್ಲಾ ಮಂಡಳಿ ನೇತ್ರತ್ವದಲ್ಲಿ ಮಹಿಳೆಯರು ಖಾಲಿ ಕೊಡ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ʼಈ ವಾರ್ಡ್‌ನಲ್ಲಿ 50ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿನ ನಿವಾಸಿಗಳಿಗೆ ನೀರು, ರಸ್ತೆ, ಚರಂಡಿ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೇ ಈ ವಾರ್ಡ್ ಕೊಳಚೆ ಪ್ರದೇಶದಂತಿದೆ. ಎರಡು ಕೊಳವೆ ಬಾವಿಗಳಿದ್ದು, ದಿನಕ್ಕೆ 10 ಕೊಡ ನೀರು ಮಾತ್ರ ಸಿಗುತ್ತದೆ. ಇದೀಗ ಬೇಸಿಗೆ ಆರಂಭವಾಗಿದ್ದು, ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ ಎಂದು ಸ್ಥಳೀಯರು ಗೋಳು ತೋಡಿಕೊಂಡಿದ್ದಾರೆ.
ʼನಗರ ಪ್ರದೇಶದಲ್ಲಿ ವಾಸಿಸುವ ನಮಗೆ ಕಳೆದ ವರ್ಷದಿಂದ ನೀರಿನ ಸಮಸ್ಯೆ ಉಂಟಾಗಿದೆ, ಸಮಪರ್ಕ ನೀರು ಸಿಗದಿರುವುದಕ್ಕೆ ದೂರದಿಂದ ತರಬೇಕಾದ ಪರಿಸ್ಥಿತಿ ಇದೆ. ಒಮ್ಮೊಮ್ಮೆ ಹಣ ಕೊಟ್ಟು ಟ್ಯಾಂಕರ್ ನೀರು ಖರೀದಿಸಬೇಕಾಗುತ್ತದೆ. ಈ ಬಗ್ಗೆ ಸ್ಥಳೀಯ ನಗರಸಭೆ ಸದಸ್ಯರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ನಮ್ಮ ವಾರ್ಡ್‌ನಲ್ಲಿ ನೀರಿನ ಸಮಸ್ಯೆ ಬಗೆಹರಿಸಿ, ವಿದ್ಯುತ್ ಸಂಪರ್ಕ ಕಂಬ ಅಳವಡಿಸಬೇಕುʼ ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವೃದ್ದಾಪ್ಯ ವೇತನ ಬಾರದೆ ವೃದ್ಧ ದಂಪತಿ ಪರದಾಟ; ಕಣ್ಣು ಹಾಯಿಸುವರೇ ಅಧಿಕಾರಿಗಳು?
ಸಿಪಿಐ ಜಿಲ್ಲಾ ಮಂಡಳಿ ಸದಸ್ಯ ಬಾಬುರಾವ್ ಹೊನ್ನಾ, ಭಾರತೀಯ ರಾಷ್ಟ್ರೀಯ ಮಹಿಳಾ ಒಕ್ಕೂಟ ಸಂಚಾಲಕಿ ಜೀವಿಕಾ, ಸಹ ಸಂಚಾಲಕಿ ಅಮೀತಾ ಚೌವ್ಹಾಣ, ಶಾರದಾ ಸೇರಿದಂತೆ ಮತ್ತಿತರರು ಇದ್ದರು.