ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರ(ಬಿ) ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಕೆಕೆಆರ್‌ಟಿಸಿ ಬಸ್ ನಿಲ್ದಾಣ ಉದ್ಘಾಟನೆಯಾಗಿ ವರ್ಷದ ಬಳಿಕ ಕಾರ್ಯಾರಂಭವಾಗಿದೆ. ಈ ದಿನ.ಕಾಮ್ ವರದಿಯ ಬೆನ್ನಲ್ಲೇ ಎಚ್ಚೆತ್ತ ಕೆಕೆಆರ್‌ಟಿಸಿ ಅಧಿಕಾರಿಗಳು, ಶುಕ್ರವಾರ ನಿಲ್ದಾಣದಲ್ಲಿ ಬಸ್ ಕಾರ್ಯಾರಂಭ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ವೆಚ್ಚದಿಂದ ನಿರ್ಮಾಣಗೊಂಡ ಬಸ್ ತಂಗುದಾಣ ಉದ್ಘಾಟನೆಯಾಗಿ ವರ್ಷ ಕಳೆದರೂ ಸಾರ್ವಜನಿಕರ ಸೇವೆಗೆ ಒದಗಿಸಿರಲಿಲ್ಲ. ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿ ಪ್ರಯಾಣಿಕರು ಎಂದಿನಂತೆ ತೊಂದರೆ ಅನುಭವಿಸುತ್ತಿರುವ ಬಗ್ಗೆ ಈ ದಿನ.ಕಾಮ್ ಗುರುವಾರ “ಉದ್ಘಾಟನೆಯಾಗಿ ವರ್ಷ ಕಳೆದರೂ ಉಪಯೋಗಕ್ಕಿಲ್ಲದ ʼಬಸ್ ನಿಲ್ದಾಣ” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಈ ವರದಿಗೆ ಸ್ಪಂದಿಸಿದ ಬೀದರ್ ಜಿಲ್ಲೆಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ನಿಲ್ದಾಣಕ್ಕೆ ಬಸ್ ಓಡಿಸುವ ಮೂಲಕ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮಸ್ಥರು, ಬಸ್ ಚಾಲಕ-ನಿರ್ವಾಹಕರು ಇದ್ದರು.

ಬೀದರ್-ನಿಟ್ಟೂರ್ ಹಾಗೂ ಭಾಲ್ಕಿ-ಔರಾದ್ ಮಾರ್ಗ ಚಲಿಸುವ ಸಾರಿಗೆ ಇಲಾಖೆ ಬಸ್‌ಗಳು ನಿಲ್ದಾಣಕ್ಕೆ ಬಂದಿರುವುದರಿಂದ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಹೊಸ ಭರವಸೆ ಮೂಡಿದೆ.
ಇದನ್ನು ಓದಿದ್ದೀರಾ? ರಾಜಭವನ ಚಲೋ | ಬಾಕಿ ಪ್ರಕರಣಗಳ ಪರಿಶೀಲನೆ: ಕಾಂಗ್ರೆಸ್ ನಿಯೋಗಕ್ಕೆ ರಾಜ್ಯಪಾಲರ ಭರವಸೆ
ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾದ ಬಸ್ ನಿಲ್ದಾಣ ಇನ್ಮುಂದೆ ಜನರ ಸೇವೆಗೆ ಸಿದ್ಧವಾಗಿದೆ. ವರದಿಗೆ ಸ್ಪಂದಿಸಿದ ಕೆಕೆಆರ್‌ಟಿಸಿ ಅಧಿಕಾರಿಗಳಿಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದರು. ಈ ಕುರಿತು ವಿಶೇಷ ವರದಿ ಪ್ರಕಟಿಸಿದ ಈ ದಿನ.ಕಾಮ್ ಗೆ ಗ್ರಾಮಸ್ಥರು ಧನ್ಯವಾದ ತಿಳಿಸಿದ್ದಾರೆ.
ಬಸ್ ನಿಲ್ದಾಣದ ಕೋಣೆಯಲ್ಲಿ ಶೇಖರಿಸಿದ ಸಾಮಾಗ್ರಿಗಳು ಖಾಲಿ ಮಾಡಲಾಗಿದೆ. ನಿಲ್ದಾಣದ ಆವರಣ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.