ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಕೆಲಸ ಮಾಡಲಾಗದ ವೃದ್ಧರು. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳಬೇಕಾದ ಮಗ ಬೇರೆ ನಗರದಲ್ಲಿ ವಾಸ. ಸರ್ಕಾರದ ಯೋಜನೆಗಳು ಸಿಗದ ವೃದ್ಧ ದಂಪತಿ ಕುಟುಂಬಕ್ಕೆ ನರಕಯಾತನೆ. ಒಪ್ಪತ್ತಿನ ಊಟಕ್ಕೂ ಪರದಾಟ!
ಇದು ಔರಾದ್ ತಾಲ್ಲೂಕಿನ ಶೆಂಬೆಳ್ಳಿ ಗ್ರಾಮದ ವೃದ್ಧ ದಂಪತಿ ಲಾಲಪ್ಪ ಹಾಗೂ ಲಕ್ಷ್ಮೀಬಾಯಿ ಸಿಂಗೆ ಅವರ ಕುಟುಂಬದ ಬದುಕಿನ ಚಿತ್ರಣ. 80 ವರ್ಷದ ಲಾಲಪ್ಪ ಹಾಗೂ 60 ವರ್ಷದ ಲಕ್ಷ್ಮೀಬಾಯಿ ದಂಪತಿ ಸಂಧ್ಯಾ ಸುರಕ್ಷಾ ಯೋಜನೆ ಪಿಂಚಣಿಯಿಂದ ವಂಚಿತರಾಗಿ ಸಂಕಷ್ಟದಲ್ಲಿ ಬದುಕು ದೂಡುತ್ತಿದ್ದಾರೆ.
ಲಾಲಪ್ಪ ಅವರು ಕಳೆದ 15ಕ್ಕೂ ಹೆಚ್ಚಿನ ವರ್ಷದಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆಯಿಂದ ಹೊರ ಬಾರದಂತಹ ಪರಿಸ್ಥಿತಿ ಇದೆ. ಇನ್ನು ಅವರ ಪತ್ನಿ ಲಕ್ಷ್ಮೀಬಾಯಿ ಅವರಿಗೆ ದೃಷ್ಟಿದೋಷವಿದೆ. ಕೆಲಸ ಮಾಡಲು ಆಗುತ್ತಿಲ್ಲ. ಆದರೆ ಉಪಜೀವನಕ್ಕೆ ಯಾವುದೇ ಆರ್ಥಿಕ ನೆರವು ಇಲ್ಲದಿರುವುದಕ್ಕೆ ಕೂಲಿ ಕೆಲಸಕ್ಕೆ ಹೋಗವುದು ಅನಿವಾರ್ಯ ಎಂಬಂತಾಗಿದೆ.
ಈ ಹಿಂದೆ ಲಾಲಪ್ಪ ಅವರಿಗೆ ಪಿಂಚಣಿ ಹಣ ಬರುತ್ತಿತ್ತು, ಆಧಾರ್ ಕಾರ್ಡ್ ಹಾಗೂ ತಾಂತ್ರಿಕ ಸಮಸ್ಯೆ ಕಾರಣಕ್ಕೆ ಕಳೆದ ಒಂದು ವರ್ಷದಿಂದ ಪಿಂಚಣಿ ಸ್ಥಗಿತವಾಗಿದೆ. ವೃದ್ಧೆ ಲಕ್ಷ್ಮೀಬಾಯಿ ಅವರು ಪಿಂಚಣಿ ಪಡೆಯುವ ಅರ್ಹತೆ ಹೊಂದಿದ್ದಾರೆ. ಆದರೆ ಓಡಾಡಲು ಸಾಧ್ಯವಾಗದಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಇಳಿವಯಸ್ಸಿನ ದಂಪತಿ ತಮ್ಮ ಔಷಧಿ ಖರ್ಚಿಗೂ ಹಣವಿಲ್ಲದೆ ಪರದಾಡುತ್ತಿದ್ದು, ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಮಾಸಿಕ ₹1,200 ಬರುವಂತೆ ಮಾಡಿಕೊಡಲು ʼಈದಿನ.ಕಾಮ್ʼ ಜೊತೆ ಮಾತನಾಡಿ ಅಳಲು ತೋಡಿಕೊಂಡಿದ್ದಾರೆ.
ʼಸರಕಾರದ ವೃದ್ದಾಪ್ಯ ವೇತನವನ್ನೇ ಅವಲಂಬಿಸಿರುವ ಲಾಲಪ್ಪ ಸಿಂಗೆ ಅವರಿಗೆ ಬರುತ್ತಿದ್ದ ಮಾಸಿಕ ಪಿಂಚಣಿ ತಾಂತ್ರಿಕ ದೋಷದಿಂದ ರದ್ದಾಗಿದ್ದು, ಅದನ್ನು ಕೂಡಲೇ ಕಂದಾಯ ಇಲಾಖೆ ಅಧಿಕಾರಿಗಳು ಸರಿಪಡಿಸಿ ಪಿಂಚಣಿ ಹಣ ಖಾತೆಗೆ ಜಮಾ ಆಗುವಂತೆ ಕ್ರಮವಹಿಸಬೇಕು. ಹಾಗೂ ಅವರ ಪತ್ನಿ ಲಕ್ಷ್ಮೀಬಾಯಿ ವೃದ್ದಾಪ್ಯ ವೇತನ ಪಡೆಯಲು ಅರ್ಹತೆ ಹೊಂದಿದ್ದು, ಅವರಿಗೂ ಪಿಂಚಣಿ ಮಂಜೂರು ಮಾಡಬೇಕುʼ ಎಂದು ದಸಂಸ ಮುಖಂಡ ಗಣಪತಿ ವಾಸುದೇವ ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ʼರಕ್ತ ವಿಲಾಪʼ ನಾಟಕದಲ್ಲಿ ಮೂಡಿದ ವರ್ತಮಾನದ ತಲ್ಲಣ : ಭೀಮಾಶಂಕರ ಬಿರಾದರ್
ಈ ಕುರಿತು ಔರಾದ್ ತಹಶೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಅವರಿಗೆ ವಿಚಾರಿದಾಗ, ʼತಾಂತ್ರಿಕ ಸಮಸ್ಯೆಯಿಂದ ಮಾಸಿಕ ಮಸಾಶನ ಬರುವುದು ರದ್ದಾಗಿರಬಹುದು. ಇದನ್ನು ಶೀಘ್ರದಲ್ಲೇ ಬಗೆಹರಿಸಿ ಲಾಲಪ್ಪ ಹಾಗೂ ಲಕ್ಷ್ಮೀಬಾಯಿ ದಂಪತಿಗೆ ಸಂಧ್ಯಾ ಸುರಕ್ಷಾ ಯೋಜನೆ ಹಣ ಬರುವಂತೆ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸುವೆʼ ಎಂದು ಹೇಳಿದರು.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.