ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಕೊನೆಗೊಳ್ಳಬಾರದು. ಬಾಬಾ ಸಾಹೇಬರ ಸಂದೇಶಗಳನ್ನು ಎದೆಯೊಳಗೆ ಇಳಿಸಿಕೊಂಡು ಸಮಾಜದಲ್ಲಿ ನಿರಂತರವಾಗಿ ಬಿತ್ತಬೇಕಾಗಿದೆ. ಒಡೆದು ಹೋಗುತ್ತಿರುವ ಎಲ್ಲಾ ಜಾತಿ ಸಮುದಾಯಗಳನ್ನು ಒಗ್ಗೂಡಿಸುವುದು ಇಂದು ಅಗತ್ಯವಾಗಿದೆ ಎಂದು ಚಿಂತಕ ಶ್ಯಾಮಸುಂದರ್ ಖಾನಾಪುರ್ ಹೇಳಿದರು.
ಔರಾದ್ ತಾಲ್ಲೂಕಿನ ಲಿಂಗದಳ್ಳಿ(ಕೆ) ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ಸಮಿತಿಯಿಂದ ಆಯೋಜಿಸಿದ ಮಹಾತ್ಮ ಜ್ಯೋತಿಬಾ ಫುಲೆ ಜಯಂತಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ʼಯಾವುದೇ ಖಡ್ಗದಿಂದ ಆಗದೇ ಇರುವ ಮಹತ್ವದ ಕಾರ್ಯವನ್ನು ಬಾಬಾ ಸಾಹೇಬರು ಪೆನ್ನು, ಪುಸ್ತಕದಿಂದ ಮಾಡಿ ತೋರಿಸಿದ್ದಾರೆ. ಭಾರತ ದೇಶದ ಕೋಟ್ಯಂತರ ಜನರಿಗೆ ಪೆನ್ನು, ಪುಸ್ತಕ ಮೂಲಕ ಸ್ವಾತಂತ್ರ್ಯ, ಸಮಾನತೆ, ನ್ಯಾಯ ಹಾಗೂ ಭಾತ್ರತ್ವವನ್ನು ನೀಡಿದ್ದಾರೆ. ಅಂಬೇಡ್ಕರ್ ಅವರನ್ನು ಆರಾಧನೆಗಷ್ಟೇ ಸೀಮಿತಗೊಳಿಸದೆ ಅವರ ವಿದ್ವತ್ತು, ಪ್ರೀತಿ, ಕರುಣೆ ನಾವೆಲ್ಲರೂ ಮೈಗೂಡಿಸಿಕೊಂಡರೆ ಮಾತ್ರ ಪ್ರಬುದ್ಧ ಭಾರತ ನಿರ್ಮಾಣವಾಗಲು ಸಾಧ್ಯʼ ಎಂದು ತಿಳಿಸಿದರು.
ಮುಖಂಡ ಭೀಮಶೇನರಾವ್ ಸಿಂಧೆ ಮಾತನಾಡಿ, ʼಬುದ್ಧ, ಬಸವ, ಅಂಬೇಡ್ಕರ್ ಅವರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಮೌಲ್ಯಗಳು ಸಮಾಜಕ್ಕೆ ಮಾದರಿಯಾಗಿವೆ. ಜಗತ್ತಿನಲ್ಲಿ ಶ್ರೇಷ್ಠ ಸಂವಿಧಾನ ರಚಿಸಿದ ಬಾಬಾ ಸಾಹೇಬರು ಹುಟ್ಟಿದ ದಿನವೇ ದೇಶಕ್ಕೆ ಹೊಸ ಬೆಳಕು ಬಂದಿದೆ. ಅವರ ಆದರ್ಶಗಳನ್ನು ನಿಜ ಜೀವನದಲ್ಲಿ ಆಚರಣೆಗೆ ತರಬೇಕುʼ ಎಂದು ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ್ ಮಾತನಾಡಿ, ʼಸಮಾಜದಲ್ಲಿ ಬೇರೂರಿದ ಕೆಟ್ಟ ಸಂಪ್ರದಾಯವನ್ನು ಕಿತ್ತೊಗೆದು ಮಕ್ಕಳಿಗೆ ಮೌಲ್ಯ ಶಿಕ್ಷಣ ನೀಡಿ ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ದೇಶದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲು ಭಗವಾನ್ ಬುದ್ಧರ ಧಮ್ಮ ಮಾರ್ಗದಲ್ಲಿ ಸಾಗಬೇಕು. ಜಾತಿ ವ್ಯವಸ್ಥೆ ಹೋಗಲಾಡಿಸಲು ಬಾಬಾ ಸಾಹೇಬರು ಬದುಕಿನುದ್ದಕ್ಕೂ ಹೋರಾಟ ನಡೆಸಿದರು. ಮೀಸಲಾತಿ ಹೆಸರಿನಲ್ಲಿ ಯಾರೊಬ್ಬರೂ ಬಾಬಾ ಸಾಹೇಬರ ಧಮ್ಮ ಮತ್ತು ಸಿದ್ಧಾಂತಕ್ಕೆ ದ್ರೋಹ ಬಗೆಯಬಾರದುʼ ಎಂದರು.

ನ್ಯಾಯವಾದಿ ಶಿವರುದ್ರ ಕಾಂಬಳೆ, ದಲಿತ ಯುನಿಟಿ ಮ್ಯೂಮೆಂಟ್ ಸಂಸ್ಥಾಪಕ ವಿನೋದ ರತ್ನಾಕರ್, ಬಸವರಾಜ ಬಿರಾದರ್ ಮಾತನಾಡಿದರು. ಯುವ ಹೋರಾಟಗಾರ ರಾಹುಲ್ ಖಂದಾರೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಪ್ಪಳಗಾವ್ ಬುದ್ಧ ವಿಹಾರದ ಭಂತೆ ಬೋಧಿರತ್ನಾ, ಯಲ್ಲಾಲಿಂಗ ಮಠದ ಶಂಕ್ರಯ್ಯಾ ಸ್ವಾಮಿ ದಿವ್ಯ ಸಾನಿಧ್ಯ ವಹಿಸಿದ್ದರು. ಶರಣಪ್ಪ ವೀರಪ್ಪ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಂವಿಧಾನ ಮೇಲೆ ಬೆಳಕು ಚೆಲ್ಲುವ ʼಭಾಗ್ಯವಿದಾತʼ ಕೃತಿ : ಧನರಾಜ ತುಡಮೆ
ಬೀದರ್ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ದೊಡ್ಡಿ, ಬೀದರ್ ನಗರಸಭೆ ಸದಸ್ಯ ಸೂರ್ಯಕಾಂತ ಸಾಧುರೆ, ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಭೋಲೆ, ಲಿಂಗದಳ್ಳಿ ಗ್ರಾ.ಪಂ.ಸದಸ್ಯ ಶ್ರೀಶೈಲ ಪಾಟೀಲ್, ದಸಂಸ ಮುಖಂಡರಾದ ಸುಭಾಷ ಲಾಧಾ, ಗಣಪತರಾವ್ ವಾಸುದೇವ ಪ್ರಮುಖರಾದ ಸುಧಾಕರ ಕೊಳ್ಳೂರ್, ಮಾಣಿಕ ಹೆಗಡೆ, ಪಂಡಿತ, ಮಾಸ್ಟರ್, ಬಾಬುರಾವ್ ಮಾನೆ, ಪವನ ಮಿಠಾರೆ, ಫೀರ್ದೊಶ್ ಖಾನ್ ಪಟೇಲ್, ಪಂಡರಿ ಕಸ್ತೂರೆ, ಸಚಿನ್ ಗಿರಿ, ಪ್ರಕಾಶ ರಾವಣ, ಸಂತೋಷ ಸಿಂಧೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು, ಗ್ರಾಮಸ್ಥರು ಪಾಲ್ಗೊಂಡಿದ್ದರು.