ಅಂಗನವಾಡಿಗಳಲ್ಲಿ ಶಿಕ್ಷಕಿಯರು ಮತ್ತು ಮನೆಯಲ್ಲಿ ಪೋಷಕರು ಮಕ್ಕಳ ಕೈಗೆ ಮೊಬೈಲ್ ನೀಡದೇ, ಪಠ್ಯೇತರ ಚಟುವಟಿಕೆಗಳ ಮೂಲಕ ಕಲಿಕೆಗೆ ಪ್ರೇರಣೆ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಸಿ.ಗುರುರಾಜ್ ಹೇಳಿದರು.
ಔರಾದ್ ತಾಲೂಕಿನ ಸಂತಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಸಂತಪುರ, ಕಲಿಕಾ ಟಾಟಾ ಟ್ರಸ್ಟ್ ಮತ್ತು ಗ್ರಾಪಂ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ ಅಂಗನವಾಡಿ ಮಕ್ಕಳ ಬಾಲ ಮೇಳ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ʼಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಿಂದ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಸದುಪಯೋಗವಾಗಿದ್ದು, ಪಠ್ಯಕ್ರಮದಂತೆ ಚಟುವಟಿಕೆಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಯೋಜನೆಗೆ 2024-25ನೇ ಸಾಲಿನಲ್ಲಿ ರಾಷ್ಟ್ರೀಯ ನೆಕ್ಸ್ಸ್ ಪ್ರಶಸ್ತಿ ಸಹ ಲಭಿಸಿದೆ. ʼಪೋಷಕರ ನಡೆ ಅಂಗನವಾಡಿ ಕಡೆʼ ಸಭೆಗಳು ಮತ್ತು ʼಹಲೋ ಪೋಷಕರೇʼ ಇಂತಹ ವಿನೂತನ ಕಾರ್ಯಕ್ರಮಗಳ ಮೂಲಕ ಮಕ್ಕಳು ಹಾಗೂ ಪಾಲಕರನ್ನು ಅಂಗನವಾಡಿಗೆ ಕರೆತರುವ ಕಾರ್ಯಕ್ರಮ ನಡೆಯುತ್ತಿವೆ. ಬಾಲ ಮೇಳ ಕಾರ್ಯಕ್ರಮ ಮಕ್ಕಳ ಕಲಿಕೆ ಮತ್ತು ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆʼ ಎಂದರು.
ಔರಾದ್ ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿ.ಕೆ. ಮಾತನಾಡಿ, ʼಅಂಗನವಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶಾಲಾ ಪೂರ್ವ ಶಿಕ್ಷಣ ಅತ್ಯಂತ ಸಹಕಾರಿಯಾಗಿದೆ. ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕಾಂಶ ಆಹಾರ ನೀಡುವುದು ಅವಶ್ಯಕವಾಗಿದೆ. ಚಟುವಟಿಕೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಿದರೆ ಮಕ್ಕಳ ಕಲಿಕೆಗೆ ಸುಲಭವಾಗಿಸುವ ಉದ್ದೇಶದಿಂದ ಬಾಲ ಮೇಳ ಕಾರ್ಯಕ್ರಮ ಆಯೋಜಿಸಲಾಗಿದೆʼ ಎಂದರು.
ಗ್ರಾಮ ಪಂಚಾಯಿತಿ ಪಿಡಿಒ ಸಂತೋಷ ಪಾಟೀಲ್, ಟಾಟಾ ಕಲಿಕಾ ಟ್ರಸ್ಟ್ ಜಿಲ್ಲಾ ಸಂಯೋಜಕಿ ಮಲ್ಲಮ್ಮ ಬಿರಾದರ್ ಮಾತನಾಡಿದರು. ಬಾಲ ಮೇಳ ಕಾರ್ಯಕ್ರಮದ ಅಂಗವಾಗಿ ಮಕ್ಕಳು ಹಾಗೂ ಪಾಲಕರಿಗೆ ಕ್ರೀಡೆ ಏರ್ಪಡಿಸಲಾಯಿತು. ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ವೇಷ ಭೂಷಣ ಹಾಗು ಕಲಿಕಾ ಚಟುವಟಿಕೆಗಳ ಪ್ರದರ್ಶನ ನಡೆಯಿತು.
ಈ ಸುದ್ದಿ ಓದಿದ್ದೀರಾ? ಬೀದರ್ | 15 ತಿಂಗಳಾದರೂ ಪದವೀಧರ ಶಿಕ್ಷಕರಿಗಿಲ್ಲ ನಾಲ್ಕು ತಿಂಗಳ ಪಗಾರ!
ಸಂತಪೂರ ಗ್ರಾಪಂ ಅಧ್ಯಕ್ಷೆ ಮಹಾದೇವಿ ಪಾಟೀಲ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮ್ಮದ್ ಅಬ್ದುಲ್
ಖಲೀಲ್, ಗ್ರಾಪಂ ಸದಸ್ಯ ಚಂದ್ರಕಾಂತ ಪಾಟೀಲ್, ಶೋಭಾವತಿ ರಾಠೋಡ್, ರಾಜಶ್ರೀ, ವಲಯ ಮೇಲ್ವಿಚಾರಕಿ ವಿಜಯಲಕ್ಷ್ಮಿ ಸ್ವಾಗತಿಸಿ, ನಿರೂಪಿಸಿದರು.