ಸಾಲದ ಕಂತು ಕಟ್ಟಿಲ್ಲವೆಂದು ಖಾಸಗಿ ಬ್ಯಾಂಕ್ ಸಿಬ್ಬಂದಿ ರೈತರೊಬ್ಬರ ಜಮೀನಿಗೆ ತೆರಳಿ ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ಭಾಲ್ಕಿ ತಾಲ್ಲುಕಿನ ಕೇಸರಜವಳಗಾ ಗ್ರಾಮದಲ್ಲಿ ನಡೆದಿದೆ.
ಭಾಲ್ಕಿಯ ಸಿದ್ಧಶ್ರೀ ಬ್ಯಾಂಕ್‌ನ ನಾಲ್ವರು ಸಿಬ್ಬಂದಿ ಏ.17 ರಂದು ಸಂಜೆ ರೈತ ರಾಜಕುಮಾರ ನಾಗಪ್ಪಾ ಮಟ್ಟೆ ಅವರು ಕೆಲಸ ಮಾಡುತ್ತಿರುವ ಜಮೀನಿಗೆ ತೆರಳಿ ಸಾಲದ ಕಂತಿನ ಹಣ ಯಾಕೆ ಕಟ್ಟಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ರಾಜಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ರೈತ ರಾಜಕುಮಾರ್ ನಾಗಪ್ಪ ಮಟ್ಟೆ ಅವರ ಪತ್ನಿ ವಿಜಯಲಕ್ಷ್ಮಿಅವರು ಭಾಲ್ಕಿ ಪಟ್ಟಣದಲ್ಲಿರುವ ಸಿದ್ಧಶ್ರೀ ಬ್ಯಾಂಕ್‌ನಲ್ಲಿ ₹35 ಸಾವಿರ ಸಾಲ ಪಡೆದಿದ್ದರು. ಬ್ಯಾಂಕ್ ನಿಯಮದಂತೆ ಪ್ರತಿ ವಾರ ಸಾಲದ ಕಂತು ಮರುಪಾವತಿಸಿದ್ದಾರೆ. ಆದರೆ ಉಳಿದಿರುವ ಬಾಕಿ ₹9,180 ಹಣ ಯಾಕೆ ಕಟ್ಟಿಲ್ಲವೆಂದು ಪ್ರಶ್ನಿಸಿ ಎಂದು ಬ್ಯಾಂಕ್ ಸಿಬ್ಬಂದಿ ರಾಜಕುಮಾರ್ ಅವರಿಗೆ ಬಡಿಗೆಯಿಂದ ಹೊಡೆದು ಗಾಯಗೊಳಿಸಿದ್ದರು.
ಹಲ್ಲೆಗೊಳಗಾದ ರೈತ ರಾಜಕುಮಾರ್ ಮಟ್ಟೆ ಅವರನ್ನು ಕೂಡಲೇ ಹುಲಸೂರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇನ್ನೂ ಚಿಕಿತ್ಸೆ ಮುಂದುವರೆದಿದೆ.
ʼಸಾಲದ ಕಂತು ಕಟ್ಟುವುದು ಯಾವುದೂ ಬಾಕಿ ಇಲ್ಲ. ಅಂದು ಮುಂಜಾನೆ ಕಟ್ಟಬೇಕಾದ ಸಾಲದ ಕಂತು ಕಟ್ಟಿಲ್ಲವೆಂದು ಸಂಜೆ ಜಮೀನಿಗೆ ಬಂದು ನನ್ನ ತಲೆ, ಬೆನ್ನಿನ ಮೇಲೆ ಹೊಡೆದು ಗುಪ್ತಗಾಯ ಮಾಡಿದ್ದಾರೆ. ಈ ಹಿಂದೆ ಕೂಡ ಒಮ್ಮೆ ಸಾಲದ ಮರುಪಾವತಿ ವಿಚಾರಕ್ಕೆ ಬ್ಯಾಂಕ್ ಸಿಬ್ಬಂದಿಯೊಂದಿಗೆ ಜಗಳವಾಗಿತ್ತುʼ ಎಂದು ಹಲ್ಲೆಗೊಳಗಾದ ರಾಜಕುಮಾರ್ ಮಟ್ಟೆ ಅವರು ʼಈದಿನ.ಕಾಮ್ʼ ಜೊತೆ ಮಾತನಾಡಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪತ್ರಕರ್ತನ ಮೇಲೆ ಹಲ್ಲೆ ಪ್ರಕರಣ : ಅರಣ್ಯ ಪಾಲಕ ದಸ್ತಗಿರಿಸಾಬ ಅಮಾನತುಈ ಸುದ್ದಿ ಓದಿದ್ದೀರಾ?
ರೈತ ರಾಜಕುಮಾರ್ ಮಟ್ಟೆ ಅವರು ನೀಡಿದ ದೂರಿನ ಮೇರೆಗೆ ಭಾಲ್ಕಿ ಸಿದ್ಧಶ್ರೀ ಬ್ಯಾಂಕ್ ಸಿಬ್ಬಂದಿಗಳಾದ ಸಂಗಮೇಶ ಚಮಕೋಡೆ, ಸಂಗಮೇಶ ಬಿರಾದರ್, ಕಿರಣ ಪಾಟೀಲ್ ಹಾಗೂ ಸುನೀಲ್ ಎಂಬುವವರ ಮೇಲೆ ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.