ಮೊಬೈಲ್ ಬಳಕೆಯಿಂದ ನಮ್ಮ ಮೂಲ ಜಾನಪದ ಸಂಸ್ಕೃತಿ ಮರೆಯಾಗುತ್ತಿದೆ. ಮಕ್ಕಳಿಗೆ ಶಾಲೆಯಲ್ಲಿ ಗುರುಗಳು, ಮನೆಯಲ್ಲಿ ಪಾಲಕರು ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ಕಾರ್ಯಪ್ರವೃತ್ತರಾಗಬೇಕು. ಮಕ್ಕಳಿಗೆ ಉತ್ತಮವಾದ ರೀತಿಯ ಸಂಸ್ಕೃತಿಯನ್ನು ಕಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ತಿಳಿಸಿದರು.
ಬುಧುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೀದರ್ ನಗರದ ಸೆಂಟ್ ಜೋಸೆಫ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಸಭಾಣಂಗಣದಲ್ಲಿ ಹಮ್ಮಿಕೊಂಡಿದ್ದ ಚಿಗುರು ಬಾಲ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೀದರ ಅಪರ ಜಿಲ್ಲಾಧಿಕಾರಿ ಸುರೇಖಾ ಮಾತನಾಡಿ, ʼಮಕ್ಕಳು ದೇಶಿ ಕಲೆಗಳತ್ತ ಗಮನ ಹರಿಸಬೇಕು, ಸಂಗೀತದಿಂದ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯವಾಗುತ್ತದೆ. ಮಕ್ಕಳು ಪಠ್ಯದೊಂದಿಗೆ ಸಂಗೀತ, ನೃತ್ಯ, ಜಾನಪದ ಕಲೆ ಮುಂತಾದವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಹೆಚ್ಚಿನ ಜ್ಞಾನ ಸಂಪಾದಿಸಬಹುದುʼ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಪ್ರಾಸ್ತಾವಿಕ ಮಾತನಾಡಿ, ʼಜಿಲ್ಲೆಯಲ್ಲಿ ಚಿಗುರು ಕಾರ್ಯಕ್ರಮದಲ್ಲಿ 8 ರಿಂದ 14 ವರ್ಷ ವಯೋಮಾನದ ಪ್ರತಿಭಾವಂತ ಮಕ್ಕಳಿಗೆ ಅವಕಾಶ ನೀಡಲಾಗುವುದು. ಕಲೆ ಉಳಿಸಿ ಕಲೆ ಬೆಳೆಸುವ ನಿಟ್ಟಿನಲ್ಲಿ ಇಲಾಖೆಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆʼ ಎಂದು ತಿಳಿಸಿದರು.
ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ ಮಾತನಾಡಿ, ʼಮಕ್ಕಳು ಇವತ್ತು ಪಾರಂಪಾರಿಕ ವಾದ್ಯಪರಿಕರಗಳನ್ನು ಬಳಸಿ ಸಂಗೀತ ವಿದ್ಯೆ ಕಲಿಯಬೇಕು. ಮೂಲ ಜಾನಪದ ಸಂಸ್ಕೃತಿ ಮರೆಯಾಗದಂತೆ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡಬೇಕುʼ ಎಂದು ಸಲಹೆ ನೀಡಿದರು.
ಚಿಗುರು ಕಾರ್ಯಕ್ರಮದಲ್ಲಿ ವಾದ್ಯಸಂಗೀತ ಕು.ಪ್ರತೀಕ ಸ್ವಾಮಿ ಮತ್ತು ತಂಡ, ಕು.ವೇದಾ ಮತ್ತು ತಂಡ, ಸುಗಮ ಸಂಗೀತ ಕು. ಪ್ರತೀಕ್ಷಾ ಮತ್ತು ತಂಡ ಸಮೂಹ ನೃತ್ಯ ಕು.ವಿದ್ವಾನ ಮತ್ತು ತಂಡ ಜಾನಪದ ಗಾಯನ ಕು.ಭಾಗ್ಯಲಕ್ಷ್ಮೀ ಮತ್ತು ತಂಡ ಕು.ಯುಕ್ತ ಅರಳಿ ಮತ್ತು ತಂಡ ಏಕಪಾತ್ರ ಅಭಿನಯ ಪಾತ್ರ ಕು.ದಿವ್ಯಾ (ಅಕ್ಕ ಮಹಾದೇವಿ ಪಾತ್ರ) ನಾಟಕ ಕು.ದೃಷ್ಠಿ ಮತ್ತು ತಂಡ ಚಿಟಗುಪ್ಪಾ ಅಂಗುಲಿಮಾಲಾ ಮನ ಪರಿವತನೆ ಕಲಾ ಪ್ರದರ್ಶನಗಳು ಗಮನ ಸೆಳೆದವು.
ಇದನ್ನೂ ಓದಿ : ಬೀದರ್ | ಮನೆ ಮಹಡಿ ಮೇಲೆ ‘ಡ್ರ್ಯಾಗನ್ ಫ್ರೂಟ್’ ಬೆಳೆದ ಉಪನ್ಯಾಸಕ!
ಸೆಂಟ್ ಜೋಸೆಫ್ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಪ್ರಾಂಶುಪಾಲ ಫಾದರ ವಿಲ್ಸನ್ ಫರ್ನಾಂಡೀಸ್, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ, ಪಶು ವೈದ್ಯಾಧಿಕಾರಿ ಗೌತಮ ಅರಳಿ, ಶಿಕ್ಷಕರಾದ ಬಸವರಾಜ ಮೂಲಗೆ, ದೇವಿದಾಸ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.