ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಸಮಿತಿಯನ್ನು ಎಲ್ಲ ಸರಕಾರಿ, ಅರೆ ಸರಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ ಸ್ಥಾಪಿಸಿ ಜನಜಾಗೃತಿ ಮೂಡಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಮಹಿಳೆಯರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ʼಹತ್ತು ಮಂದಿಗಿಂತ ಹೆಚ್ಚು ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಯಲು ಪಾಶ್ಚ ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕುʼ ಎಂದು ಹೇಳಿದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ ಹಾಗೂ ಹೈಕೋರ್ಟ ನಿರ್ದೇಶನ ನೀಡಿದೆ. ಎಲ್ಲ ಸ್ಥಳಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ಸ್ಥಾಪಿಸುವುದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ಹಿಡಿಯಬಹುದಾಗಿದೆ. ದೌರ್ಜನ್ಯ ತಡೆ ಬಗ್ಗೆ ಅರಿವು ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ಔರಾದ ಪಟ್ಟಣದಲ್ಲಿ ವಾಸಿಸುವ ಅಲೆಮಾರಿ ಜನಾಂಗದವರ ಕಾಲೋನಿಗೆ ಭೇಟಿ ನೀಡಿದ್ದೇನೆ, ಅವರು ಕನಿಷ್ಠ ಮೂಲ ಸೌಕರ್ಯ ಇಲ್ಲದೆ ಹಲವು ವರ್ಷಗಳಿಂದ ಜೀವನ ಸಾಗಿಸುತ್ತಿರುವುದು ನೋವಿನ ಸಂಗತಿ. ಅಲೆಮಾರಿಗಳ ಅಭಿವೃದ್ಧಿಗೆ ಅಗತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಔರಾದ್‌ನ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರಿಗೆ ಗುಣಮಟ್ಟ ಆಹಾರ ಹಾಗೂ ಮೂಲಭೂತ ಸೌಕರ್ಯ ಒದಗಿಸುವಂತೆ ಸೂಚಿಸಿದರು.
ಕಳೆದ 40 ವರ್ಷಗಳಿಂದ ಔರಾದ್ ಪಟ್ಟಣದ ಸೂರಿಲ್ಲದೆ ವಾಸಿಸುವ ಅಲೆಮಾರಿ ಸಮುದಾಯದವರಿಗೆ ಶಿಕ್ಷಣ, ಆರೋಗ್ಯ ಹಾಗೂ ಸಂಪರ್ಕಕ್ಕೆ ಅನುಕೂಲವಾಗುವಂತೆ ಪಟ್ಟಣಕ್ಕೆ ಸಮೀಪವಾಗುವಂತೆ ಭೂಮಿ ಒದಗಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರೊಂದಿಗೆ ಚರ್ಚಿಸಿದರು. ಔರಾದ್‌ನ ತಾಲ್ಲೂಕ ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಎಲ್ಲ ಇಲಾಖೆಗಳ ಬಾಲಕಿಯರ ವಸತಿ ನಿಲಯಗಳ ನಿರ್ವಹಣೆ ಬಗ್ಗೆ ವರದಿ ನೀಡಬೇಕು. ಆಹಾರ, ಆರೋಗ್ಯ, ಸ್ವಚ್ಛತೆ, ಭದ್ರತಾ ವ್ಯವಸ್ಥೆ ಕುರಿತು ಒಂದು ವಾರದಲ್ಲಿ ವರದಿ ಸಲ್ಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಅಲೆಮಾರಿ ಗುಡಿಸಲಿಗೆ ಮಹಿಳಾ ಆಯೋಗದ ಅಧ್ಯಕ್ಷೆ ಭೇಟಿ : ಅಧಿಕಾರಿ ಗೈರು, ತಹಶೀಲ್ದಾರ್‌ಗೆ ತರಾಟೆ
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಸಿಂಧು ಎಸ್., ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಧರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗುರುರಾಜ, ಬ್ರಿಮ್ಸ್ ನಿರ್ದೇಶಕ ಶಿವಕುಮಾರ ಶೆಟಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜ್ಞಾನೇಶ್ವರ ನಿರುಗುಡಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.