ಸರ್ಕಾರದ ಶೈಕ್ಷಣಿಕ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸುಭಾಷ್ ನಾಗುರೆ ಸಲಹೆ ನೀಡಿದರು.
ಬೀದರ್ ನಗರದ ಸಮಾಜ ಕಲ್ಯಾಣ ಇಲಾಖೆ ಮತ್ತು ದಲಿತ ಯೂನಿಟಿ ಮೂವ್ಮೆಂಟ್ ಆಶ್ರಯದಲ್ಲಿ ಆಯೋಜಿಸಿದ್ದ ‘ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವಿಧ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಸೌಲಭ್ಯಗಳ ಕುರಿತು ವಿಚಾರ ಸಂಕಿರಣ’ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಸೌಲಭ್ಯಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ದಲಿತ ಯೂನಿಟಿ ಮೂವ್ಮೆಂಟ್ ಸಂಸ್ಥಾಪಕ ವಿನೋದ್ ರತ್ನಾಕರ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಶಿಕ್ಷಣ ಪಡೆಯಲು ಯಾವುದೇ ಅವಕಾಶ ಇರಲಿಲ್ಲ. ಆದರೆ, ಇಂದು ಎಲ್ಲ ಅವಕಾಶಗಳಿದ್ದರೂ ಬಹುತೇಕ ಜನರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲ. ಸಮಾಜ ಕಲ್ಯಾಣ ಇಲಾಖೆ ವಿಚಾರ ಸಂಕಿರಣ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಸವಲತ್ತು ಕುರಿತು ಮಾಹಿತಿ ನೀಡುವುದು ಶ್ಲಾಘನೀಯ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಂಪಿಯಲ್ಲಿ ಜಿ20 ಶೃಂಗಸಭೆ; ರಾಜ್ಯದ ಬೊಕ್ಕಸಕ್ಕೆ 47 ಕೋಟಿ ರೂ. ಹೊರೆ
ಎಸ್.ಸಿ, ಎಸ್.ಟಿ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದಿದೆ. ಈ ಜನಾಂಗದ ಮಕ್ಕಳಿಗೆ ಗುಣಮಟ್ಟ ಶಿಕ್ಷಣ ಕೊಡಿಸಲು ಕಷ್ಟವಾಗುತ್ತದೆ. ಹೀಗಾಗಿ ಸಮಾಜ ಕಲ್ಯಾಣ ಇಲಾಖೆ ಸೌಲಭ್ಯಗಳು ಹಾಗೂ ವಸತಿ ನಿಲಯಗಳ ಪ್ರಯೋಜನ ಪಡೆದು ಒಳ್ಳೆಯ ಶಿಕ್ಷಣ ಪಡೆಯಬೇಕು. ಎಷ್ಟೇ ಕಠಿಣ ಸಮಸ್ಯೆಗಳಿದ್ದರೂ ಶಿಕ್ಷಣದಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದಲಿತ ಯೂನಿಟಿ ಮೂವ್ಮೆಂಟ್ ಸಂಘಟನೆ ಪದಾಧಿಕಾರಿಗಳಾದ ಮಹಾಂತೇಶ್, ಉಮೇಶ್ ವಾಘರಾಜ್, ಆನಂದ್, ಓಂಕಾರ್, ನಿಲಕಂಠ, ವಿಕಾಸ್ ಸೇರಿದಂತೆ ವಸತಿ ನಿಲಯದ ಮೇಲ್ವಿಚಾರಕ ಗೌತಮ್, ಯಲ್ಲಪಾ, ಹಾಗೂ ವಿದ್ಯಾರ್ಥಿಗಳು ಇದ್ದರು.