ಸರ್ಕಾರಿ ನೌಕರರು ಯಾವುದೇ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ಪಕ್ಷ ಹಾಗೂ ಅಭ್ಯರ್ಥಿಗಳ ಪರ ಹಾಗೂ ವಿರೋಧವಾಗಿ ಪೋಸ್ಟ್, ಕಮೆಂಟ್, ಫಾರ್ವರ್ಡ್ ಮಾಡಿರುವ ದೂರುಗಳು ಬಂದಲ್ಲಿ ಅಮಾನತು ಮಾಡಲಾಗುವುದು ಎಂದು ಬೀದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಗೋವಿಂದ ರೆಡ್ಡಿ ಎಚ್ಚರಿಕೆ ನೀಡಿದರು.
ಬೀದರ್ ನಗರದಲ್ಲಿ ಮಂಗಳವಾರ (ಮಾ.13) ಲೋಕಸಭೆ ಚುನಾವಣೆ ಸಿದ್ಧತಾ ಸಭೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಜತೆಗಿನ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಅವರು ಹೇಳಿದರು. ಚುನಾವಣೆ ಹತ್ತಿರವಿರುವುದರಿಂದ ಸೆಕ್ಟರ್ ಅಧಿಕಾರಿಗಳು ಬೂತ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ‘ಕ್ರಿಟಿಕಲ್’ ಮತ್ತು ‘ವಲ್ನರೇಬಲ್’ ಮತಗಟ್ಟೆಗಳ ಮಾಹಿತಿ ಇರಬೇಕು. ಕೊನೆಯ ಕ್ಷಣದಲ್ಲಿ ಮತಗಟ್ಟೆ ಬದಲಾದರೆ ಅದರ ಮಾಹಿತಿ ಕೊಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆ ನೀತಿ ಸಂಹಿತೆ ಜಾರಿಗೊಂಡ 24 ಗಂಟೆಗಳಲ್ಲಿ ಕಟೌಟ್, ಪೋಸ್ಟರ್, ಬ್ಯಾನರ್ ತೆರವುಗೊಳಿಸಬೇಕು. ನಗರಗಳಲ್ಲಿ ನಗರಸಭೆ, ಗ್ರಾಮಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ತೆರವುಗೊಳಿಸುವಂತೆ ನೋಡಿಕೊಳ್ಳಬೇಕು. ಎಫ್‌ಎಸ್‌ಟಿ ಹಾಗೂ ಎಸ್ಎಸ್‌ಟಿ ತಂಡಗಳು ತಮ್ಮ ಕೆಲಸ ಪ್ರಾರಂಭಿಸಬೇಕು ಎಂದರು.
ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ತಮ್ಮ ಪರ ಬೇರೆಯವರಿಗೆ ಕಳಿಸುವಂತಿಲ್ಲ. ಹಾಗೆ ಮಾಡಿದರೆ ಕ್ರಮ ಜರುಗಿಸಲಾಗುವುದು. ಅನಿವಾರ್ಯ ಕಾರಣಗಳಿದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ಅನುಮತಿ ಇಲ್ಲದೆ ಚುನಾವಣೆ ಪ್ರಚಾರದಲ್ಲಿ ತೊಡಗಿರುವ ವಾಹನಗಳು ಕಂಡು ಬಂದರೆ ಅವುಗಳನ್ನು ಸೀಜ್ ಮಾಡಿ ಚುನಾವಣೆ ಮುಗಿಯುವ ತನಕ ಬಿಡಬಾರದು. ರೋಡ್ ಶೋಗೆ ಅನುಮತಿ ನೀಡುವಾಗ ಹತ್ತು ವಾಹನಗಳ ನಂತರ ನೂರು ಮೀಟರ್ ಅಂತರ ಕಾಯ್ದುಕೊಂಡು ಹೋಗುವಂತೆ ತಿಳಿಸಬೇಕು. ಜನನಿಬೀಡ ಪ್ರದೇಶ, ಮಾರುಕಟ್ಟೆ, ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್‌ನಂತರ ಪ್ರದೇಶಗಳಲ್ಲಿ ಅನುಮತಿ ನೀಡಬಾರದು. ಪ್ರಾಣಿ ಮತ್ತು ಮಕ್ಕಳನ್ನು ರೋಡ್ ಶೋನಲ್ಲಿ ಬಳಸುವಂತಿಲ್ಲ ಎಂದರು.
ಬೇಸಿಗೆ ಇರುವುದರಿಂದ ಕುಡಿಯುವ ನೀರಿಗಾಗಿ ಹೊಸ ಬೋರವೆಲ್ ಕೊರೆಯಬಹುದು. ದನಕರುಗಳಿಗೆ ಮೇವು ಹಾಗೂ ಉದ್ಯೋಗ ಖಾತ್ರಿ ಕೆಲಸ ಇವುಗಳಿಗೆ ಯಾವುದೇ ನಿರ್ಬಂಧಗಳಿಲ್ಲ. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಊಟ ಕೊಡುವ ಹಾಗಿಲ್ಲ. ಆದರೆ, ನೀರು ಮತ್ತು ಮಜ್ಜಿಗೆ ಕೊಡಲು ಅವಕಾಶವಿರುತ್ತದೆ. ಹಳ್ಳಿಗಳಲ್ಲಿ ಮದ್ಯ ಮಾರಾಟವಾಗದಂತೆ ನೋಡಿಕೊಳ್ಳಬೇಕು ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಅಧಿಕಾರಿಗಳು ರಜೆಯ ಮೇಲೆ ಹೋಗುವ ಹಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಇಡುವ ಹಾಗಿಲ್ಲ. ಹಾಗೇನಾದರೂ ಕಂಡು ಬಂದರೆ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಮಾತನಾಡಿ, ಎಲ್ಲರೂ ಒಂದು ತಂಡದ ರೀತಿಯಲ್ಲಿ ಕೆಲಸ ಮಾಡಬೇಕು. ವಿಶೇಷವಾಗಿ ಪೊಲೀಸ್ ಅಧಿಕಾರಿಗಳು ಹೆಚ್ಚು ಗಸ್ತು ತಿರುಗಬೇಕು. ಕರ್ತವ್ಯದ ಸಮಯದಲ್ಲಿ ಏನಾದರೂ ಸಮಸ್ಯೆಗಳಾದರೆ ಮುಂಚಿತವಾಗಿ ನಮ್ಮ ಗಮನಕ್ಕೆ ತರಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಲವೀಶ್ ಒರ್ಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕಿ ಸುರೇಖಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ್, ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸೇರಿದಂತೆ ಚುನಾವಣೆಗೆ ನಿಯೋಜಿತ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.