ಸರ್ಕಾರ ಬಡ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಿದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ ಶೈಲೇಂದ್ರ ಬೆಲ್ದಾಳೆ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಸ್ಥಿತಿಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
“ಗ್ರಾಮೀಣ ಭಾಗದಲ್ಲಿ ಬಡ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ, ಡಿಜಿಟಲ್ ಲೈಬ್ರರಿ, ಡಿಜಿಟಲ್ ಕ್ಲಾಸ್ ಸೌಲಭ್ಯ ಸರ್ಕಾರ ಕಲ್ಪಿಸಿದೆ. ಆದರೆ, ಇಲ್ಲಿನ ಶಿಕ್ಷಣ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯ ಒದಗಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಮಾದರಿ ಪ್ರಾಥಮಿಕ ಶಾಲೆ ಪರಿಸ್ಥಿತಿ ಕಂಡು ದಿಗ್ಭ್ರಮೆಯಾಗಿದೆ. ಶಾಲೆ ಕೊಠಡಿಗಳು ಇದ್ದರು ವಿದ್ಯಾರ್ಥಿಗಳು ಶಾಲೆ ಹೊರಗಡೆ ಕುಳಿತು ಪಾಠ ಕೇಳುತ್ತಿದ್ದಾರೆ ಅಂದರೆ, ಅರ್ಥವೇನು?” ಎಂದು ಕಿಡಿಕಾರಿದ್ದಾರೆ.
“ಬಡವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯ ದೊರೆತರೆ ಮಾತ್ರ ಮಕ್ಕಳು ಶಾಲೆಗೆ ಬರುತ್ತಾರೆ. ಉತ್ತಮ ಸೌಲಭ್ಯ ನೀಡುವುದು ಅಧಿಕಾರಿಗಳ ಕರ್ತವ್ಯ. ಈ ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ಸೌಲಭ್ಯಗಳು ದೊರೆಯುತ್ತಿಲ್ಲ. ನೂತನ ಕಟ್ಟಡ ಎಲ್ಲೆಂದರಲ್ಲಿ ಸೊರುತ್ತಿದೆ, ಶೌಚಾಲಯ ವ್ಯವಸ್ಥೆ ಉತ್ತಮವಾಗಿಲ್ಲ ಕಟ್ಟಡ ನಿರ್ಮಾಣ ಮಾಡಿದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಜೈಲು ಸೇರಿದ ಬಿಇಒ
“ಶಾಲೆಯ ವಿದ್ಯಾರ್ಥಿಗಳ ಅಭ್ಯಾಸದ ಕುರಿತು ಮತ್ತು ವಿಧ್ಯಾರ್ಥಿಗಳ ಸಮಸ್ಯೆ ಕುರಿತು ಮಾಹಿತಿ ಪಡೆದರು ಬಳಿಕ ಡಿಡಿಪಿಐ, ಬಿಇಒ ಅವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಶಾಲೆಯಲ್ಲಿರುವ ವ್ಯವಸ್ಥೆ ಕುರಿತು ತಿಳಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಮಸ್ಯೆ ಸರಿಪಡಿಸಿ ಮಾಹಿತಿ ನೀಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್ ಮಾಶೆಟ್ಟಿ, ಕುಶಲರಾವ ಯಾಬಾ, ನಾಗಭುಷಣ ಕಮಠಾಣಾ, ಬಸವರಾಜ ಕ್ಯಾಸಾ, ಉಮೇಶ ಯಾಬಾ, ವಿಜಯಕುಮಾರ ಬಕ್ಕಚೌಡಿ, ಉದಯ ಮಹಾರಾಜ, ಅಶೋಕ ಪಾಟೀಲ್, ಚಂದ್ರಯ್ಯಾ ಸ್ವಾಮಿ, ವಿಜಯಕುಮಾರ ಸ್ವಾಮಿ, ಪ್ರಶಾಂತ ಕಮಠಾಣಾ, ಸಿದ್ದಾರೂಢ ಭಾಲ್ಕೆ ಸೇರಿದಂತೆ ಕಮಠಾಣ ಗ್ರಾಮಸ್ಥರಿದ್ದರು.