ಕಾರ್ಮಿಕರಿಗೆ ಕನಿಷ್ಠ ₹36 ಸಾವಿರ ವೇತನ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಬೀದರ್ ನಗರದ ಪಾಪನಾಶ ಕಮಾನ್ ಬಳಿಯಿಂದ ಜಿಲ್ಲಾ ಕಾರ್ಮಿಕ ಇಲಾಖೆ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಕಾರ್ಮಿಕ ಸಚಿವರ ಹೆಸರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ಮಹೇಶ ಕುಳಲಿ ಅವರಿಗೆ ಸಲ್ಲಿಸಿದರು.
ಮುಖಂಡರು ಮಾತನಾಡಿ, ʼಕಾರ್ಮಿಕ ಇಲಾಖೆಯು ತನ್ನ ಕನಿಷ್ಠ ವೇತನ ಕರಡು ಪ್ರಕಟಿಸಿದೆ. ಅದು ವೈಜ್ಞಾನಿಕವಾಗಿಲ್ಲ ಎಂಬುದು ನಮ್ಮ ಅಭಿಪ್ರಾಯ. ಇಂದಿನ ಬೆಲೆಗಳು ಹಾಗೂ ಜೀವನ ನಿರ್ವಹಣಾ ವೆಚ್ಚಗಳಿಗೆ ಅನುಗುಣವಾಗಿ ಕನಿಷ್ಠ ವೇತನ ನಿಗದಿಪಡಿಸಿದಂತೆ ಕಾಣುತ್ತಿಲ್ಲ. ಕನಿಷ್ಠ ವೇತನ ನಿಗದಿ ವೇಳೆ ಪತಿ, ಪತ್ನಿ ಹಾಗೂ ಎರಡು ಮಕ್ಕಳಿರುವ ಕುಟುಂಬವನ್ನು 3 ಗ್ರಾಹಕ ಯೂನಿಟ್‌ಗಳಾಗಿ ಪರಿಗಣಿಸಲಾಗಿದೆ. ಇದನ್ನು 3.6 ಗ್ರಾಹಕ ಯೂನಿಟ್‌ಗಳಾಗಿ ಪರಿಗಣಿಸಬೇಕು. ಕನಿಷ್ಠ ₹36 ಸಾವಿರ ವೇತನ ನಿಗದಿ ಪಡಿಸಬೇಕುʼ ಎಂದು ಆಗ್ರಹಿಸಿದರು.
ʼಗ್ರಾಮ ಪಂಚಾಯತಿಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ ʼಸೇವಾ ಹಿರಿತನದʼ ಮಾನ್ಯತೆ ನೀಡಿ, ಮೂಲ ವೇತನಕ್ಕೆ ಶೇ2ರಷ್ಟು ಹೆಚ್ಚಳವನ್ನು ಪ್ರತಿ ವರ್ಷ ಪರಿಗಣಿಸಿ, ಹೆಚ್ಚುವರಿ ಭತ್ಯೆ ನೀಡಬೇಕು. ವೈಜ್ಞಾನಿಕವಾದ ಕನಿಷ್ಠ ಕೂಲಿ ಆದೇಶವನ್ನು ವಿಳಂಬವಿಲ್ಲದೇ ಜಾರಿಗೊಳಿಸಬೇಕುʼ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಜೀವನ ಕನ್ನಳ್ಳೆ, ಸಿಐಟಿಯು ಜಿಲ್ಲಾ ಸಂಚಾಲಕ ಪ್ರಭು ಸಂತೋಷಕರ್, ರಾಜ್ಯ ಸಮಿತಿ ಸದಸ್ಯರಾದ ವಿಜಯಕುಮಾರ ಎಚ್. ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.