ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜುಲೈ 12ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬೃಹತ್ ಲೋಕ ಅದಾಲತ್‌ನ್ನು ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಬನಸೋಡೆ ತಿಳಿಸಿದರು.
ಶುಕ್ರವಾರದಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಜುಲೈ 12 ರಂದು ನಡೆಯುವ ಬೃಹತ್ ಲೋಕ ಅದಾಲತ್‌ನ ಪೂರ್ವಸಿದ್ಧತೆ ಕುರಿತು ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ʼಪ್ರಸ್ತುತ ಚಾಲ್ತಿಯಲ್ಲಿರುವ ಆಸ್ತಿಪಾಲು ವಿಭಾಗ ಜೀವನಾಂಶ, ಚೆಕ್ ಬೌನ್ಸ್, ವಿದ್ಯುತ್ ಪ್ರಕರಣಗಳು ಕಂದಾಯ ಅಪರಾಧಿಕ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವಂತಹ ಪ್ರಕರಣಗಳು, ಕಾರ್ಮಿಕರ ಪ್ರಕರಣಗಳು, ಬ್ಯಾಂಕ್ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥ ಮಾಡಲು ಅವಕಾಶ ಇರುತ್ತದೆʼ ಎಂದು ತಿಳಿಸಿದರು.
ʼ2025ರ ಮಾರ್ಚ್ 3ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಜಿಲ್ಲಾದ್ಯಂತ ಒಟ್ಟು 52,812 ಪ್ರಕರಣಗಳನ್ನು ಲೋಕ ಆದಲಾತ್‌ನಲ್ಲಿ ಇತ್ಯರ್ಥಗೊಳಿಸಲಾಗಿದ್ದು, ಇದರಲ್ಲಿ 10,044 ನ್ಯಾಯಾಲಯದಲ್ಲಿನ ಪೆಂಡಿಂಗ್ ಪ್ರಕರಣಗಳು, 42,768 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಬಾರಿ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಪೇಂಡಿಂಗ್ ಇರುವ ಪ್ರಕರಣಗಳನ್ನು ಇನ್ನಷ್ಟು ಇತ್ಯಾರ್ಥಗೊಳಿಸಲು ಯೋಜನೆ ರೂಪಿಸಲಾಗಿದೆʼ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಯಾದಗಿರಿ | ₹440 ಕೋಟಿ ವೆಚ್ಚದ ಆರೋಗ್ಯ ಆವಿಷ್ಕಾರ ಯೋಜನೆಗೆ ನಾಳೆ ಸಿಎಂ ಸಿದ್ದರಾಮಯ್ಯ ಚಾಲನೆ
ʼಜಿಲ್ಲೆಯಲ್ಲಿ ಒಟ್ಟು 29,122 ಪ್ರಕರಣಗಳು ಪೆಂಡಿಂಗ್ ಇದ್ದು, ಹೆಚ್ಚು ಪ್ರಕರಣಗಳನ್ನು ರಾಜಿ ಮಾಡುವ ಗುರಿ ಹೊಂದಿದ್ದೇವೆ. ಎಲ್ಲ ಪೂರ್ವತಯಾರಿ ಮಾಡಿಕೊಂಡಿದ್ದೇವೆ. ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಕಕ್ಷಿದಾರನಿಗೆ ನ್ಯಾಯಾಲಯ ಶುಲ್ಕ ವಾಪಸ್ ಸಿಗಲಿದೆ, ಮೇಲ್ಮನವಿ ಮಾಡಲು ಅವಕಾಶ ಇರುವುದಿಲ್ಲ. ಇಬ್ಬರೂ ಪಕ್ಷಗಾರರು ತಮ್ಮ ದ್ವೇಷ ಮರೆತು ಸುಮಧುರ ಬಾಂಧವ್ಯ ಹೊಂದುವ ಅವಕಾಶ ಇರುತ್ತದೆ. ಯಾವುದೇ ಖರ್ಚು ವೆಚ್ಚ ಇಲ್ಲದೆ ಶೀಘ್ರವಾಗಿ ಪ್ರಕರಣಗಳು ಇತ್ಯರ್ಥವಾಗುತ್ತವೆʼ ಎಂದು ವಿವರಿಸಿದರು.